Advertisement

RGUHS Exam; “ಕಾಗದ ರಹಿತ ಪರೀಕ್ಷೆ’ಯತ್ತ ರಾಜೀವ್‌ಗಾಂಧಿ ಆರೋಗ್ಯ ವಿವಿ

11:47 PM Feb 26, 2024 | Team Udayavani |

ಬೆಂಗಳೂರು: “ಕಾಗದ ರಹಿತ ಪರೀಕ್ಷೆ’ ಯತ್ತ ರಾಜೀವ್‌ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾನಿಲಯ ಚಿತ್ತಹರಿಸಿದೆ.

Advertisement

ಮಾರ್ಚ್‌ನಲ್ಲಿ ಈ ಸ್ವರೂಪದಲ್ಲಿ ಪ್ರಾಯೋಗಿಕ ಪರೀಕ್ಷೆ ನಡೆಯಲಿದ್ದು, ಅದಕ್ಕಾಗಿಯೇ ರಾಜೀವ್‌ಗಾಂಧಿ ಆರೋಗ್ಯ ವಿಜ್ಞಾನಗಳ ವಿವಿ ಎಲ್ಲ ರೀತಿಯ ಸಿದ್ಧತೆ ಮಾಡಿಕೊಂಡಿದೆ. ಈಗಾಗಲೇ “ಡಿಜಿ ಟಲ್‌ ವ್ಯಾಲ್ಯೂವೇಷನ್‌’ ಮೂಲಕ ಚರಿತ್ರೆ ನಿರ್ಮಿಸಿರುವ ವಿವಿ ಈಗ ಕಾಗದ ರಹಿತ ಪರೀಕ್ಷೆ ಮೂಲಕ ದೇಶದ ವಿವಿಗಳ ಇತಿಹಾಸದಲ್ಲೇ ಭಿನ್ನ ರೀತಿಯ ಪ್ರಯೋಗಕ್ಕೆ ಹೆಜ್ಞೆ ಇರಿಸಿದೆ.

ಫೆಲೋಶಿಫ್ ಮತ್ತು ಫಿಸಿಯೋಥೆರಪಿ ವಿಭಾಗದಲ್ಲಿ ಕಾಗದ ರಹಿತ ಪರೀಕ್ಷೆ ನಡೆಸಲಾಗುತ್ತಿದೆ. ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದಂತೆ ಉತ್ತರಗಳು ಸರ್ವರ್‌ಗೆ ಅಪ್‌ಲೋಡ್‌ ಆಗಲಿವೆ. ಪ್ರಶ್ನೆ ಪತ್ರಿಕೆಗಳಲ್ಲಿ ಯಾವುದೇ ರೀತಿಯ ಬದಲಾವಣೆ ಇರುವುದಿಲ್ಲ. ಆದರೆ ಇಲ್ಲಿ ಟ್ಯಾಬ್‌ ಅನ್ನು ಬಳಸಲಾಗುತ್ತಿದೆ. ಈಗಾಗಲೇ ನಿಮ್ಹಾನ್ಸ್‌ನಲ್ಲಿ ಸೀಮಿತ ಕೋರ್ಸ್‌ ಗಳಿಗೆ ಕಾಗದ ರಹಿತ ಪರೀಕ್ಷೆ ನಡೆಯುತ್ತಿದೆ. ಅದೇ ಮಾದರಿಯನ್ನು ರಾಜೀವ್‌ಗಾಂಧಿ ವಿವಿ ಬಳಸಲಿದೆ.

ಪರೀಕ್ಷೆ ದಿನದಂದು
ಮಾತ್ರ ಟ್ಯಾಬ್‌ ಸಕ್ರಿಯ
ಈ ಪದ್ಧತಿಯಲ್ಲಿ ವಿದ್ಯಾರ್ಥಿಗಳಿಗೆ ಟ್ಯಾಬ್‌ ನೀಡಲಾಗುತ್ತದೆ. ಟ್ಯಾಬ್‌ ಅನ್ನು ವಿದ್ಯಾರ್ಥಿಗಳೇ ಖರೀದಿಸಬೇಕೋ, ಆಯಾ ಕಾಲೇಜುಗಳು ಅಥವಾ ವಿವಿ ಪೂರೈಸಬೇಕೋ ಎಂಬುದನ್ನು ಇನ್ನೂ ನಿರ್ಧರಿಸಿಲ್ಲ. ಕೋರ್ಸ್‌ ಮುಗಿಯುವರೆಗೂ ಆ ಟ್ಯಾಬ್‌ ವಿದ್ಯಾರ್ಥಿಯಲ್ಲಿ ಇರಲಿದೆ. ಪರೀಕ್ಷೆ ವೇಳೆ ಮಾತ್ರ ಟ್ಯಾಬ್‌ ಬಳಸಲಾಗುತ್ತದೆ ಎಂದು ರಾಜೀವ್‌ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ಕುಲಪತಿ ಡಾ| ಎಂ.ಕೆ.ರಮೇಶ್‌ ಮಾಹಿತಿ ನೀಡಿದ್ದಾರೆ.

ಪರೀಕ್ಷೆಯ ದಿನದಂದು ಮಾತ್ರ ಟ್ಯಾಬ್‌ ಅನ್ನು ಸಕ್ರಿಯಗೊಳಿಸಲಾಗುತ್ತದೆ. ಪ್ರತ್ಯೇಕ ಪಿನ್‌ ಕೂಡ ನೀಡಲಾಗುವುದು. ಟ್ಯಾಬ್‌ಗಳ ಬಳಕೆ ಖರ್ಚು ಬಗ್ಗೆ ಇನ್ನೂ ಲೆಕ್ಕಹಾಕಿಲ್ಲ ಎಂದು ತಿಳಿಸಿದ್ದಾರೆ.

Advertisement

ಪ್ರಾಯೋಗಿಕವಾಗಿ 2 ಸಾವಿರ ವಿದ್ಯಾರ್ಥಿಗಳ ಬಳಕೆಕಾಗದ ರಹಿತ ಪರೀಕ್ಷೆಯ ಪ್ರಾಯೋಗಿಕ ಹಂತದಲ್ಲಿ 2 ಸಾವಿರ ವಿದ್ಯಾರ್ಥಿಗಳು ಪಾಲ್ಗೊಳ್ಳಲಿದ್ದಾರೆ. ಫೆಲೋಶಿಫ್ ವಿಭಾಗದ 180 ಮತ್ತು ಪಿಸಿಯೋಥೆರಪಿ ವಿಭಾಗದ 1,820 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಟ್ಯಾಬ್‌ನಲ್ಲಿ ವಿಶೇಷ ಅಪ್ಲಿಕೇಶನ್‌ಗಳನ್ನು ಅಳವಡಿಸಲಾಗುವುದು. ಕಾಗದ ಉಳಿಸುವ ಉದ್ದೇಶವೂ ಇದರಲ್ಲಿ ಸೇರಿದೆ ಎಂದು ರಾಜೀವ್‌ ಗಾಂಧಿ ಆರೋಗ್ಯ ವಿಜ್ಞಾನಗಳ ವಿವಿಯ ಕುಲಸಚಿವ ಪಿ.ಆರ್‌.ಶಿವಪ್ರಸಾದ್‌ ಹೇಳಿದರು.

ಪ್ರಯೋಗ ಹಂತವಾಗಿರುವ ಹಿನ್ನೆಲೆಯಲ್ಲಿ ಹಲವು ಮುನ್ನೆಚ್ಚರಿಕೆ ಕೈಗೊಳ್ಳಲಾಗುವುದು. ಡಿಜಿಟಲ್‌ ಮೌಲ್ಯಮಾಪನ ಬಗ್ಗೆ ಮೆಚ್ಚುಗೆ ವ್ಯಕ್ತವಾಗಿದೆ. ಈಗಾಗಲೇ ತೆಲಂಗಾಣ, ಮಧ್ಯಪ್ರದೇಶ, ಮಹಾರಾಷ್ಟ್ರ ಮುಂತಾದ ಹಲವು ರಾಜ್ಯಗಳ ವಿವಿಗಳು ಡಿಜಿಟಲ್‌ ಮೌಲ್ಯಮಾಪನ ಬಗ್ಗೆ ಮಾಹಿತಿ ಪಡೆದುಕೊಂಡು ಹೋಗಿದ್ದಾರೆ ಎಂದು ತಿಳಿಸಿದರು.

ಉತ್ತರ ಪತ್ರಿಕೆಗಾಗಿಯೇ ಪ್ರತಿ ವರ್ಷ 8 ಕೋಟಿ ರೂ.ಖರ್ಚು
ಪ್ರತಿ ವರ್ಷ ವಿದ್ಯಾರ್ಥಿಗಳ ಉತ್ತರ ಪತ್ರಿಕೆಗಾಗಿಯೇ ವಿವಿ ಸುಮಾರು 7-8 ಕೋಟಿ ರೂ. ಖರ್ಚು ಮಾಡುತ್ತದೆ. ಕಾಗದ ರಹಿತ ಪರೀಕ್ಷೆಯಿಂದಾಗಿ ಈ ಹಣ ಉಳಿತಾಯವಾಗಲಿದೆ. ವಿದ್ಯಾರ್ಥಿಗಳ ನಾಲ್ಕು ವರ್ಷದ ಕೋರ್ಸ್‌ ಮುಗಿಸಿದ ತತ್‌ಕ್ಷಣ ಟ್ಯಾಬ್‌ ಅನ್ನು ಮರುಬಳಕೆ ಕೂಡ ಮಾಡಬಹುದಾಗಿದೆ ಎಂದು ರಾಜೀವ್‌ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ಕುಲಪತಿ ಡಾ| ಎಂ.ಕೆ.ರಮೇಶ್‌ ತಿಳಿಸಿದ್ದಾರೆ. ಇದರ ಜತೆಗೆ ಆರ್ಟಿಫಿಶಿಯಲ್‌ ಇಂಟೆಲಿಜೆಂಟ್‌ (ಕೃತಕ ಬುದ್ಧಿಮತ್ತೆ) ಅನ್ನು ಕೂಡ ಪರೀಕ್ಷೆ ವೇಳೆ ಬಳಕೆಗೆ ಆಲೋಚಿಸಲಾಗಿದೆ. ಹೊರಗಡೆಯಿಂದ ಯಾರಾದರೂ ಪರೀಕ್ಷೆ ಬರೆಯುವವರಿಗೆ ಸಹಾಯ ಮಾಡುತ್ತಿದ್ದರೆ, ಆ ವಿದ್ಯಾರ್ಥಿಗಳ ಚಲನವಲನಗಳ ಮೂಲಕ ಕೃತಕ ಬುದ್ಧಿಮತ್ತೆ ಮಾಹಿತಿ ನೀಡಲಿದೆ. ಪರೀಕ್ಷೆಗಳ ಪಾವಿತ್ರ್ಯ ಉಳಿಯಬೇಕು ಎಂಬುದಷ್ಟೇ ನಮ್ಮ ಉದ್ದೇಶವಾಗಿದೆ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next