Advertisement

ನಿಷಾಧ್‌ ವರ್ಸಸ್‌ ನಿಷಾಧ್‌

11:24 AM May 04, 2019 | Team Udayavani |

ಬಿಹಾರದ ಮುಝಫ‌್ಫರಪುರದಲ್ಲಿ ಎನ್‌ಡಿಎ ಮತ್ತು ಮಹಾಘಟಬಂಧನದ ನಡುವೆ ಕದನವೇರ್ಪಟ್ಟಿದೆ. ವಿಶೇಷವೆಂದರೆ ಎನ್‌ಡಿಎ ಮತ್ತು ಮಹಾಘಟಬಂಧನಗಳು ಒಂದೇ ಜಾತಿಯ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದು, ಇಬ್ಬರ ಸರ್‌ನೇಮ್‌ಗಳೂ ಒಂದೇ ಇದೆ. ಬಿಜೆಪಿಯು ಹಾಲಿ ಸಂಸದ ಅಜಯ್‌ ನಿಷಾಧ್‌ರಿಗೆ ಟಿಕೆಟ್ ನೀಡಿದ್ದರೆ, ಮಹಾಘಟಬಂಧನದ ಒತ್ತಾಸೆಯ ಮೇರೆಗೆ ವಿಕಾಸಶೀಲ್ ಇನ್ಸಾನ್‌ ಪಾರ್ಟಿಯಿಂದ ಡಾ.ರಾಜ್‌ಭೂಷಣ್‌ ನಿಷಾಧ್‌ ಕಣಕ್ಕಿಳಿದಿದ್ದಾರೆ. ಪಕ್ಕದ ಜಿಲ್ಲೆ ಸಮಸ್ತಿಪುರದಲ್ಲಿ ವೈದ್ಯಕೀಯ ವೃತ್ತಿ ನಡೆಸುತ್ತಿದ್ದ ಡಾ. ರಾಜ್‌ಭೂಷಣ್‌ ಅವರ ಬಗ್ಗೆ ಮಝಪ್ಪುರ ಕ್ಷೇತ್ರದ ಜನರಿಗೆ ಅಷ್ಟಾಗಿ ತಿಳಿದಿಲ್ಲ, ಆದರೆ ರಾಜ್‌ಭೂಷಣ್‌ ಮಾತ್ರ ತಾವು ಇದೇ ಕ್ಷೇತ್ರದಲ್ಲಿ ಹುಟ್ಟಿಬೆಳೆದ ಕಾರಣ, ಜನರ ನಾಡಿಮಿಡಿತ ತಿಳಿದಿದೆ ಎನ್ನುತ್ತಿದ್ದಾರೆ.

Advertisement

2014ರಲ್ಲಿ ಅಜಯ್‌ ನಿಷಾಧ್‌ ಸುಮಾರು 2.5 ಲಕ್ಷ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. ಬಿಜೆಪಿ ಕಾರ್ಯಕರ್ತರಷ್ಟೇ ಅಲ್ಲದೇ ಅತ್ಯಂತ ಹಿಂದುಳಿದ ವರ್ಗಗಳು ಮತ್ತು ದಲಿತ ಮತಗಳು ತಮ್ಮ ಬತ್ತಳಿಕೆಯಲ್ಲಿವೆ ಎನ್ನುವ ಕಾನ್ಫಿಡೆನ್ಸ್‌ನಲ್ಲಿ ಅಜಯ್‌ ನಿಷಾಧ್‌ ಇದ್ದಾರೆ. ಆದರೂ ಯಾದವರು ಮತ್ತು ಮುಸ್ಲಿಂ ಮತದಾರರು ಬಿಜೆಪಿ ಅಭ್ಯರ್ಥಿಯ ನಿದ್ದೆಗೆಡೆಸಿದ್ದಾರೆ ಎನ್ನುತ್ತಾರೆ ಎದುರಾಳಿಗಳು. ಮುಸ್ಲಿಂ-ಯಾದವ್‌ ಮತಗಳು ತಮ್ಮ ಪರವಾಗಿವೆ ಎನ್ನುವುದು ಡಾ. ರಾಜಭೂಷಣ್‌ ವಾದ.

ಜಾರ್ಜ್‌ ಫೆರ್ನಾಂಡಿಸ್‌ರಿಂದ ಖ್ಯಾತಿ ಪಡೆದ ಕ್ಷೇತ್ರ: ದಶಕಗಳವರೆಗೆ ಸೋಷಿಯಲಿಸ್ಟ್‌ ಸಿದ್ಧಾಂತವಾದಿಗಳಿಗೆ ಹೆಸರು ತಂದುಕೊಟ್ಟ ಕ್ಷೇತ್ರವಿದು. ಮುಝಫ‌್ಫರ ಪುರ ಕ್ಷೇತ್ರದ ಹೆಸರನ್ನು ಕನ್ನಡಿಗರು ತುಂಬಾ ಕೇಳಿದ್ದಾರೆ. 1977ರಲ್ಲಿ ನಮ್ಮವರೇ ಆದ ಜಾರ್ಜ್‌ ಫೆರ್ನಾಂಡಿಸ್‌ ಅವರು ಈ ಕ್ಷೇತ್ರದಿಂದ ಸ್ಪರ್ಧಿಸಿ ಕಾಂಗ್ರೆಸ್‌ನ ನವಲ್ ಕಿಶೋರ್‌ ಅವರನ್ನು ಬೃಹತ್‌ ಅಂತರದಿಂದ ಸೋಲಿಸಿದ್ದರು. ಆಗಿನಿಂದ ಈ ಕ್ಷೇತ್ರ ಕಾಂಗ್ರೆಸ್‌ಗೆ ಅಷ್ಟಾಗಿ ಕರುಣೆ ತೋರಿಸಿಯೇ ಇಲ್ಲ. 1984ರಲ್ಲಿ ಕಾಂಗ್ರೆಸ್‌ನ ಲಲಿತೇಶ್ವರ್‌ ಗೆದ್ದಿದ್ದರಷ್ಟೇ. ತದನಂತರದಿಂದ ಸುಮಾರು ಎರಡು ದಶಕಗಳವರೆಗೆ ಜಾರ್ಜ್‌ ಫೆರ್ನಾಂಡಿಸ್‌ ಮತ್ತು ಕ್ಯಾ.ಜೈನಾರಾಯಣ್‌ ನಿಷಾಧ್‌ ಅವರ ನಡುವೆಯೇ ಇಲ್ಲಿ ಚದುರಂಗ ಸ್ಪರ್ಧೆ ನಡೆಯುತ್ತಿತ್ತು. ಹಾಲಿ ಸಂಸದ, ಬಿಜೆಪಿಯ ಅಭ್ಯರ್ಥಿ ಅಜಯ್‌ ನಿಷಾಧ್‌ ಅವರು ಕ್ಯಾ.ಜೈ ನಾರಾಯಣ ನಿಷಾಧ್‌ ಅವರ ಮಗ.

ಈ ಕ್ಷೇತ್ರದ ಗೆಲುವು ಎರಡೂ ಪಕ್ಷಗಳಿಗೂ ಪ್ರತಿಷ್ಠೆಯ ವಿಷಯವಾಗಿದೆ. ಮಂಗಳ ವಾರವಷ್ಟೇ ಅಜಯ್‌ ನಿಷಾಧ್‌ರ ಪರವಾಗಿ ಪ್ರಧಾನಿ ಮೋದಿ, ಬಿಹಾರ ಸಿಎಂ ನಿತೀಶ್‌ಕುಮಾರ್‌, ಉಪಮುಖ್ಯಮಂತ್ರಿ ಸುಶೀಲ್ ಕುಮಾರ್‌ ಮೋದಿ, ಎಲ್ಜೆಪಿ ಮುಖ್ಯಸ್ಥ ರಾಂ ವಿಲಾಸ್‌ ಪಾಸ್ವಾನ್‌ ಅಜಯ್‌ ನಿಷಾಧ್‌ ಪರವಾಗಿ ಭರ್ಜರಿ ರ್ಯಾಲಿ ನಡೆಸಿದ್ದಾರೆ. ಇತ್ತ ಡಾ. ರಾಜಭೂಷಣ್‌ ಅವರ ಪರವಾಗಿ ಮಹಾಘಟಬಂಧನದ ನಾಯಕರು ಪ್ರಚಾರ ನಡೆಸಿಹೋಗಿದ್ದಾರೆ.

ಮೋದಿ ಸರ್ಕಾರವನ್ನು ಕೆಳಕ್ಕುರುಳಿಸುವುದೇ ತಮ್ಮ ಗುರಿ ಎನ್ನುತ್ತಾರೆ ಡಾ. ರಾಜಭೂಷಣ್‌ ನಿಷಾಧ್‌, ಈ ಬಾರಿಯೂ ಮೋದಿ ಅಲೆ ಇದೆ ಎನ್ನುತ್ತಾರೆ ಅಜಯ್‌ ನಿಷಾಧ್‌

Advertisement

ಅಭಿವೃದ್ಧಿ ಮಾತಿಲ್ಲ, ಮೋದೀನೇ ಎಲ್ಲ!: ಎರಡೂ ಪಕ್ಷದ ಅಭ್ಯರ್ಥಿಗಳ ಬಗ್ಗೆ ಜನಸಾಮಾನ್ಯರಿಗೆ ಏನನ್ನಿಸುತ್ತದೆ ಎಂಬ ಪ್ರಶ್ನೆ ಎದುರಿಟ್ಟಾಗ ಮನೀಂದ್ರ ಪ್ರಸಾದ್‌ ಎನ್ನುವ ಕಾರ್ಮಿಕರು ಟೈಮ್ಸ್‌ ಆಫ್ ಇಂಡಿಯಾ ಪತ್ರಿಕೆಗೆ ಹೇಳಿದ್ದು ಹೀಗೆ: ”ಈ ಬಾರಿ ಚುನಾವಣೆಯಲ್ಲಿ ಯಾವ ಅಭ್ಯರ್ಥಿಯೂ ಮುಖ್ಯವಿಷಯವನ್ನೇ ಮಾತನಾಡುತ್ತಿಲ್ಲ. ಒಬ್ಬರು ಮೋದಿಯ ಹೆಸರಲ್ಲಿ ವೋಟ್ ಕೇಳುತ್ತಾರೆ, ಇನ್ನೊಬ್ಬರು ಮೋದಿಯನ್ನು ಸೋಲಿಸುವುದಾಗಿ ಹೇಳಿ ವೋಟ್ ಕೇಳುತ್ತಾರೆ. ಚುನಾವಣೆಯೆನ್ನುವುದು ಅಭಿವೃದ್ಧಿಗಿಂತ ಬರೀ ಮೋದಿಗೇ ಸೀಮಿತವಾಗಿಬಿಟ್ಟಿದೆ”

ಲಿಚ್ಚಿ ಹಣ್ಣುಗಳಿಗೆ ಖ್ಯಾತಿವೆತ್ತಿರುವ ಮುಝಫ‌್ಫರಪುರದಲ್ಲಿ ಮೇ 6ರಂದು ಚುನಾವಣೆ ನಡೆಯಲಿದೆ, ಈ ಬಾರಿ ಈ ಕ್ಷೇತ್ರದ ಜನರು ಯಾವ ನಿಷಾಧ್‌ರನ್ನು ಕುರ್ಚಿಯ ಮೇಲೆ ಕೂರಿಸುತ್ತಾರೋ ನೋಡಬೇಕಿದೆ.

Advertisement

Udayavani is now on Telegram. Click here to join our channel and stay updated with the latest news.

Next