ಹೊಸದಿಲ್ಲಿ : ಮೂರು ಸಾವಿರ ಸಿಕ್ಖರ ಮಾರಣ ಹೋಮ ನಡೆದಿದ್ದ 1984ರ ಸಿಕ್ಖ ವಿರೋಧಿ ದಂಗೆಯಲ್ಲಿ ಕಾಂಗ್ರೆಸ್ ಪಾತ್ರ ಇರಲಿಲ್ಲ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿರುವುದನ್ನು ಸುತರಾಂ ಒಪ್ಪದ ದಿಲ್ಲಿ ಬಿಜೆಪಿ ವಕ್ತಾರ ತಜೀಂದರ್ ಪಾಲ್ ಸಿಂಗ್ ಬಗ್ಗಾ ಅವರು ರಾಷ್ಟ್ರ ರಾಜಧಾನಿಯ ವಿವಿಧ ಸ್ಥಳಗಳಲ್ಲಿ “ರಾಜೀವ್ ಗಾಂಧಿ ಈಸ್ ದಿ ಫಾದರ್ ಆಫ್ ಮಾಸ್ ಲಿಂಚಿಂಗ್’ ಎಂಬ ಫಲಕಗಳನ್ನು ತಾವೇ ಖುದ್ದಾಗಿ ಹಾಕಿಸಿದ್ದಾರೆ.
ಬಗ್ಗಾ ಅವರು ಈ ಫಲಕಗಳ ವಿಡಿಯೋವನ್ನು ತಮ್ಮ ಟ್ವಿಟರ್ ಖಾತೆಗೂ ಅಪ್‌ಲೋಡ್ ಮಾಡಿ ತಮ್ಮಲ್ಲಿನ ಆಕ್ರೋಶ, ಅಸಮಾಧಾನವನ್ನು ಹೊರಗೆಡಹಿದ್ದಾರೆ.
1984ರಲ್ಲಿ ಕಾಂಗ್ರೆಸ್ ಪಕ್ಷವು ಕೇಂದ್ರದಲ್ಲಿ ಅಧಿಕಾರದಲ್ಲಿದ್ದಾಗ ರಾಷ್ಟ್ರ ರಾಜಧಾನಿ ದಿಲ್ಲಿಯಲ್ಲಿ ನಡೆದಿದ್ದ ಸಿಕ್ಖ ವಿರೋಧಿ ದಂಗೆಯಲ್ಲಿ ಮೂರು ಸಾವಿರ ಸಿಕ್ಖರ ಮಾರಣ ಹೋಮ ನಡೆದಿತ್ತು.
ರಾಹುಲ್ ಗಾಂಧಿ ಅವರು ತಮ್ಮ ಲಂಡನ್ ಭಾಷಣದಲ್ಲಿ 1984ರ ಸಿಕ್ಖ ವಿರೋಧಿ ದಂಗೆಯ ಬಗ್ಗೆ ಮಾತನಾಡುತ್ತಾ, “ಅದೊಂದು ದುರಂತ ಎನ್ನುವ ಬಗ್ಗೆ ನನಗೆ ಯಾವುದೇ ಸಂದೇಹವಿಲ್ಲ; ಅದೊಂದು ಯಾತನಾಮಯ ಅನುಭವಾಗಿತ್ತು. ಆದರೆ ಅದರಲ್ಲಿ ಕಾಂಗ್ರೆಸ್ ಪಕ್ಷ ಶಾಮೀಲಾಗಿತ್ತು ಎಂದು ನೀವು ಹೇಳುತ್ತೀರಿ. ಆದರೆ ನಾನದನ್ನು ಒಪ್ಪುವುದಿಲ್ಲ. ಖಂಡಿತವಾಗಿಯೂ ಅಂದು ಹಿಂಸೆ ಭುಗಿಲೆದ್ದಿತ್ತು; ಅದೊಂದು ದುರಂತವೇ ಆಗಿತ್ತು’ ಎಂದು ಹೇಳಿದ್ದರು.
1984ರ ಸಿಕ್ಖ ವಿರೋಧಿ ದಂಗೆಯಲ್ಲಿ ಕಾಂಗ್ರೆಸ್ ಪಾತ್ರ ಇರಲೇ ಇಲ್ಲ ಎಂಬ ರಾಹುಲ್ ಗಾಂಧಿ ಅವರ ಹೇಳಿಕೆಯನ್ನು ಪಂಜಾಬ್ ಮುಖ್ಯಮಂತ್ರಿ ಅಮರೀಂದರ್ ಸಿಂಗ್ ಬೆಂಬಲಿಸಿದ್ದಾರೆ.