Advertisement

ಚಿಕ್ಕಮಗಳೂರು: 100 ಕೋಟಿ ರೂ. ಮಳೆ ಹಾನಿ: ರಾಜೇಗೌಡ

02:09 PM Aug 13, 2020 | sudhir |

ಚಿಕ್ಕಮಗಳೂರು: ಆಶ್ಲೇಷ ಮಹಾಮಳೆಗೆ ಶೃಂಗೇರಿ ಮತ್ತು ನರಸಿಂಹರಾಜಪುರ ತಾಲೂಕಿನಲ್ಲಿ ಅಂದಾಜು 100 ಕೋಟಿ ರೂ. ಮಳೆಹಾನಿ ಸಂಭವಿಸಿದೆ ಎಂದು ಶೃಂಗೇರಿ ಕ್ಷೇತ್ರದ ಶಾಸಕ ಟಿ.ಡಿ.ರಾಜೇಗೌಡ ತಿಳಿಸಿದರು.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 2018ರಲ್ಲಿ ತುಂಗಾನದಿ ಪಾತ್ರದಲ್ಲಿ ಪ್ರವಾಹ ಉಂಟಾಗಿತ್ತು. 2019ರಲ್ಲಿ ಭದ್ರಾನದಿ ಪಾತ್ರದಲ್ಲಿ ಪ್ರವಾಹ ಉಂಟಾಗಿ ಅಪಾರ ಪ್ರಮಾಣದಲ್ಲಿ ಹಾನಿ ಉಂಟಾಗಿತ್ತು. 2020ರಲ್ಲಿ ತುಂಗಾನದಿ ಪಾತ್ರದದ ಶೃಂಗೇರಿ, ಕೆರೆಕಟ್ಟೆ, ನಿಮ್ಮಾರ್‌, ಬೇಗಾರ್‌, ಕುಂಚೇಬೈಲು ಕೊಪ್ಪ ಭಾಗದ ಬಸರಿಕಟ್ಟೆ, ನಾರ್ವೆ, ಕಮ್ಮರಡಿ ಭಾಗದಲ್ಲಿ ಭಾರೀ ಮಳೆಯಾಗಿದ್ದು, ಅಪಾರ ಪ್ರಮಾಣದ ಹಾನಿ ಸಂಭವಿಸಿದೆ ಎಂದು ತಿಳಿದರು.

ಕೃಷಿ ಮತ್ತು ತೋಟಗಾರಿಕೆ ಬೆಳೆಗಳಿಗೆ ಭಾರೀ ಪ್ರಮಾಣದ ಹಾನಿ ಉಂಟಾಗಿದೆ. ಭಾರೀ ಗಾಳಿಯಿಂದ ನೂರಾರು ಅಡಿಕೆ ಮರ ಉರುಳಿ ಬಿದ್ದಿವೆ. ಕಾಳುಮೆಣಸು ಹಾನಿಯಾಗಿದೆ. ನೀರಿನ ರಭಸಕ್ಕೆ ಅನೇಕ ಚರಂಡಿಗಳಿಗೆ ಮತ್ತು ಸೇತುವೆಗಳಿಗೆ ಹಾನಿಯಾಗಿದೆ. ಗ್ರಾಮೀಣ ಮತ್ತು ಪಟ್ಟಣ ಪ್ರದೇಶಗಳ ರಸ್ತೆಗಳು ಹಾನಿಯಾಗಿವೆ. ಅನೇಕ ಕಡೆ ಧರೆ ಕುಸಿತ ಉಂಟಾಗಿದ್ದು, ಮಹಾಮಳೆಗೆ ತಾಲೂಕಿನಲ್ಲಿ ಇಬ್ಬರು ಮೃತಪಟ್ಟಿದ್ದು, ಮೂರು ಜಾನುವಾರು ಸಾವನ್ನಪ್ಪಿವೆ ಎಂದರು. ಮೃತ ಕುಟುಂಬಕ್ಕೆ ಪರಿಹಾರದ ಚೆಕ್‌ ವಿತರಿಸಲಾಗಿದೆ.

ಹಾನಿಗೊಳಗಾದ ಪ್ರದೇಶ ಒಂದೊಂದು ಕಾಮಗಾರಿಗೆ 2 ರಿಂದ 3 ಕೋಟಿ ಹಣ ಬೇಕಾಗಿದೆ. ತೋಟಗಾರಿಕೆ ಬೆಳೆ ಹಾನಿ ಸಮೀಕ್ಷೆ ನಡೆಯುತ್ತಿದ್ದು, ವರದಿ ತಯಾರಾಗಬೇಕಿದೆ. ಮಳೆಹಾನಿ ಜಿಲ್ಲಾಡಳಿತ ಸರ್ಕಾರದ ಗಮನಕ್ಕೆ ತಂದಿದ್ದು, ಸರ್ಕಾರ ಈಗಾಗಲೇ
9 ಕೋಟಿ ರೂ. ಜಿಲ್ಲೆಗೆ ಬಿಡುಗಡೆ ಮಾಡಿದೆ. ಈ ಹಣದಲ್ಲಿ ತುರ್ತು ಕಾಮಗಾರಿ ಕೈಗೆತ್ತಿಕೊಳ್ಳಲಾಗುತ್ತಿದೆ. ಮಳೆ ಪ್ರವಾಹಕ್ಕೆ
ಸಿಲುಕಿ ಮೃತಪಟ್ಟ ಜಾನುವಾರುಗಳಿಗೆ ಪಶುಸಂಗೋಪನೆ ಇಲಾಖೆ ಕಡಿಮೆ ಪರಿಹಾರದ ಹಣ ನಿಗದಿಪಡಿಸಿದ್ದು, ಮರು
ಪರಿಶೀಲನೆ ನಡೆಸಿ ಪರಿಹಾರ ನೀಡುವಂತೆ ಅಧಿ ಕಾರಿಗಳಿಗೆ ತಿಳಿಸಲಾಗಿದೆ ಎಂದರು.

ಗುಡ್ಡೆತೋಟ ಗ್ರಾಮದಲ್ಲಿ ಗುಡ್ಡ ಕುಸಿದಿರುವುದರಿಂದ 16 ಕುಟುಂಬಗಳು ಅಪಾಯದಲ್ಲಿವೆ. ಈ ಕುಟುಂಬಗಳಲ್ಲಿ
ವಾಸವಾಗಿದ್ದವರನ್ನು ಶಾಲೆ ಮತ್ತು ಗ್ರಾಪಂ ಕಟ್ಟಡಕ್ಕೆ ಸ್ಥಳಾಂತರಿಸಲಾಗಿದೆ. ಇವರಿಗೆ ಪರ್ಯಾಯ ಜಾಗದ ವ್ಯವಸ್ಥೆ ಮಾಡಬೇಕಿದೆ. ಪಕ್ಕದಲ್ಲೇ ಪರ್ಯಾಯ ಜಾಗದ ವ್ಯವಸ್ಥೆಯಿದ್ದು, ಅರಣ್ಯ ಇಲಾಖೆ ಡೀಮ್ಡ್ ಫಾರೆಸ್ಟ್‌, ಮೀಸಲು ಅರಣ್ಯಕ್ಕೆ ಸೇರುತ್ತದೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಇವರಿಗೆ ಪರ್ಯಾಯ ಜಾಗ ಕಲ್ಪಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ
ಸಿ.ಟಿ.ರವಿ ಅವರ ಗಮನಕ್ಕೆ ತರಲಾಗಿದೆ. ಅರಣ್ಯ ಇಲಾಖೆಯೂ ಮಾನವೀಯ ನೆಲೆಗಟ್ಟಿನ ಮೇಲೆ ಅವರಿಗೆ ಪರ್ಯಾಯ ಜಾಗ ಕಲ್ಪಿಸಲು ಅನುವು ಮಾಡಿಕೊಡಬೇಕು ಎಂದು ತಿಳಿಸಿದರು. ಅತಿವೃಷ್ಟಿ ಪರಿಹಾರ ಕಾರ್ಯವನ್ನು ಅಧಿ ಕಾರಿಗಳು
ಸಮರ್ಪಕವಾಗಿ ನಿಭಾಯಿಸುತ್ತಿದ್ದಾರೆ. ಅಧಿಕಾರಿಗಳು ಪರಿಹಾರ ಕಾರ್ಯದಲ್ಲಿ ಲೋಪವೆಸಗಿದರೇ ಅವರ ವಿರುದ್ಧ ಶಿಸ್ತು ಕ್ರಮಕೈಗೊಳ್ಳುವುದಾಗಿ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವರು ಸೂಚನೆ ನೀಡಿದ್ದಾರೆ. ಪದೇ ಪದೇ ಭದ್ರಾನದಿ ಪ್ರವಾಹಕ್ಕೆ ಒಳಗಾಗುತ್ತಿರುವ ಬಾಳೆಹೊನ್ನೂರು ಭದ್ರಾನದಿ ಸೇತುವೆ ಪಕ್ಕದಲ್ಲಿರುವ ಜನವಸತಿ ಪ್ರದೇಶ ಮತ್ತು ಮಧುಗುಣಿ ಜನವಸತಿ ಪ್ರದೇಶವನ್ನು ಸ್ಥಳಾಂತರಿಸಬೇಕಾಗಿದ್ದು, ಇದಕ್ಕೆ ಪೂರ್ವ ಸಿದ್ಧತೆ ನಡೆಸಬೇಕಾಗಿದೆ ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next