Advertisement

ಸಿಡಿದೆದ್ದ ಶಾಸಕ ರಾಜೇಶ್‌ ಬೆಂಬಲಿಗರು

05:03 PM Apr 16, 2018 | Team Udayavani |

ದಾವಣಗೆರೆ: ಜಗಳೂರು ಶಾಸಕ, ಕಾಂಗ್ರೆಸ್‌ ನ ಹಾಲಿ ಶಾಸಕ ಎಚ್‌.ಪಿ. ರಾಜೇಶ್‌ಗೆ ಟಿಕೆಟ್‌ ತಪ್ಪಿದೆ ಎಂಬ ವದಂತಿ ಕಾಂಗ್ರೆಸ್‌ ಕಾರ್ಯಕರ್ತರಲ್ಲಿ ಆಕ್ರೋಶ ಮೂಡಿಸಿ ಕೊನೆಗೆ ಜಿಲ್ಲಾ ಸಚಿವ ಎಸ್‌.ಎಸ್‌. ಮಲ್ಲಿಕಾರ್ಜುನ್‌ರ ಭರವಸೆ ಮಾತುಗಳ ಹಿನ್ನೆಲೆಯಲ್ಲಿ ಅದು ಶಮನ ಆಯಿತು. ಹಾಲಿ ಶಾಸಕ ಎಚ್‌.ಪಿ. ರಾಜೇಶ್‌ಗೆ ಟಿಕೆಟ್‌ ತಪ್ಪಿದ ವದಂತಿ ಹರಡುತ್ತಿದ್ದಂತೆ ಅವರ ಬೆಂಬಲಿಗರು ಏಕಾಏಕಿ ಜಿಲ್ಲಾ
ಉಸ್ತುವಾರಿ ಸಚಿವ ಎಸ್‌.ಎಸ್‌. ಮಲ್ಲಿಕಾರ್ಜುನ್‌ರ ದಾವಣಗೆರೆ ನಿವಾಸದ ಮುಂದೆ ಜಮಾಯಿಸಿದರು.

Advertisement

ಶಾಸಕ ರಾಜೇಶ್‌ ಪರ ಘೋಷಣೆ ಕೂಗಿದ ಕಾರ್ಯಕರ್ತರು, ಜಗಳೂರಲ್ಲಿ ರಾಜೇಶ್‌ ಬಿಟ್ಟು ಬೇರೆ ಯಾರಿಗೇ ಟಿಕೆಟ್‌ ಕೊಟ್ಟರೂ ಕಾಂಗ್ರೆಸ್‌ ಸೋಲುವುದು ಖಚಿತ ಎಂದು ಹೇಳಿದರು. ಸುಮಾರು ಅರ್ಧ ಗಂಟೆ ಕಾಲ ಬಹಿರಂಗ ಸಭೆ ನಡೆಸಿ, ರಾಜೇಶ್‌ಗೆ ಮಾತ್ರ ಟಿಕೆಟ್‌ ಕೊಡಬೇಕು ಎಂದು ಆಗ್ರಹಿಸಿದರು. ಈ ವೇಳೆ ಕಾಂಗ್ರೆಸ್‌ ಮುಖಂಡ ಎಲ್‌.ಬಿ. ಭೈರೇಶ್‌ ಮಾತನಾಡಿ, ಎಚ್‌.ಪಿ. ರಾಜೇಶ್‌ ಓರ್ವ ಪ್ರಾಮಾಣಿಕ ರಾಜಕಾರಣಿ. ಒಮ್ಮೆ ಪಕ್ಷೇತರರಾಗಿ ಆಯ್ಕೆಯಾಗಿದ್ದಾರೆ. ಕಳೆದ ಬಾರಿ ಸ್ವತಃ ಕಾಂಗ್ರೆಸ್‌ ನಾಯಕರೇ ರಾಜೇಶ್‌ ರನ್ನು ಪಕ್ಷಕ್ಕೆ ಆಹ್ವಾನಿಸಿ, ಟಿಕೆಟ್‌ ನೀಡಿದ್ದರು.

ಆಗ 38 ಸಾವಿರ ಮತಗಳ ಅಂತರದಲ್ಲಿ ರಾಜೇಶ್‌ ಗೆಲುವು ಸಾಧಿಸಿದ್ದರು. 2013ರ ಚುನಾವಣೆಯಲ್ಲಿ ಇಷ್ಟು ಮತಗಳ
ಅಂತರದಲ್ಲಿ ಯಾವುದೇ ಎಸ್‌ಟಿ ಮೀಸಲು ಕ್ಷೇತ್ರದ ಅಭ್ಯರ್ಥಿ ಗೆಲುವು ಸಾಧಿಸಿರಲಿಲ್ಲ. ಇಂತಹ ವ್ಯಕ್ತಿಗೆ ಕೆಲ ಸ್ಥಳೀಯ ಮುಖಂಡರ ಕಾರಣದಿಂದ ಟಿಕೆಟ್‌ ತಪ್ಪಿಸುವ ಯತ್ನ ನಡೆಯುತ್ತಿದೆ. ಈ ವ್ಯಕ್ತಿಗಳು ಪಕ್ಷಕ್ಕಾಗಿ ಏನೂ ಮಾಡಿಲ್ಲ. ಅವರು ಕ್ಷೇತ್ರಕ್ಕೆ ಬಂದು ಪಕ್ಷದ ಅಭ್ಯರ್ಥಿ ಪರ 50 ಮತ ಹಾಕಿಸುವ ಸಾಮರ್ಥ್ಯ ಹೊಂದಿಲ್ಲ. ಇಂತಹ ವ್ಯಕ್ತಿಗಳ ಮಾತಿಗೆ ಹೈಕಮಾಂಡ್‌ ಮಣೆ ಹಾಕಬಾರದು ಎಂದು ಆಗ್ರಹಿಸಿದರು. ಮುಖಂಡರಾದ ಮಂಜುನಾಥ, ಗೋಣಿ ಪ್ರಕಾಶ್‌, ಡಿ.ಆರ್‌. ಹನುಮಂತಪ್ಪ, ಆಜಂ ಉಲ್ಲಾ ಸಭೆಯಲ್ಲಿ ಮಾತನಾಡಿದರು. 

ಜಯಸಿಂಹ ವಿರುದ್ಧ ಆಕ್ರೋಶ ಕೆಪಿಸಿಸಿ ಸದಸ್ಯ ಆನಗೋಡು ಜಯಸಿಂಹ ವಿರುದ್ಧ ಕಾರ್ಯಕರ್ತರು ಆಕ್ರೋಶದ ನುಡಿಗಳನ್ನಾಡಿದರು. ಕ್ಷೇತ್ರದಲ್ಲಿ ಬಂದು 50 ಓಟ್‌ ಹಾಕಿಸುವ ಸಾಮರ್ಥ್ಯ ಆನಗೋಡು ಜಯಸಿಂಹಗೆ ಇಲ್ಲ. ಅಂತಹವರು ಪುಷ್ಪಾ ಲಕ್ಷ್ಮಣಸ್ವಾಮಿಗೆ ಟಿಕೆಟ್‌ ನೀಡಲಾಗುತ್ತದೆ. ಗೆಲ್ಲಿಸಿಕೊಂಡು ಬರುತ್ತೇನೆ ಎಂದು ಹೇಳುತ್ತಾರೆ.  ಇಂತಹವರಿಂದ ಜಗಳೂರಲ್ಲಿ ಕಾಂಗ್ರೆಸ್‌ ನಿರ್ನಾಮ ಆಗಲಿದೆ ಎಂದು ಜಗಳೂರು ಕಾಂಗ್ರೆಸ್‌ ಮುಖಂಡರು ಏಕವಚನದಲ್ಲಿ ಜಯಸಿಂಹ ವಿರುದ್ಧ ವಾಗ್ಧಾಳಿ ನಡೆಸಿದರು. ರಾಜೇಶ್‌ರಿಗೆ
ಟಿಕೆಟ್‌ ಕೊಡಬೇಕಿರುವುದು ನೀವೇ. ನಾವು ಯಾರನ್ನೂ ಹೈ ಕಮಾಂಡ್‌ ಎಂದು ಒಪ್ಪಲ್ಲ. ನೀವೇ ರಾಜೇಶ್‌ರನ್ನು ಪಕ್ಷಕ್ಕೆ ಕರೆತಂದು ಕಳೆದ ಬಾರಿ ಟಿಕೆಟ್‌ ಕೊಡಿಸಿದ್ದೀರಿ. ಈ ಬಾರಿ ಸಹ ನೀವೇ ಟಿಕೆಟ್‌ ಕೊಡಿಸಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಎಸ್‌. ಮಲ್ಲಿಕಾರ್ಜುನ್‌ ಅವರಿಗೆ ಮನವಿ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next