ಬೆಂಗಳೂರು: ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿವಿಯ ಎರಡನೇ ಸೆಮಿಸ್ಟರ್‌ನ ನರ್ಸಿಂಗ್ ವಿದ್ಯಾರ್ಥಿಗಳಿಗೆ 300ಕ್ಕೆ 310, 315 ಅಂಕಗಳನ್ನು ನೀಡಲಾಗಿದೆ. ಈ ಎಡವಟ್ಟು ಬಹಿರಂಗವಾಗಿ ನಗೆಪಾಟಲಿಗೀಡಾಗುತ್ತಿದ್ದಂತೆ ಲೋಪವನ್ನು ಸರಿಪಡಿಸಿಕೊಳ್ಳಲು ಮುಂದಾಗಿದೆ.
ಜನವರಿಯಲ್ಲಿ ನಡೆದಿದ್ದ ನರ್ಸಿಂಗ್‌ನ ಎರಡನೇ ಸೆಮಿಸ್ಟರ್‌ನ ಫಲಿತಾಂಶ ಪ್ರಕಟ ಗೊಂಡಾಗ ವಿದ್ಯಾರ್ಥಿಗಳು ಅಚ್ಚರಿಗೊಂಡಿದ್ದರು. ಗರಿಷ್ಠ 300 ಅಂಕಗಳಿಗಿಂತ ಹೆಚ್ಚು ಅಂಕಗಳನ್ನು ವಿದ್ಯಾರ್ಥಿಗಳು ಪಡೆದಿದ್ದರು. ಲೋಪ ಗಮನಕ್ಕೆ ಬರುತ್ತಿದ್ದಂತೆ ವಿವಿಯ ಅಧಿಕಾರಿಗಳು ದೋಷ ಪೂರಿತ ಫಲಿತಾಂಶಗಳನ್ನು ತಡೆಹಿಡಿದು ನಂತರ ಸರಿಪಡಿಸಿದ ಫಲಿತಾಂಶಗಳನ್ನು ನೀಡಿದರು.
ವಿಶ್ವವಿದ್ಯಾಲಯದ ಮೌಲ್ಯಮಾಪನ ವಿಭಾಗದಿಂದ, ಮೌಲ್ಯಮಾಪನದ ಬಳಿಕ ಅಂಕಗಳ ಲೆಕ್ಕಾಚಾರ ಮಾಡುವಾಗ ಪರೀಕ್ಷೆಯ ಅಂಕಗಳಿಗೆ ಆಂತರಿಕ ಮೌಲ್ಯಮಾಪನ ಅಂಕಗಳನ್ನು ಆಕಸ್ಮಿಕವಾಗಿ ಸೇರಿಸಿರುವುದಾಗಿನಿಂದ ದೋಷ ಉಂಟಾಗಿದೆ ಎಂಬ ಸ್ಪಷ್ಟನೆ ಬಂದಿದೆ.
ಅಂತಿಮ ಲೆಕ್ಕಾಚಾರದ ಭಾಗವಾಗಿರಬೇಕಾಗದ ಅಂಕಗಳನ್ನು ಅಜಾಗರೂಕತೆಯಿಂದ ಸೇರಿಸಲಾಗಿದೆ. ಇದರಿಂದ ಉತ್ತಮ ಅಂಕಗಳನ್ನು ಗಳಿಸಿದ ವಿದ್ಯಾ ರ್ಥಿಗಳ ಒಟ್ಟು ಮೊತ್ತವು ಗರಿಷ್ಠ ಅಂಕಗಳಿಗಿಂತ ಹೆಚ್ಚಾಗಿದೆ. ಇದನ್ನು ಗಮನಕ್ಕೆ ತಂದ ತಕ್ಷಣ ಅಂಕಪಟ್ಟಿಗಳನ್ನು ಹಿಂತೆಗೆದುಕೊಳ್ಳಲಾಗಿದೆ ಮತ್ತು ಸರಿ ಪಡಿಸಲಾಗಿದೆ. ಹೊಸ ಅಂಕಗಳನ್ನು ನೀಡಲಾಗಿದೆ.
ಉಳಿದ ಅಂಕಪಟ್ಟಿಗಳನ್ನು ಸಹ ಪರಿಶೀಲಿಸಲಾಗಿದೆ. ನಾನು ಎಲ್ಲಾ ಕಾಲೇಜು ಪ್ರಾಂಶುಪಾಲರೊಂದಿಗೆ ಸಭೆ ನಡೆಸಿದ್ದು ಎಲ್ಲೆಡೆ ಪರಿಷ್ಕರಣೆ ಮಾಡಲಾಗಿದೆ ಎಂದು ವಿವಿಯ ರಿಜಿಸ್ಟ್ರಾರ್ (ಮೌಲ್ಯಮಾಪನ) ರಿಯಾಜ್ ಬಾಷಾ ಹೇಳಿದ್ದಾರೆ.
ರಾಜೀವ್ ಗಾಂಧಿ ವಿವಿಯು ವಾರ್ಷಿಕ ಪರೀಕ್ಷೆ ಪದ್ಧತಿಯಿಂದ ಮೊದಲ ಬಾರಿಗೆ ಸೆಮಿಸ್ಟರ್ ಪದ್ಧತಿಗೆ ಈ ವರ್ಷ ಬದಲಾಗಿದೆ. ಆದ್ದರಿಂದ ಕೆಲವು ಬದಲಾವಣೆಗಳಾಗಿರುವುದರಿಂದ ಗೊಂದಲಗಳಾಗಿದೆ. ಅದನ್ನು ಸರಿಪಡಿಸಲಾಗಿದೆ ಎಂದು ಬಾಷಾ ಸ್ಪಷ್ಟನೆ ನೀಡಿದ್ದಾರೆ.