Advertisement

ಚಾಮರಾಜನಗರದಲ್ಲಿ ರಾಜಕುಮಾರ್ ಮ್ಯೂಸಿಯಂ ಸ್ಥಾಪಿಸಬೇಕು: ಮಂಡ್ಯ ರಮೇಶ್

05:11 PM Oct 09, 2022 | Team Udayavani |

ಚಾಮರಾಜನಗರ: ವರನಟ ಡಾ. ರಾಜ್‌ಕುಮಾರ್ ಅವರ ತವರು ಜಿಲ್ಲೆಯಾದ ಚಾಮರಾಜನಗರದಲ್ಲಿ ರಾಜ್‌ಕುಮಾರ್ ಅವರ ಮ್ಯೂಸಿಯಂ ಸ್ಥಾಪಿಸಲು ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ರಂಗಕರ್ಮಿ, ಚಲನಚಿತ್ರ ನಟ ಮಂಡ್ಯ ರಮೇಶ್ ಮನವಿ ಮಾಡಿದರು.

Advertisement

ನಗರದ ರೋಟರಿ ಭವನದಲ್ಲಿ ಜಿಲ್ಲೆಯ ಬೆಳ್ಳಿ ಹಬ್ಬದ ಅಂಗವಾಗಿ ರೋಟರಿ ಸಂಸ್ಥೆ, ರಂಗವಾಹಿನಿ ಹಾಗೂ ಡಾ. ಎಸ್ ಪಿ ಬಾಲಸುಬ್ರಹ್ಮಣ್ಯಂ ಗಾನಗಂಧರ್ವ ಸಾಂಸ್ಕೃತಿಕ ಕಲಾ ವೇದಿಕೆ ಹಮ್ಮಿಕೊಂಡಿದ್ದ, ಕನ್ನಡ ಚಲನಚಿತ್ರರಂಗಕ್ಕೆ ಚಾಮರಾಜನಗರ ಜಿಲ್ಲೆಯ ಕೊಡುಗೆ ವಿಶೇಷ ಉಪನ್ಯಾಸ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.

ಚಾಮರಾಜನಗರ ಜಾನಪದ ಸಮೃದ್ಧಿಯುಳ್ಳ ಜಿಲ್ಲೆ. ವೃತ್ತಿ ರಂಗಭೂಮಿಗೆ ತನ್ನದೇ ಆದ ವಿಶೇಷ ಕೊಡುಗೆಯನ್ನು ಚಾಮರಾಜನಗರ ಜಿಲ್ಲೆ ನೀಡಿದೆ. ಸಿಂಗಾನಲ್ಲೂರು ಪುಟ್ಟಸ್ವಾಮಯ್ಯನವರು ಆ ಕಾಲಕ್ಕೆ ಅತ್ಯಂತ ಪ್ರತಿಭಾವಂತ ರಂಗಭೂಮಿ ಕಲಾವಿದರಾಗಿದ್ದರು.  ಪ್ರಪಂಚಕ್ಕೆ ಡಾ. ರಾಜ್‌ಕುಮಾರ್ ಅವರನ್ನು ಕೊಡುಗೆಯಾಗಿ ನೀಡಿದವರು ಸಿಂಗಾನಲ್ಲೂರು ಪುಟ್ಟಸ್ವಾಮಯ್ಯನವರು. ಅವರು ತಮ್ಮ ಮಗನಿಗೆ ವಿನಯವನ್ನು ಹೇಳಿಕೊಟ್ಟರು. ರಾಜ್‌ಕುಮಾರ್ ಅವರು ಏನಾಗಿದ್ದರೋ ಅದಕ್ಕೆ ಪುಟ್ಟಸ್ವಾಮಯ್ಯನವರು ಕಾರಣ. ರಾಜ್‌ಕುಮಾರ್ ಅವರು ಎಲ್ಲೆಡೆಯೂ ತಮ್ಮ ತಂದೆಯವರ ಕುರಿತೇ ಹೇಳಿಕೊಳ್ಳುತ್ತಿದ್ದರು. ಇಂಥ ಪುಟ್ಟಸ್ವಾಮಯ್ಯನವರ ತವರು ಚಾಮರಾಜನಗರ ಜಿಲ್ಲೆ ಎಂದು ಅವರು ಹೇಳಿದರು.

ವರನಟ ಡಾ. ರಾಜ್‌ಕುಮಾರ್ ಕೇವಲ ನಟರಾಗಿರಲಿಲ್ಲ. ಕನ್ನಡಿಗರಿಗೆ ಕನ್ನಡತನವನ್ನು ನೆನಪಿಸಿದರು. ಅವರ ಸಿನಿಮಾಗಳ ಮೂಲಕ ಅವರ ಸಂಭಾಷಣೆಯ ಮೂಲಕ ಕನ್ನಡದ ಸೊಬಗನ್ನು ಹೆಚ್ಚಿಸಿದರು. ಅವರ ನಡವಳಿಕೆ ಮೂಲಕ ಇತರರಿಗೂ ಮಾದರಿಯಾದರು. ಪ್ರಪಂಚವೇ ಮೆಚ್ಚುವಂಥ ಅಪರೂಪದ ಕಲಾವಿದರಾದರು. ಬಹುಮುಖ ಪ್ರತಿಭೆಯ ಡಾ. ರಾಜ್‌ಕುಮಾರ್ ಅವರು ಭಾರತೀಯ ಚಲನಚಿತ್ರರಂಗದಲ್ಲೇ ಅಪರೂಪದ ಕಲಾವಿದರು. ಅವರ ತವರು ಜಿಲ್ಲೆಯಾದ ಚಾಮರಾಜನಗರದಲ್ಲಿ ಅವರ ಕುರಿತ ಮ್ಯೂಸಿಯಂ ನಿರ್ಮಾಣವಾಗಬೇಕು. ಆ ವಸ್ತು ಸಂಗ್ರಹಾಲಯದಲ್ಲಿ ರಾಜ್‌ಕುಮಾರ್ ಅವರಿಗೆ ಸಂಬಂಧಿಸಿದ ವಸ್ತುಗಳು, ಉಡುಪುಗಳು, ಅವರ ನೆನಪುಗಳು, ಅಪರೂಪದ ಛಾಯಾಚಿತ್ರಗಳು ಇರಬೇಕು. ಎಲ್ಲೆಡೆಯಿಂದಲೂ ಅದನ್ನು ನೋಡಲು ಜನರು ಚಾಮರಾಜನಗರಕ್ಕೆ ಬರುವಂತಾಗಬೇಕು. ರಾಜ್ಯ ಸರ್ಕಾರ ಮ್ಯೂಸಿಯಂ ನಿರ್ಮಿಸಲು ಮುಂದಾಗಬೇಕು ಎಂದು ಮನವಿ ಮಾಡಿದರು.

ಕಾಂತಾರದಂಥ ಸಿನಿಮಾಗಳು ಬರಬೇಕು: ಚಲನಚಿತ್ರ ನಿರ್ದೇಶಕ, ಲೇಖಕ ಪ್ರಕಾಶ್ ರಾಜ್ ಮೇಹು ಮಾತನಾಡಿ, ಸಿನಿಮಾಗಳಿಗೆ 50-100 ಕೋಟಿ ರೂ. ಬಂಡವಾಳ ಹಾಕಿ, 100 ಕೋಟಿ ರೂ. ಬಂತು ಎಂದು ಹೇಳಿಕೊಳ್ಳುವುದು ಹೆಚ್ಚುಗಾರಿಕೆಯಲ್ಲ. ನಮ್ಮ ಸಿನಿಮಾಗಳು ನಮ್ಮ ಪರಿಸರ, ನಮ್ಮ ಆಚಾರ ವಿಚಾರ, ನಮ್ಮ ಸಂಸ್ಕೃತಿಯನ್ನು ಬಿಂಬಿಸಬೇಕು. ಇತ್ತೀಚಿಗೆ ಬಿಡುಗಡೆಯಾಗಿರುವ ರಿಷಬ್ ಶೆಟ್ಟಿಯವರ ಕಾಂತಾರ ಸಿನಿಮಾ ಇದಕ್ಕೆ ಉತ್ತಮ ಉದಾಹರಣೆ. ಅದು ಕರಾವಳಿಯ ಕಥೆಯನ್ನು ಇಡೀ ಜಗತ್ತಿಗೆ ತೋರಿಸಿದೆ. ಕೆಜಿಎಫ್ ನಂತಹ ಸಿನಿಮಾಗಳನ್ನು ಯಾವುದೇ ಭಾಷೆಯ ಜನರು ನೋಡಿದರೂ ಅದು ಅಲ್ಲಿಯ ಸಿನಿಮಾ ಎಂದೆನಿಸಿಕೊಳ್ಳುತ್ತದೆ, ಕನ್ನಡ ಸಿನಿಮಾ ಎನಿಸುವುದಿಲ್ಲ ಎಂದು ಅಭಿಪ್ರಾಯಪಟ್ಟರು.

Advertisement

ಪ್ರಾದೇಶಿಕ ಭಾಷೆಯನ್ನು ಬಳಸಿ ಸಿನಿಮಾ ಮಾಡಿದರೆ ಅದು ಬೇರೆಯವರಿಗೆ ಅರ್ಥವಾಗುವುದಿಲ್ಲ. ಜನರು ನೋಡುವುದಿಲ್ಲ ಎಂಬ ವಿಚಿತ್ರ ಕಟ್ಟುಪಾಡುಗಳನ್ನು ನಾವೇ ಹಾಕಿಕೊಂಡಿದ್ದೇವೆ. ಸಿನಿಮಾಗೆ ಒಂದು ಭಾಷೆ ಇದೆ. ನಾವು ಮಲಯಾಳಂ ಭಾಷೆ ಅರ್ಥವಾಗದಿದ್ದರೂ, ಮಲಯಾಳಂ ಸಿನಿಮಾ ನೋಡಿ ಅರ್ಥ ಮಾಡಿಕೊಂಡು ಮೆಚ್ಚುತ್ತೇವೆ. ಹೀಗಿರುವಾಗ ಕರ್ನಾಟಕದ ಇನ್ನೊಂದು ಪ್ರದೇಶದ ಭಾಷೆ ಅರ್ಥವಾಗುವುದಿಲ್ಲವೇ? ಎಂದು ಪ್ರಶ್ನಿಸಿದರು.

ಚಾಮರಾಜನಗರದ ಭಾಷೆಯನ್ನು ಸಮರ್ಥವಾಗಿ, ಸಂಪೂರ್ಣವಾಗಿ ಬಳಸಿಕೊಂಡಿರುವ ಸಿನಿಮಾಗಳು ಬರಬೇಕಿದೆ. ನನ್ನ ಮುಂದಿನ ನಿರ್ದೇಶನದ ಚಿತ್ರದಲ್ಲಿ ಚಾಮರಾಜನಗರದ ಭಾಷೆಯನ್ನೇ ಬಳಸಿಕೊಂಡು ಸಿನಿಮಾ ಮಾಡುತ್ತೇನೆ ಎಂದು ಪ್ರಕಾಶ್ ರಾಜ್ ಮೇಹು ತಿಳಿಸಿದರು.

ರಂಗವಾಹಿನಿ ಅಧ್ಯಕ್ಷ ಸಿ.ಎಂ. ನರಸಿಂಹಮೂರ್ತಿ ಮಾತನಾಡಿ, ಚಾಮರಾಜನಗರ ಜಿಲ್ಲೆ ಚಲನಚಿತ್ರರಂಗಕ್ಕೆ ಡಾ. ರಾಜ್‌ಕುಮಾರ್ ಎಂಬ ಅದ್ಭುತ ಕಲಾವಿದರನ್ನು ನೀಡಿದೆ. ಅವರ ಪುತ್ರರಾದ ಶಿವರಾಜ್‌ಕುಮಾರ್, ಪುನೀತ್ ರಾಜ್‌ಕುಮಾರ್, ರಾಘವೇಂದ್ರ ರಾಜ್‌ಕುಮಾರ್, ನಿರ್ಮಾಪಕಿ ಪಾರ್ವತಮ್ಮ ರಾಜ್‌ಕುಮಾರ್ ಇವರೆಲ್ಲ ನಮ್ಮ ಜಿಲ್ಲೆಯವರೆಂಬುದು ನಮಗೆಲ್ಲ ಹೆಮ್ಮೆಯ ವಿಷಯವಾಗಿದೆ ಎಂದರು.

ಇವರಲ್ಲದೇ ಹಿರಿಯ ನಟ ಸುಂದರಕೃಷ್ಣ ಅರಸು, ನಟರಾದ  ಅವಿನಾಶ್, ಡಾರ್ಲಿಂಗ್ ಕೃಷ್ಣ, ನಾಗಭೂಷಣ್, ನಿರ್ದೇಶಕರಾದ ಬಸವರಾಜ ಕೆಸ್ತೂರ್,  ಹ.ಸೂ. ರಾಜಶೇಖರ್, ಆನಂದ್ ಪಿ ರಾಜು, ಎಸ್. ಮಹೇಂದರ್, ಮಹೇಶ್‌ಬಾಬು, ಚೇತನ್‌ಕುಮಾರ್, ಸಂಭಾಷಣೆಕಾರ ಬಿ.ಎ. ಮಧು, ಸಂಕಲನಕಾರ ಅಮ್ಮನಪುರ ಸ್ವಾಮಿ, ಮಿಮಿಕ್ರಿ ಗೋಪಿ, ಘಟಂ ಕೃಷ್ಣ ಇನ್ನೂ ಹಲವಾರು ಕಲಾವಿದರು ಚಾಮರಾಜನಗರ ಜಿಲ್ಲೆಯವರು. ಇಂಥ ಪ್ರತಿಭಾವಂತ ಕಲಾವಿದರನ್ನು ಚಾಮರಾಜನಗರ ಜಿಲ್ಲೆ ಕನ್ನಡ ಚಿತ್ರರಂಗಕ್ಕೆ ನೀಡಿದೆ ಎಂದು ಹೇಳಿದರು.

ರೋಟರಿ ಕ್ಲಬ್ ಅಧ್ಯಕ್ಷ ಕೆಂಪನಪುರ ಮಹದೇವಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ಜೆಎಸ್‌ಎಸ್ ಕಾಲೇಜು ಸಾರ್ವಜನಿಕ ಸಂಪರ್ಕ ಅಧಿಕಾರಿ ಆರ್.ಎಂ. ಸ್ವಾಮಿ, ಸಿಂಹ ಚಿತ್ರಮಂದಿರದ ಮಾಲೀಕ ಎ. ಜಯಸಿಂಹ, ಪಶುವೈದ್ಯಕೀಯ ಇಲಾಖೆ ಸಹಾಯಕ ನಿರ್ದೇಶಕ ಸುಗಂಧರಾಜ್, ಜಿ.ಪಂ.ಲೆಕ್ಕಾಧಿಕಾರಿ ಎಚ್.ಎಸ್. ಗಂಗಾಧರ್, ರೋಟರಿ ಕಾರ್ಯದರ್ಶಿ ಕಾಗಲವಾಡಿ ಚಂದ್ರು, ಎಸ್‌ಪಿಬಿ ವೇದಿಕೆ ಗೌರವ ಅಧ್ಯಕ್ಷ ಸುರೇಶ್‌ಗೌಡ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಚಿತ್ರ ಕಲಾವಿದ ಮುಡಿಗುಂಡ ಮೂರ್ತಿ ಅವರು ಮಂಡ್ಯ ರಮೇಶ್ ಅವರಿಗೆ ಪೆನ್ಸಿಲ್ ಸ್ಕೆಚ್‌ನಲ್ಲಿ ರಚಿಸಿದ ಚಿತ್ರವನ್ನು ಕೊಡುಗೆಯಾಗಿ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next