ಬೆಂಗಳೂರು: ದಿಲ್ಲಿಯ ಕರ್ನಾಟಕ ಸಂಘ ಭವನದ ಆವರಣದಲ್ಲಿ ವರ್ಷದೊಳಗೆ ವರನಟ ಡಾ| ರಾಜ್‌ಕುಮಾರ್ ಅವರ ಪ್ರತಿಮೆ ಅನಾವರಣ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಅನಂತಕುಮಾರ್ ತಿಳಿಸಿದರು. ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಸೋಮವಾರ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಕರ್ನಾಟಕ ಚಲನಚಿತ್ರ ಅಕಾಡೆಮಿ ಸಂಯುಕ್ತವಾಗಿ ಹಮ್ಮಿಕೊಂಡಿದ್ದ ಡಾ| ರಾಜ್‌ಕುಮಾರ್ ಅವರ 89ನೇ ಜನ್ಮದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು, ದಿಲ್ಲಿಯಲ್ಲಿ ನಿರ್ಮಿಸಲಾದ ಕರ್ನಾಟಕ ಸಂಘದ ಭವನವನ್ನು ಈ ಹಿಂದೆ ಸ್ವತಃ ಡಾ| ರಾಜ್‌ಕುಮಾರ್ ಉದ್ಘಾಟಿಸಿದ್ದರು. ಈಗ ಅದೇ ಭವನದ ಆವರಣದಲ್ಲಿ ರಾಜ್ ಪ್ರತಿಮೆಯನ್ನು ಅನಾವರಣಗೊಳಿಸಲಾಗುವುದು ಎಂದು ಹೇಳಿದರು. ರಾಜ್ ಪ್ರತಿಮೆ ಅನಾವರಣ ವಿಚಾರದಲ್ಲಿ ರಾಜ್ಯ ಸರಕಾರ ಕೂಡ ಕೈಜೋಡಿಸಬೇಕು. ರಾಜ್‌ಕುಮಾರ್ ಅವರ ಮುಂದಿನ ಜನ್ಮದಿನಾಚರಣೆ ಒಳಗೆ ಈ ಪ್ರತಿಮೆ ಅನಾವರಣಗೊಳಿಸಲಾಗುವುದು ಎಂದು ತಿಳಿಸಿದರು.
‘ಡಿಜಿಟಲ್ ರಾಜ್’
ಡಾ| ರಾಜ್‌ಕುಮಾರ್ ಅವರನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ನಿಟ್ಟಿನಲ್ಲಿ ಅವರೆಲ್ಲ ಚಿತ್ರಗಳು, ಹಾಡುಗಳನ್ನು ವಿಶ್ಲೇಷಿಸಿ, ಬೇರೆ ಬೇರೆ ಭಾಷೆಗಳಿಗೆ ಭಾಷಾಂತರಿಸುವ ಮೂಲಕ ರಾಜ್‌ಕುಮಾರ್ ಅವರ ಬದುಕನ್ನು ಪಸರಿಸುವ ಕೆಲಸ ಆಗಬೇಕಿದೆ. ಈ ನಿಟ್ಟಿನಲ್ಲಿ ‘ಡಿಜಿಟಲ್ ರಾಜ್’ ಯೋಜನೆಯನ್ನು ಕೈಗೆತ್ತಿಕೊಳ್ಳುವ ಆವಶ್ಯಕತೆ ಇದೆ ಎಂದು ಅಭಿಪ್ರಾಯಪಟ್ಟರು.