ಹೊಸದಿಲ್ಲಿ: ಭಾರತೀಯ ಸಶಸ್ತ್ರ ಪಡೆಗಳಿಗೆ ಹೆಚ್ಚಿನ ಉತ್ತೇಜನ ನೀಡುವ ಹಾಗೂ ಆತ್ಮನಿರ್ಭರ ಭಾರತದ ನಿರ್ಮಾಣದ ನಿಟ್ಟಿನಲ್ಲಿ ಬರೋಬ್ಬರಿ 8,722.38 ಕೋಟಿ ರೂ.ಗಳ ರಕ್ಷಣಾ ಸಾಮಗ್ರಿಗಳ ಖರೀದಿ ಪ್ರಸ್ತಾಪಕ್ಕೆ ರಕ್ಷಣಾ ಖರೀದಿ ಮಂಡಳಿ(ಡಿಎಸಿ) ಒಪ್ಪಿಗೆ ನೀಡಿದೆ.
ಮಂಗಳವಾರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ನೇತೃತ್ವದಲ್ಲಿ ನಡೆದ ಡಿಎಸಿ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ವಿಶೇಷವೆಂದರೆ, ಈ ಪೈಕಿ ಕೆಲವನ್ನು ಭಾರತೀಯ ಪಿಎಸ್‌ಯು(ಸರಕಾರಿ ಸ್ವಾಮ್ಯದ ಸಂಸ್ಥೆಗಳು) ಗಳಿಂದಲೇ ಖರೀದಿ ಮಾಡಲು ನಿರ್ಧರಿಸ ಲಾಗಿದೆ.
ಎಚ್‌ಎಎಲ್, ಬಿಎಚ್‌ಇಎಲ್‌ನಿಂದ ಖರೀದಿ: ಪ್ರಸ್ತಾವನೆಯ ಪ್ರಕಾರ, ಭಾರತೀಯ ವಾಯುಪಡೆಗೆ ಅಗತ್ಯವಾಗಿರುವ 106 ತರಬೇತಿ ವಿಮಾನಗಳನ್ನು ಸರಕಾರಿ ಸ್ವಾಮ್ಯದ ಹಿಂದುಸ್ಥಾನ್ ಏರೋನಾಟಿಕ್ಸ್ ಲಿಮಿಟೆಡ್(ಎಚ್‌ಎಎಲ್)ನಿಂದ ಖರೀದಿಸಲಾಗುತ್ತದೆ. ಈ ವಿಮಾನಗಳನ್ನು ವಾಯುಪಡೆಯ ಯೋಧರ ಆರಂಭಿಕ ತರಬೇತಿಗೆ ಬಳಸಲಾಗುತ್ತದೆ. ಅದೇ ರೀತಿ, ಸೂಪರ್ ರ್ಯಾಪಿಡ್ ಗನ್ ಮೌಂಟ್(ಎಸ್‌ಆರ್‌ಜಿಎಂ)ನ ಮೇಲ್ದರ್ಜೆಗೇರಿಸಿದ ಆವೃತ್ತಿಯನ್ನು ಬಿಎಚ್‌ಇಎಲ್‌ನಿಂದ ಖರೀದಿ ಸಲು ಡಿಎಸಿ ನಿರ್ಧರಿಸಿದೆ.
ನೌಕಾಪಡೆ ಹಾಗೂ ಕರಾವಳಿ ರಕ್ಷಕ ಪಡೆಯ ಸಮರನೌಕೆಗಳಲ್ಲಿ ಇದನ್ನು ಅಳವಡಿ ಸಲಾಗುತ್ತದೆ.
ಇದಲ್ಲದೆ, ಸೇನೆಗೆ ಅಗತ್ಯ ವಿರುವ 125 ಎಂಎಂ ಎಪಿಎಫ್ಎಸ್‌ಡಿಎಸ್(ಆರ್ಮರ್ ಪಿಯ ರ್ಸಿಂಗ್ ಫಿನ್ ಸ್ಟೆಬಿಲೈಸ್ಡ್ ಡಿಸ್ಕಾರ್ಡಿಂಗ್ ಸ್ಯಾಬೋಟ್) ಖರೀದಿಗೂ ಒಪ್ಪಿಗೆ ನೀಡಿದೆ.
ಮೇಕ್ ಇನ್ ಇಂಡಿಯಾಗೆ ಆದ್ಯತೆ ನೀಡುವ ಸಲುವಾಗಿ 101 ರಕ್ಷಣಾ ಸಾಮಗ್ರಿಗಳ ಆಮದಿಗೆ ಕೇಂದ್ರ ಸರಕಾರ ನಿರ್ಬಂಧ ಹೇರಿದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ. ರಕ್ಷಣಾ ಉತ್ಪಾದನೆಯಲ್ಲಿ ಭಾರತವು ಸ್ವಾವಲಂಬನೆ ಸಾಧಿಸಬೇಕೆಂಬ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿದ್ದು, ಮುಂದಿನ ದಿನಗಳಲ್ಲಿ ಇನ್ನ ಷ್ಟು ಸಾಮಗ್ರಿಗಳಿಗೆ ನಿರ್ಬಂಧ ಹೇರಲಾಗುತ್ತದೆ ಎಂದು ಸಚಿವ ರಾಜನಾಥ್ ತಿಳಿಸಿದ್ದರು.