Advertisement

ರಾಜಸ್ಥಾನದ ಜಲಯೋಧ ವಾಟರ್‌ ಮ್ಯಾನ್‌ ರಾಜೇಂದ್ರ ಸಿಂಗ್‌

03:38 PM Oct 27, 2020 | Karthik A |

ಇಡೀ ಪ್ರಪಂಚದಲ್ಲೇ ಎರಡನೇ ಅತಿ ಹೆಚ್ಚು ಮಳೆ ಬೀಳುವ ಪ್ರದೇಶ ಭಾರತ. 

Advertisement

ಸುಮಾರು 113 ನದಿ, 13 ಲಕ್ಷ ಕೆರೆ, ಕುಂಟೆಗಳ ಅತ್ಯದ್ಭುತ ಜಾಲ ಹೊಂದಿರುವ ದೇಶ ನಮ್ಮದು. ಇಷ್ಟಿದ್ದರೂ ತಾತನ ಕಾಲದಲ್ಲಿ ತೆರೆದ ಬಾವಿ, ಮಗನ ಕಾಲದಲ್ಲಿ ಕೊಳವೆ ಬಾವಿ, ಮೊಮ್ಮಗನ ಕಾಲಕ್ಕೆ ಏನು ಎನ್ನುವ ಪ್ರಶ್ನೆ ನಮ್ಮೆದುರಿಗಿದೆ.

ಇಂದು ಕುಡಿಯುವ ನೀರಿನ ಬಾವಿಗಳೊಂದಿಗೆ ಸಂಬಂಧವೇ ಇಲ್ಲದಂತಾಗಿವೆ. ಅರೆ ಮಲೆನಾಡು ಪ್ರದೇಶದಲ್ಲೂ ನೀರಿನ ಕೊರತೆಯಿಂದ ತೋಟಗಳು ಒಣಗುತ್ತಿದ್ದು, ಅರಣ್ಯ ಪ್ರದೇಶದಲ್ಲೂ ಸಾವಿರ ಅಡಿ ಕೊರೆದರೂ ನೀರು ಸಿಗುತ್ತಿಲ್ಲ ಎನ್ನುವುದು ನೀರಿನ ಕ್ಷಾಮದ ಪರಿಸ್ಥಿತಿಗೆ ಹಿಡಿದ ಕನ್ನಡಿಯಾಗಿದೆ.

ಈ ಹಿನ್ನೆಲೆಯಲ್ಲಿಯೇ ದೇಶ ಸೇರಿದಂತೆ ಇಡೀ ವಿಶ್ವಕ್ಕೆ ಎದುರಾಗಿರುವ ಜಲಕ್ಷಾಮದ ಬಗ್ಗೆ ನಿರಂತರವಾಗಿ ಧ್ವನಿ ಎತ್ತುತ್ತಲೇ ರಾಜೇಂದ್ರ ಸಿಂಗ್‌ ಜಲ ಸಂಪನ್ಮೂಲಗಳ ಸಂರಕ್ಷಣೆ ಕುರಿತು ಎಚ್ಚರಿಸುತ್ತ ಬಂದಿದ್ದಾರೆ. ಭಾರತದ ಜಲ ರಕ್ಷಕ, ಅಂಬಿಗ, ಭಗೀರಥ ಎಂದು ಹೆಮ್ಮೆಯಿಂದ ಕರೆಯಲ್ಪಡುವ ರಾಜೇಂದ್ರ ಸಿಂಗ್‌ ಅವರು ಆಧುನಿಕ ಭಾರತದ ನಿರ್ಮಾತೃ. ಮೂಲತಃ ಉತ್ತರ ಪ್ರದೇಶದ ಬಾಗ್‌ಪತ್‌ ಜಿಲ್ಲೆಯವರಾಗಿರುವ ರಾಜೇಂದ್ರ ಸಿಂಗ್‌ ನೀರಿನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವುದರೊಂದಿಗೆ ಕೆರೆ, ಕುಂಟೆ, ನದಿ ಮೂಲಗಳನ್ನು ಮಾಲಿನ್ಯದಿಂದ ರಕ್ಷಿಸುವುದರಲ್ಲಿಯೂ ಪ್ರಮುಖ ಪಾತ್ರ ವಹಿಸಿದ್ದು, ಇಂದಿಗೂ ಶ್ರಮಿಸುತ್ತಿದ್ದಾರೆ.

ಈ ಕಾರ್ಯಕ್ಕೆ ಪ್ರೇರಣೆಯಾದವರು
1974ರಲ್ಲಿ ಗಾಂಧಿ ಶಾಂತಿ ಪ್ರತಿಷ್ಠಾನದ ಸದಸ್ಯರಾದ ರಮೇಶ್‌ ಶರ್ಮ ಅವರು ರಾಜೇಂದ್ರ ಅವರು ವ್ಯಾಸಂಗ ಮಾಡುತ್ತಿದ್ದ ಪ್ರೌಢಶಾಲೆಗೆ ಭೇಟಿ ನೀಡಿದ್ದರು. ಪಟ್ಟಣದ ಸ್ವತ್ಛತೆ, ಗ್ರಂಥಾಲಯ ನಿರ್ಮಾಣ, ಗ್ರಾಮಸ್ಥರ ಸಾಮರಸ್ಯ, ಮದ್ಯ ಪುನರ್ವಸತಿ ಕೇಂದ್ರ ಸ್ಥಾಪನೆ ಕುರಿತು ಮುಕ್ತವಾಗಿ ಚರ್ಚೆ ನಡೆಸಿದ್ದರು. ಈ ಎಲ್ಲ ಅಂಶಗಳು ರಾಜೇಂದ್ರ ಅವರನ್ನು ಸಾಮಾಜಿಕ ಕಾರ್ಯದಲ್ಲಿ ತೊಡಗಿಸಿಕೊಳ್ಳುವಂತೆ ಪ್ರೇರೇಪಿಸಿತ್ತು.

Advertisement

ಇದರೊಂದಿಗೆ ಶಾಲೆಯಲ್ಲಿದ್ದಾಗ ಇಂಗ್ಲಿಷ್‌ ಭಾಷೆಯ ಶಿಕ್ಷಕ ಪ್ರತಾಪ್‌ ಸಿಂಗ್‌ ಅವರು ತರಗತಿ ಮುಗಿದ ಅನಂತರ ರಾಜಕೀಯ ಮತ್ತು ಸಾಮಾಜಿಕ ಸಮಸ್ಯೆಗಳ ಬಗ್ಗೆ ವಿದ್ಯಾರ್ಥಿಗಳ ಜತೆ ಚರ್ಚಿಸುತ್ತಿದ್ದರು. ಮೊದಲೇ ಪ್ರೇರೇಪಿತರಾಗಿ ರಾಜೇಂದ್ರ ಅವರಿಗೆ ಇಂಗ್ಲಿಷ್‌ ಶಿಕ್ಷಕರು ತರಗತಿಯಲ್ಲಿ ಹಂಚಿಕೊಳ್ಳುತ್ತಿದ್ದ ವಿಚಾರಧಾರೆಗಳು, ವಿಷಯವಸ್ತುಗಳು ಮತ್ತಷ್ಟು ಸ್ಫೂರ್ತಿ ತುಂಬಿತ್ತು.

ಬತ್ತಿ ಹೋಗಿದ್ದ ನದಿಗಳಿಗೆ ಜೀವ ತುಂಬಿದವರು
ಕಾಲೇಜು ಪದವಿ ಪಡೆದ ಅನಂತರ, ಅನೇಕ ವಿದ್ಯಾರ್ಥಿಗಳು ಉನ್ನತ ಶಿಕ್ಷಣ, ವೃತ್ತಿ ಜೀವನ ಎಂಬಿತ್ಯಾದಿ ಮಾರ್ಗಗಳನ್ನು ಆಯ್ಕೆ ಮಾಡಿಕೊಂಡರು. ಆದರೆ ಮೊದಲಿನಿಂದಲೂ ಸಮಾಜಕ್ಕೆ ನೆರವಾಗುವಂತಹ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕೆಂಬ ಮಹಾದಾಸೆಯನ್ನಿಟ್ಟುಕೊಂಡಿದ್ದ ರಾಜೇಂದ್ರ ಅವರು ಮಾತ್ರ ಮುಖ ಮಾಡಿದ್ದು ಜಲ ಸಂರಕ್ಷಣೆ ಕಾರ್ಯದತ್ತ. ಸಾಂಪ್ರದಾಯಿಕ ಕೊಯ್ಲು ವಿಧಾನಗಳನ್ನು ಅಳವಡಿಸಿಕೊಳ್ಳುವ ಮೂಲಕ ದಶಕಗಳ ಹಿಂದೆ ಬತ್ತಿ ಹೋಗಿದ್ದ ಜೋಹಾದ್‌ ನದಿ ಪುನಶ್ಚೇತನ ಮಾಡಿದ್ದರು.

“ತರುಣ್‌ ಭಾರತ್‌’
ರಾಜೇಂದ್ರ ಸಿಂಗ್‌ ಅವರು 1975ರಲ್ಲಿ ಸರಕಾರೇತರ ಸಂಸ್ಥೆ ತರುಣ ಭಾರತ ಸಂಘ ಸ್ಥಾಪಿಸಿ ಮುನ್ನಡೆಸುತ್ತಿದ್ದು, ಗ್ರಾಮ ಮೂಲಾಧಾರಿತ ಕಿಶೋರಿ-ಭಿಕಾಂಪುರ ಎಂಬ ಸಂಘವನ್ನು ಸರಿಸ್ಕಾದ ಹತ್ತಿರ ತನಘಾಜಿ ತಾಲ್ಲೂಕಿನಲ್ಲಿ ನಡೆಸುತ್ತಿದ್ದಾರೆ. ಹಾಗೇ ಜಲ ಸಂರಕ್ಷಣೆ ಮುಂದಿನ ಹಂತವಾಗಿ “ತರುಣ್‌ ಭಾರತ್‌’ ಎಂಬ ಸಂಘ ಕಟ್ಟಿಕೊಂಡು ರುಪರೆಲ್…, ಸಾರ್ಸಾ, ಭಾಗನಿ, ಮತ್ತು ಜಹಜವಾಲಿ ನದಿಗಳನ್ನು ಪುನಶ್ಚೇತನಗೊಳಿಸಿದ್ದಾರೆ.

ಕಳೆದ 35 ವರ್ಷಗಳಲ್ಲಿ ಅವರು 12,500 ಚೆಕ್‌ ಡ್ಯಾಂ, ಬಾಂದಾರು, ಕೆರೆಗಳ ನಿರ್ಮಾಣ ಮಾಡಿದ್ದಾರೆ. 60 ವರ್ಷಗಳ ಹಿಂದೆ ಬತ್ತಿ ಹೋಗಿದ್ದ ಅರವರಿ ನದಿಯಲ್ಲಿ ನೀರು ಚಿಮ್ಮುವ ಹಾಗೆ ಮಾಡಿದ್ದು, ಜಹಜವಾಲಿ ಸಹಿತ ಬತ್ತಿ ಹೋಗಿದ್ದ ಏಳು ನದಿಗಳು ಮತ್ತೆ ಮೈದುಂಬಿಕೊಂಡು ಹರಿಯುವಂತೆ ಮಾಡಿದ್ದ ಕೀರ್ತಿ ಸಿಂಗ್‌ ಅವರಿಗೆ ಸಲ್ಲುತ್ತದೆ. ಇದರೊಂದಿಗೆ ಮೊದಲಿಗೆ ರಾಜಸ್ಥಾನದ ಆಳ್ವಾರ್‌ ಜಿಲ್ಲೆಯನ್ನು ಕೇಂದ್ರವಾಗಿಸಿಕೊಂಡು ಕೆಲಸ ಪ್ರಾರಂಭಿಸಿದ್ದ ರಾಜೇಂದ್ರ ಸಿಂಗ್‌ ಅವರು ಅನಂತರ ಇದರ ವ್ಯಾಪ್ತಿಯನ್ನು ರಾಜ್ಯದ 11 ಜಿಲ್ಲೆಗಳಿಗೆ ವಿಸ್ತರಿಸಿ 850 ಗ್ರಾಮಗಳಲ್ಲಿ 4,500 ಚೆಕ್‌ ಡ್ಯಾಂಗಳನ್ನು ನಿರ್ಮಿಸುವ ಮೂಲಕ ಮಳೆ ನೀರು ಸಂಗ್ರಹಿಸುವ ಕೆಲಸ ಮಾಡಿದ್ದಾರೆ. ಮಧ್ಯಪ್ರದೇಶ, ಗುಜರಾತ್‌, ಆಂಧ್ರ ಪ್ರದೇಶಕ್ಕೂ “ತರುಣ್‌ ಭಾರತ್‌’ ಸಂಘದ ಚಟುವಟಿಕೆ ವಿಸ್ತರಿಸಿದ್ದು, ನೀರಿನ ಮೂಲದ ಉಳಿವಿಗಾಗಿ ಗಣಿಗಾರಿಕೆ ವಿರುದ್ಧವೂ ಹೋರಾಟ ಮಾಡಿದ್ದಾರೆ. ಜತೆಗೆ ಸಾರಿಸ್ಕಾ ಹುಲಿ ಮೀಸಲು ಪ್ರದೇಶಕ್ಕೆ, ನಿಧಾನ ಆಡಳಿತಶಾಯಿ, ಗಣಿಗಾರಿಕೆ ಲಾಬಿ ವಿರುದ್ಧ ಹೋರಾಟ ನಡೆಸಲು ಕಾರಣಿಭೂತರಾಗಿದ್ದಾರೆ.‌

ಸಾವಿರಕ್ಕಿಂತ ಹೆಚ್ಚು ಹಳ್ಳಿಗಳಿಗೆ ನೀರಿನ ಸೌಲಭ್ಯ
ಮಳೆನೀರು ಸಂಗ್ರಹಣ ತೊಟ್ಟಿಗಳ ಮೂಲಕ ಥಾರ್‌ ಮರುಭೂಮಿ ಹತ್ತಿರ ಒಡ್ಡುಗಳು, ಅಣೆಕಟ್ಟುಗಳ ಮೂಲಕ ಅರೆ-ಶುಷ್ಕ ಪ್ರದೇಶದಲ್ಲಿ ಹಳ್ಳಿಗರಿಗೆ ನೀರು ದೊರೆಯುವಂತೆ ಮಾಡಿದ್ದಾರೆ. ಸಮಯೋಚಿತ, ಪ್ರಾಯೋಗಿಕ ವಿಧಾನ ಮತ್ತು ತಂತ್ರಗಾರಿಕೆಯ ಮೂಲಕ ನೀರಿನ ಸಮಸ್ಯೆಯನ್ನು ನೀಗಿಸುವಲ್ಲಿ ಸಹಾಯಸ್ತ ನೀಡಿದ್ದಾರೆ.

1985ರಲ್ಲಿ ರಾಜಸ್ಥಾನದ ಮೂಲದ ಒಂದು ಹಳ್ಳಿಯಿಂದ ಈ ಕಾರ್ಯ ಯೋಜನೆಯನ್ನು ಆರಂಭಿಸಿದ ರಾಜೇಂದ್ರ ಸಿಂಗ್‌ ಮಳೆ ನೀರನ್ನು ಸಂಗ್ರಹಿಸಿ ಸುಮಾರು 8,600 ನೀರಿನ ಒಡ್ಡುಗಳನ್ನು ನಿರ್ಮಿಸಿದ್ದು, ನೀರಿನ ಸಂರಕ್ಷಣೆಗೆ ನೆರವಾಗುವಂತಹ ಇಂತಹ ಸರಳ ವಿಧಾನಗಳನ್ನು ಕಾರ್ಯರೂಪಕ್ಕೆ ತರುವ ಮೂಲಕ ಗ್ರಾಮೀಣ ಪ್ರದೇಶಿಗರಿಗೆ ನೆರವಾಗಿದ್ದಾರೆ. ಈ ಮೂಲಕ ಸಾವಿರಕ್ಕಿಂತ ಹೆಚ್ಚು ಹಳ್ಳಿಗಳಿಗೆ ನೀರಿನ ಸೌಲಭ್ಯ ದೊರೆಯುವಂತೆ ಮಾಡಿದ್ದು, ರಾಜಸ್ಥಾನದ ಅರವಾರಿ, ರುಪರೆಲ್‌, ಸಾರ್ಸ, ಭಾಗನಿ, ಮತ್ತು ಜಹಜವಾಲಿ ಈ ಐದು ನದಿಗಳನ್ನು ಪುನಶ್ಚೇತನಗೊಳಿಸಿದ್ದಾರೆ.

ಪ್ರಶಸ್ತಿಗಳ ಭರಪೂರ
“ಭಾರತದ ಅಂಬಿಗ’, “ಭಾರತದ ಜಲ ರಕ್ಷಕ’, “ಸ್ಟಾಕ್‌ ಹೋಮ್‌ ವಾಟರ್‌ ಪ್ರಶಸ್ತಿ’, “ನೀರಿನ ನೊಬೆಲ್‌ ಪ್ರಶಸಿ’ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡು ರಾಜೇಂದ್ರ ಸಿಂಗ್‌ “ವಾಟರ್‌ ಮ್ಯಾನ್‌’ ಎಂದೇ ಪ್ರಸಿದ್ಧರು. ಇದರೊಂದಿಗೆ ಇವರು ಸಮುದಾಯ ಮಟ್ಟದಲ್ಲಿ ಅಳವಡಿಸಿಕೊಂಡ ನೀರು ಕೊಯ್ಲು ವಿಧಾನ ಮತ್ತು ನೀರಿನ ನಿರ್ವಹಣೆ ಆಧಾರಿತ ಪ್ರಯತ್ನಗಳು ಮತ್ತು ಸಮುದಾಯದ ನಾಯಕತ್ವ ಪ್ರವರ್ತಕ ಕೆಲಸಕ್ಕೆ ರಾಮನ್‌ಮ್ಯಾಗ್ಸೆಸೆ ಪ್ರಶಸ್ತಿ ಪಡೆದಿದ್ದಾರೆ.

 ಸುಶ್ಮಿತಾ ಜೈನ್‌, ಉಜಿರೆ 

Advertisement

Udayavani is now on Telegram. Click here to join our channel and stay updated with the latest news.

Next