Advertisement

ಕಾಲಿವುಡ್ ತಲೈವಾ ಸೂಪರ್ ಸ್ಟಾರ್ ರಜನಿಕಾಂತ್ ಗೆ ಒಲಿದ 51 ನೇ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ

01:11 PM Apr 01, 2021 | Team Udayavani |

ನವ ದೆಹಲಿ : ಸೂಪರ್ ಸ್ಟಾರ್ ರಜನಿಕಾಂತ್ 51 ನೇ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಗೆ ಆಯ್ಕೆಗೊಂಡಿದ್ದಾರೆ ಎಂದು ಕೇಂದ್ರ ಮಾಹಿತಿ ಮತ್ತು ಪ್ರಸರಣ ಸಚಿವ ಪ್ರಕಾಶ್ ಜಾವ್ಡೇಕರ್ ತಿಳಿಸಿದ್ದಾರೆ.

Advertisement

ಸುದ್ಧಿಗೋಷ್ಟಿಯಲ್ಲಿ ಮಾತನಾಡಿದ ಜಾವ್ಡೇಕರ್, 2019ನೇ ಸಾಲಿನ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಗೆ ಸೂಪರ್ ಸ್ಟಾರ್ ರಜನಿಕಾಂತ್ ಆಯ್ಕೆಗೊಂಡಿದ್ದಾರೆ. ಭಾರತದ ಸಿನೆಮಾ ರಂಗದಲ್ಲಿ ರಜನಿಕಾಂತ್ ಮೇರು ನಟ. ನಟರಾಗಿ, ನಿರ್ಮಾಪಕರಾಗಿ, ಚಿತ್ರ ಕಥೆಗಾರನಾಗಿ ಭಾರತೀಯ ಸಿನೆಮಾ ರಂಗಕ್ಕೆ ಅವರು ನೀಡಿದ ಕೊಡುಗೆ ಅನನ್ಯ ಎಂದು ಅವರು ಹೇಳಿದ್ದಾರೆ.

ಇನ್ನು, ಈ ಬಗ್ಗೆ ಹರ್ಷ ವ್ಯಕ್ತ ಪಡಿಸಿದ ನಟ ಹಾಗೂ ನಿರ್ದೇಶಕ ಕಮಲಾ ಹಾಸನ್, ಸೂಪರ್ ಸ್ಟಾರ್ ಹಾಗೂ ನನ್ನ ಆತ್ಮೀಯ ಗೆಳೆಯ ರಜನಿಕಾಂತ್ ಈ ಪ್ರಶಸ್ತಿಗೆ ಶೇಕಡಾ ನೂರಕ್ಕೆ ನೂರು ಅರ್ಹ ವ್ಯಕ್ತಿ. ಅವರು ಪರದೆ ಮೇಲೆ ಪ್ರೇಕ್ಷಕರನ್ನು ಇಷ್ಟು ಪ್ರಮಾಣದಲ್ಲಿ ಗೆಲ್ಲಬಹುದು ಎಂದು ತೋರಿಸಿಕೊಟ್ಟಿದ್ದಾರೆ ಎಂದು ತಮ್ಮ ಟ್ವೀಟರ್ ನಲ್ಲಿ ಬರೆದುಕೊಂಡಿದ್ದಾರೆ.

Advertisement

ಭಾರತೀಯ ಸಿನೆಮಾ ರಂಗದ ಪಿತಾಮಹ ಎಂದು ಕರೆಯಲ್ಪಡುವ ದಾದಾ ಸಾಹೇಬ್, 1913ರಲ್ಲಿ ನಟರಾಗಿ ಭಾರತೀಯ ಸಿನೆಮಾ ರಂಗಕ್ಕೆ ಪಾದಾರ್ಪಣೆ ಮಾಡಿದರು. ಅವರ ಹೆಸರಿನಲ್ಲಿ ಕೊಡಮಾಡುವ ಈ ಪ್ರಶಸ್ತಿ ಭಾರತೀಯ ಸಿನೆಮಾ ರಂಗದ ಶ್ರೇಷ್ಟ ಪ್ರಶಸ್ತಿ ಎಂದು ಪರಿಗಣಿಸಲ್ಪಟ್ಟಿದೆ. ಸಿನೆಮಾರಂಗದ ಶ್ರೇಷ್ಠ ಮಾನ್ಯರಿಗೆ, ಭಾರತೀಯ ಸಿನಿ ರಂಗಕ್ಕೆ ನೀಡಿದ ಅಪಾರ ಸೇವೆಯನ್ನು ಗುರುತಿಸಿ ಈ ಪ್ರಶಸ್ತಿಯನ್ನು ನೀಡಲಾಗುತ್ತದೆ. ಪ್ರಶಸ್ತಿಯು ಸ್ವರ್ಣ ಕಮಲ ಪದಕ ಹಾಗೂ ಹತ್ತು ಲಕ್ಷ ನಗದು ಬಹುಮಾನವನ್ನು ಒಳಗೊಂಡಿರುತ್ತದೆ.

ಓದಿ : ಸಿಎಂ ವಜಾಗೊಳಿಸಿ ರಾಷ್ಟ್ರಪತಿ ಆಡಳಿತಕ್ಕೆ ಶಿಫಾರಸು ಮಾಡಿ: ಸಿದ್ದರಾಮಯ್ಯ ಆಗ್ರಹ

ಈ ಪ್ರಶಸ್ತಿಯನ್ನು ಕಳೆದ ವರ್ಷ ಘೋಷಿಸಬೇಕಾಗಿತ್ತು. ಕೋವಿಡ್ ಸಾಂಕ್ರಾಮಿಕ ಸೋಂಕು ಹಾಗೂ ಲಾಕ್ಡೌನ್ ನ ಕಾರಣದಿಂದಾಗಿ ವಿಳಂಬವಾಗಿತ್ತು. ಗಾಯಕರಾದ ಆಶಾ ಭೋಸ್ಲೆ ಮತ್ತು ಶಂಕರ್ ಮಹಾದೇವನ್, ನಟರಾದ ಮೋಹನ್ ಲಾಲ್ ಮತ್ತು ಬಿಸ್ವಾಜೀತ್, ಮತ್ತು ಚಲನಚಿತ್ರ ನಿರ್ಮಾಪಕ ಸುಭಾಷ್ ಘೈ ಇದ್ದ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ 2019 ನೇ ಸಾಲಿನ ಆಯ್ಕೆ ಸಮಿತಿಯು  ರಜನಿಕಾಂತ್ ಅವರನ್ನು ಸಿನೆಮಾ ರಂಗಕ್ಕೆ ನೀಡಿದ ಅಪಾರವಾದ ಸಾಧನೆಗಾಗಿ ಈ ಪ್ರಶಸ್ತಿಗೆ ಆಯ್ಕೆ ಮಾಡಿದೆ.

ಕಳೆದ ಸಾಲಿನಲ್ಲಿ ಬಾಲಿವುಡ್ ಸಿನೆಮಾ ರಂಗದ ಮೇರು ನಟ ಅಮಿತಾಭ್ ಬಚ್ಚನ್ ಅವರಿಗೆ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿತ್ತು.

ಇನ್ನು, ಈವರೆಗೆ ಕನ್ನಡದ ನಟ ಸಾರ್ವಭೌಮ ವರನಟ ಡಾ. ರಾಜ್ ಕುಮಾರ್ ಅವರನ್ನೊಳಗೊಂಡು 50 ಮಂದಿಗೆ ಈ ಪ್ರಶಸ್ತಿಯನ್ನು ನೀಡಲಾಗಿದ್ದು, ರಜನಿಕಾಂತ್ 51ನೇಯವರಾಗಿ ಪ್ರಶಸ್ತಿಯನ್ನು ಸ್ವಿಕರಿಸುತ್ತಿದ್ದಾರೆ.

ಓದಿ : ಭರ್ಜರಿ ಖರೀದಿ:ಮುಂಬಯಿ ಷೇರುಪೇಟೆ ಸೆನ್ಸೆಕ್ಸ್ 390 ಅಂಕ ಏರಿಕೆ, 14,804ಕ್ಕೆ ತಲುಪಿದ ನಿಫ್ಟಿ

 

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next