ಮಯೂರ್ ಪಟೇಲ್ ಎಲ್ಲೋ ಸುದ್ದಿಯೇ ಇಲ್ಲ ಅಂದವರಿಗೆ ಮತ್ತೆ ಅವರ ಸದ್ದು ಕೇಳಿಸುತ್ತಿದೆ. ಹೌದು, ಮಯೂರ್ ಪಟೇಲ್ ಈಗ ಹೊಸ ಚಿತ್ರದ ಮೂಲಕ ಮತ್ತೂಮ್ಮೆ ತೆರೆ ಮೇಲೆ ಕಾಣಿಸಿಕೊಳ್ಳಲು ಅಣಿಯಾಗುತ್ತಿದ್ದಾರೆ. “ರಾಜೀವ’ ಮಯೂರ್ ಪಟೇಲ್ ಅಭಿನಯದ ಹೊಸ ಚಿತ್ರ. ಈ ಚಿತ್ರಕ್ಕೆ “ಐಎಎಸ್ ಯುವ ರೈತ’ ಎಂಬ ಅಡಿಬರಹವಿದೆ. ಅಲ್ಲಿಗೆ ಇದೊಂದು ರೈತರ ಕುರಿತಾದ ಕಥೆ ಅಂದುಕೊಳ್ಳಲ್ಲಡ್ಡಿಯಿಲ್ಲ. ಹಾಗಾಗಿ, ಇತ್ತೀಚೆಗೆ ಚಿತ್ರದ ಟೀಸರ್ ಬಿಡುಗಡೆ ಕಾರ್ಯಕ್ರಮಕ್ಕೆ ರೈತಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಮುಖ್ಯ ಆಕರ್ಷಣೆಯಾಗಿದ್ದರು. ಜೊತೆಗೆ ರಾಜಕಾರಣಿ ವೀರಯ್ಯ ಇತರರು ಸಾಕ್ಷಿಯಾಗಿ, ಚಿತ್ರದ ಟೀಸರ್ ವೀಕ್ಷಿಸಿ, “ರಾಜೀವ’ ರೈತರ ಸಮಸ್ಯೆಗಳಿಗೊಂದು ಪರಿಹಾರ ಸೂಚಿಸುವಂತಹ ಚಿತ್ರವಾಗಿ ಹೊರಹೊಮ್ಮಲಿ’ ಎಂದು ಹಾರೈಸಿದರು.
ಈ ಹಿಂದೆ ಹಲವು ಕಿರುಚಿತ್ರ ನಿರ್ದೇಶಿಸಿದ್ದ ಮಂಜು ಅವರಿಗೆ ಇದು ಮೊದಲ ನಿರ್ದೇಶನದ ಚಿತ್ರ. ಸಿನಿಮಾ ಕುರಿತು ಹೇಳಲು ಮೈಕ್ ಹಿಡಿದ ಮಂಜು, ಹೇಳಿದ್ದಿಷ್ಟು. “ನಾನೊಂದು ಕಿರುಚಿತ್ರ ಮಾಡಿದ್ದೆ. ಅದಕ್ಕೊಂದು ಪ್ರಶಸ್ತಿಯೂ ಬಂದಿತ್ತು. ಅದನ್ನು ನೋಡಿದ ನಿರ್ಮಾಪಕದ್ವಯರಾದ ರಮೇಶ್ ಮತ್ತು ಕಿರಣ್ “ರಾಜೀವ’ ಚಿತ್ರದ ಕಥೆ ಕೇಳಿ ಅವಕಾಶ ಕೊಟ್ಟರು. ಇದೊಂದು ರೈತರ ಕುರಿತ ಚಿತ್ರ. ಇಲ್ಲಿ ಮಯೂರ್ ಪಟೇಲ್ ರೈತರಾಗಿ ಮತ್ತು ಐಎಎಸ್ ಓದಿರುವ ವ್ಯಕ್ತಿಯಾಗಿಯೂ ಕಾಣಿಸಿಕೊಂಡಿದ್ದಾರೆ. ಒಟ್ಟಾರೆ, ಅವರಿಗಿಲ್ಲಿ ಮೂರು ವಿಭಿನ್ನ ಗೆಟಪ್ ಇವೆ. 60 ವರ್ಷದ ಅಜ್ಜನಾಗಿ, 40 ವರ್ಷದ ವ್ಯಕ್ತಿಯಾಗಿ ಮತ್ತು ಯುವಕನಾಗಿ ಕಾಣಿಸಿಕೊಂಡಿದ್ದಾರೆ. ಹಳ್ಳಿಯ ಎಲ್ಲಾ ಯುವಕರು ನಗರದಲ್ಲೇ ಇದ್ದರೆ, ಹಳ್ಳಿಗೆ ಬಂದು ವ್ಯವಸಾಯ ಮಾಡೋರು ಯಾರು? ಎಂಬ ವಿಷಯ ಇಟ್ಟುಕೊಂಡು ಮಾಡಿರುವ ಚಿತ್ರದಲ್ಲಿ ಸಾಕಷ್ಟು ಅಂಶಗಳಿವೆ. ರೈತರ ಸಂಕಷ್ಟಗಳಿಗೆ ಪರಿಹಾರ ಸೂಚಿಸುವ ಅಂಶಗಳಿವೆಯಾ ಇಲ್ಲವಾ ಎಂಬುದಕ್ಕೆ ಚಿತ್ರ ನೋಡಬೇಕು’ ಎಂಬುದು ನಿರ್ದೇಶಕರ ಮಾತು.
ವರ್ಷಗಳ ಬಳಿಕ ಕಾಣಿಸಿಕೊಂಡ ಮಯೂರ್ ಪಟೇಲ್ ಅವರಿಗೆ “ರಾಜೀವ’ ಹೊಸತನದ ಚಿತ್ರ ಆಗಲಿದೆ ಎಂಬ ನಂಬಿಕೆ. ಅವರಿಲ್ಲಿ ಮೂರು ರೀತಿಯಾಗಿ ಕಾಣಿಸಿಕೊಂಡಿರುವುದಕ್ಕೆ ಖುಷಿ ಇದೆಯಂತೆ. ಇಂಥದ್ದೊಂದು ಪಾತ್ರ ಮಾಡಬೇಕು ಎಂಬ ಆಸೆ ಎಲ್ಲೋ ಒಂದು ಕಡೆ ಇರುವಾಗಲೇ, ನಿರ್ದೇಶಕರು ಈ ಕಥೆ ಹೇಳಿ ಅವರನ್ನು ನಟಿಸುವಂತೆ ಮಾಡಿದ್ದಾರೆ. ಈಗಾಗಲೇ ಚಿತ್ರದ ಟ್ರೇಲರ್‌ಗೆ ಮೆಚ್ಚುಗೆ ಸಿಕ್ಕಿದೆ. ಆರಂಭದಲ್ಲಿ ನನಗೂ ಹೊಸಬರ ತಂಡ ಹೇಗೆ ಕೆಲಸ ಮಾಡುತ್ತೋ ಎಂಬ ಅನುಮಾನವಿತ್ತು. ಚಿತ್ರೀಕರಣ ವೇಳೆ, ಅನುಭವ ತಂಡ ಜೊತೆಗೆ ಕೆಲಸ ಮಾಡಿದ್ದು ಖುಷಿಯಾಯ್ತು. ಇಲ್ಲಿ ನನ್ನ ಅಪ್ಪ ರೈತ, ಐಎಎಸ್ ಓದಿರುವ ನಾನೂ ರೈತನಾಗಬೇಕೆಂದುಕೊಂಡು ಬರುತ್ತೇನೆ. ನನ್ನ ಮಗ ಕೂಡ ರೈತನಾಗ್ತಾನೆ ಎಂಬ ನಂಬಿಕೆಯಲ್ಲೇ ವ್ಯವಸಾಯಕ್ಕಿಳಿಯುತ್ತೇನೆ. ಮುಂದೆ ಏನಾಗುತ್ತೆ ಎಂಬುದು ಕಥೆ. ಇಲ್ಲೊಂದು ಸಂದೇಶವೂ ಇದೆ. ಎಲ್ಲರಿಗೂ ಇದು ರುಚಿಸಲಿದೆ ಎಂಬ ವಿಶ್ವಾಸದಿಂದಲೇ ಚಿತ್ರ ಬಿಡುಗಡೆ ತಯಾರಿ ಮಾಡಿಕೊಳ್ಳುತ್ತಿದ್ದೇವೆ’ ಎನ್ನುತ್ತಾರೆ ಮಯೂರ್ ಪಟೇಲ್.
ನಿರ್ಮಾಪಕ ರಮೇಶ್, “ರಾಜೀವ’ ಚಿತ್ರ ಮಾಡೋಕೆ ಕಾರಣಗಳನ್ನು ಹೇಳಿಕೊಂಡರು. ಉಳಿದಂತೆ ನಾಯಕಿ ಅಕ್ಷತಾ ಶ್ರೀಧರ್ ಶಾಸ್ತ್ರಿ, ಕಿರಣ್, ಕಾಕೋಡು ರಾಮಯ್ಯ, ಸಂಗೀತ ನಿರ್ದೇಶಕ ರೋಹಿತ್,ಶೇಖರ್, ವರ್ಧನ್ ತೀರ್ಥಹಳ್ಳಿ ಸೇರಿದಂತೆ ಇತರರು ಇದ್ದರು.