ಚೆನ್ನೈ: ಭಾರತೀಯ ಸಿನಿಮಾರಂಗದ ದಿಗ್ಗಜ, ಕಾಲಿವುಡ್ ಸೂಪರ್ ಸ್ಟಾರ್ ರಜಿನಿಕಾಂತ್ (Superstar Rajinikanth) ಚಿತ್ರರಂಗದಲ್ಲಿ 50 ವರ್ಷಗಳನ್ನು ಪೊರೈಸಿದ್ದಾರೆ.
ಇಂದು ಸ್ಟಾರ್ ನಟನಾಗಿರುವ ಹಾಗೂ ನಟರಾಗುವತ್ತ ಪುಟ್ಟ ಪುಟ್ಟ ಹೆಜ್ಜೆಗಳನ್ನಿಡುತ್ತಿರುವ ಎಷ್ಟೋ ಕಲಾವಿದರು ರಜಿನಿಕಾಂತ್ ಅವರನ್ನು ಗುರುವಿನ ಸ್ಥಾನದಲ್ಲಿ ನೋಡುತ್ತಾರೆ. ರಜಿನಿಕಾಂತ್ ಅವರಿಗೆ ಅಭಿಮಾನಿಗಳ ದೊಡ್ಡ ವರ್ಗವೇ ಇದೆ. ಅವರ ಪ್ರೀತಿಗಾಗಿ ಇಲ್ಲೊಂದು ಯೂಟ್ಯೂಬ್ ಚಾನೆಲ್ 50 ಗಂಟೆಗಳ ಕಾಲ ನಾನ್ ಸ್ಟಾಪ್ ಲೈವ್ ಪಾಡ್ ಕಾಸ್ಟ್ ಮಾಡಿ ಗಿನ್ನಿಸ್ ದಾಖಲೆ ಬರೆದಿದೆ.
ಆರ್‌ಜೆ ವಿಘ್ನೇಶ್ ಕಾಂತ್ (RJ Vigneshkanth) ಮತ್ತು ಅರವಿಂದ್ ನಿರ್ವಹಿಸುವ ಬ್ಲ್ಯಾಕ್‌ಶೀಪ್ (Blacksheep YouTube channel) ಎನ್ನುವ ತಮಿಳು ಯೂಟ್ಯೂಬ್ ಚಾನೆಲ್ ಇಂಥದ್ದೊಂದು ಪ್ರಯೋಗವನ್ನು ಮಾಡಿ ಸೈ ಎನ್ನಿಸಿಕೊಂಡಿದೆ.
ಈ ಪಾಡ್ ಕಾಸ್ಟ್ ಸೆಪ್ಟೆಂಬರ್ 6 ರಂದು ಚೆನ್ನೈನ ಅಂಪಾ ಸ್ಕೈಯೋನ್, ಅಮ್ಜಿಕ್ಕರೈನಲ್ಲಿ ಪ್ರಾರಂಭವಾಗಿ ಸೆಪ್ಟೆಂಬರ್ 8 ರಂದು ಸಂಜೆ 6 ಗಂಟೆಗೆ ಮುಕ್ತಾಯವಾಗಿದೆ. ಇದರಲ್ಲಿ ಚಿತ್ರರಂಗದ ಕೆಲ ನಿರ್ದೇಶಕರು, ನಟರು ಮತ್ತು ಅವರ ರಜಿನಿಕಾಂತ್ ಅವರ ಅಭಿಮಾನಿಗಳು ಸೇರಿ ತನ್ನ ನೆಚ್ಚಿನ ಸೂಪರ್ ಸ್ಟಾರ್ ಬಗ್ಗೆ 50 ಗಂಟೆಗಳ ಮಾತನಾಡಿದ್ದಾರೆ.
50-ಗಂಟೆಗಳ ತಡೆರಹಿತ ಲೈವ್ ಪಾಡ್‌ಕಾಸ್ಟ್ ಮಾಡಿರುವುದಕ್ಕಾಗಿ ವಿಘ್ನೇಶ್ ಕಾಂತ್ ಮತ್ತು ಅವರ ತಂಡ ಗಿನ್ನಿಸ್ ದಾಖಲೆಯನ್ನು ಬರೆದಿದೆ.
ನಟ-ನಿರ್ದೇಶಕ ಶಶಿಕುಮಾರ್ ವಿಘ್ನೇಶ್ ಕಾಂತ್ ಅವರಿಗೆ ಗಿನ್ನಿಸ್ ದಾಖಲೆ ಪತ್ರವನ್ನು ಹಸ್ತಾಂತರಿಸಿದ್ದಾರೆ.
ʼಸೂಪರ್ ಸ್ಟಾರ್ ಗೆ ಸೆಲ್ಯೂಟ್ʼ ಎನ್ನುವ ಟೈಟಲ್ ನಲ್ಲಿ ಪಾಡ್ ಕಾಸ್ಟ್ ನಡೆಸಲಾಗಿದೆ. ಈ ಪಾಡ್ ಕಾಸ್ಟ್ ಶೀಘ್ರದಲ್ಲಿ ಬ್ಲ್ಯಾಕ್ ಶೀಪ್ ಯೂಟ್ಯೂಬ್ ಹಾಗೂ ಓಟಿಟಿಯಲ್ಲಿ ಪ್ರಸಾರವಾಗಲಿದೆ.
ರಜಿನಿಕಾಂತ್ ಕುರಿತು 50 ಗಂಟೆಗಳ ಕಾಲ ಪಾಡ್ ಕಾಸ್ಟ್ ಮಾಡಿ ಗಿನ್ನಿಸ್ ದಾಖಲೆ ಪತ್ರವನ್ನು ಪಡೆದ ವಿಘ್ನೇಶ್ ಕಾಂತ್ ಅವರಿಗೆ ರಜಿನಿಕಾಂತ್ ಅವರು ಸ್ವತಃ ವಾಯ್ಸ್ ನೋಟ್ ಕಳುಹಿಸಿ ಅಭಿನಂದನೆ ಸಲ್ಲಿಸಿದ್ದಾರೆ.
“ಹಲೋ ವಿಘ್ನೇಶ್, ನೀವು 50 ಗಂಟೆಗಳ ಕಾಲ ಜನರನ್ನು ಸಂದರ್ಶಿಸಿದ್ದೀರಿ, ನಿಮ್ಮನ್ನು ಹೇಗೆ ಪ್ರಶಂಸಿಸಬೇಕೆಂದು ನನಗೆ ತಿಳಿದಿಲ್ಲ. ಹ್ಯಾಟ್ಸ್ ಆಫ್, ಹ್ಯಾಟ್ಸ್ ಆಫ್. ನೀನು ನನ್ನ ಮೇಲೆ ಇಟ್ಟಿರುವ ಪ್ರೀತಿಗೆ ಏನು ಕೊಡಬೇಕೆಂದು ತಿಳಿಯುತ್ತಿಲ್ಲ. ನಾನು ನಿಮಗೆ ಬಹಳಷ್ಟು ಪ್ರೀತಿಯಿಂದ ನಮಸ್ಕರಿಸುತ್ತೇನೆ. ನಿಮ್ಮ Blacksheep ಚಾನಲ್‌ಗೆ ಅಭಿನಂದನೆಗಳು. ನಿಮಗೂ ನನ್ನ ಶುಭಾಶಯಗಳು. ದಯವಿಟ್ಟು ನಿಮ್ಮನ್ನು ಹೆಚ್ಚು ಆಯಾಸಗೊಳಿಸಬೇಡಿ. ಕಾಳಜಿ ವಹಿಸಿ. ದೇವರ ಆಶೀರ್ವಾದ ಇರಲಿ. ಲವ್ ಯೂ” ಎಂದು ರಜಿನಿ ವಾಯ್ಸ್ ನೋಟ್ ಕಳುಹಿಸಿದ್ದಾರೆ.
ಸದ್ಯ ರಜಿನಿಕಾಂತ್ ಅವರ ʼವೆಟ್ಟೈಯಾನ್ʼ ಬಿಡುಗಡೆಗೆ ಸಜ್ಜಾಗಿದೆ. ಚಿತ್ರವು ಅಕ್ಟೋಬರ್ 10 ರಂದು ರಿಲೀಸ್ ಆಗಲಿದೆ. ಇದಾದ ಬಳಿಕ ಅವರು, ಲೋಕೇಶ್ ಕನಕರಾಜ್ ಅವರ ʼಕೂಲಿʼ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.