ಚೆನ್ನೈ: ಬಹುಭಾಷಾ ನಟ ಕಮಲ್ ಹಾಸನ್ ಹೊಸ ರಾಜಕೀಯ ಪಕ್ಷ ಆರಂಭಿಸುವುದರ ಬಗ್ಗೆ ಈಗಾಗಲೇ ಗುಸು ಗುಸು ಹಬ್ಬಿದೆ. ಬಹಳ ಕುತೂಹಲ ಕೆರಳಿಸಿರುವ ತಮಿಳು ಸೂಪರ್‌ಸ್ಟಾರ್ ರಜನಿಕಾಂತ್ ರಾಜಕೀಯ ಪ್ರವೇಶ ಅಥವಾ ಹೊಸ ಪಕ್ಷ ಸ್ಥಾಪನೆಯ ಬಗ್ಗೆ ಡಿ.12ರಂದು ಅಧಿಕೃತ ಘೋಷಣೆ ಹೊರಬೀಳುವ ಸಾಧ್ಯತೆಯಿದೆ. ಆ ದಿನವೇ ತಮಿಳು ಸೂಪರ್‌ಸ್ಟಾರ್‌ನ ಬರ್ತ್‌ಡೇ. ಅಂದೇ ಅವರು ಈ ವಿಚಾರ ಬಹಿರಂಗಪಡಿಸಲಿದ್ದಾರೆ ಎಂದು ಅವರ ಆಪ್ತ ವಲಯ ಸುಳಿವು ನೀಡಿದೆ.
“ರಜನಿ ಯಾವುದೇ ರಾಜಕೀಯ ಪಕ್ಷ ಸೇರುವುದಿಲ್ಲ. ಅವರು ತಮಿಳುನಾಡು ವಿಧಾನಸಭೆಗೆ ನಡೆಯಲಿರುವ ಚುನಾವಣೆ ಬಗ್ಗೆ ಹೆಚ್ಚು ಒತ್ತು ನೀಡಲಿದ್ದಾರೆ. ಸ್ಟಾಲಿನ್ ಮತ್ತು ಕಮಲ್‌ಹಾಸನ್‌ಗೆ ಪ್ರತಿಸ್ಪರ್ಧೆ ನೀಡಲು ಆಸಕ್ತಿ ಹೊಂದಿದ್ದಾರೆ. ಜತೆಗೆ ತಳಮಟ್ಟದಿಂದ ಹೊಸ ಪಕ್ಷದ ತಳಹದಿ ಮತ್ತು ಕಾರ್ಯಕರ್ತರನ್ನು ರೂಪುಗೊಳಿಸಲು ನಿರ್ಧರಿಸಿದ್ದಾರೆ’ ಎಂದು ತಮಿಳು ಸೂಪರ್‌ಸ್ಟಾರ್ ರಜನಿ ಆಪ್ತರೊಬ್ಬರು ಹೇಳಿದ್ದಾರೆ.
ಮಧ್ಯಪಂಥೀಯ: ರಜನಿ ಅವರು ದೈವ ಭಕ್ತರಾಗಿರುವುದರಿಂದ ಎಡಪಂಥೀಯ ರಾಗಲು ಸಾಧ್ಯವಿಲ್ಲ. ಯಾವುದೇ ವಿಚಾರಗಳ ಬಗ್ಗೆ ತೀವ್ರತರ ಅಭಿಪ್ರಾಯ ಹೊಂದದಿರುವುದರಿಂದ ಬಲಪಂಥೀಯ ರಾಗಲೂ ಸಾಧ್ಯವಿಲ್ಲ. ಆದರೆ ಮಧ್ಯ ಪಂಥೀಯರಂತೂ ಆಗಲಿದ್ದಾರೆ. ಆಗ ಮಾತ್ರ ಸಮಾಜದ ಎಲ್ಲ ವರ್ಗಗಳನ್ನೂ ಆಕರ್ಷಿಸಲು ಸಾಧ್ಯ ಎಂದು ಅವರು ಹೇಳಿದ್ದಾರೆ. ದಲಿತ ಸಮುದಾಯದವರ ಮೇಲೆ ಹೆಚ್ಚಿನ ಗಮನ ಕೇಂದ್ರೀಕರಿಸಲು ಮುಂದಾಗಿರುವ ಅವರು, ತಮ್ಮ ಇತ್ತೀಚಿನ ಸಿನಿಮಾ “ಕಬಾಲಿ’ಯಲ್ಲಿ ಅದನ್ನು ಸ್ವಲ್ಪಮಟ್ಟಿಗೆ ವ್ಯಕ್ತಪಡಿಸಿದ್ದರು. ಅವರ ಮುಂದಿನ ಸಿನಿಮಾ “ಕಾಲ’
ಕೂಡ ಇದೇ ಮಾದರಿಯ ಕಥಾ ಹಂದರವನ್ನು ಒಳಗೊಂಡಿದೆ ಎಂದು ಹೇಳಲಾಗುತ್ತದೆ.
ಇಬ್ಬರು ನಾಯಕರೂ ಎಐಎಡಿಎಂಕೆ ಮತ್ತು ಡಿಎಂಕೆ ಮತ ಬ್ಯಾಂಕ್ ಹೊರತಾಗಿರುವವರನ್ನು ಕೇಂದ್ರೀಕರಿಸಲು ಯತ್ನಿಸುತ್ತಿದ್ದಾರೆ ಎಂದು ಹೇಳಲಾಗಿದೆ ಎಂದು ಮೂಲಗಳು ತಿಳಿಸಿವೆ.