ಬಹುತೇಕ ಹೊಸ ಪ್ರತಿಭೆಗಳೇ ಸೇರಿ ನಿರ್ಮಿಸುತ್ತಿರುವ “ರಾಜವನ’ ಚಿತ್ರದ ಮೊದಲ ಪೋಸ್ಟರ್ ಇತ್ತೀಚೆಗೆ ಬಿಡುಗಡೆಯಾಗಿದೆ. ಹಿರಿಯ ಸಾಹಿತಿ ಪ್ರೊ. ದೊಡ್ಡರಂಗೇ ಗೌಡ, ಹಿರಿಯ ನಿರ್ದೇಶಕ ಓಂ ಸಾಯಿಪ್ರಕಾಶ್, ಹಿರಿಯ ನಟ ಅಂಜನಪ್ಪ ಮೊದಲಾದವರು ಸಮಾರಂಭದಲ್ಲಿ ಹಾಜರಿದ್ದು, “ರಾಜವನ’ ಚಿತ್ರದ ಮೊದಲ ಪೋಸ್ಟರ್ ಬಿಡುಗಡೆಗೊಳಿಸಿದರು.
ಹಿರಿಯ ನಿರ್ದೇಶಕ ಓಂ ಸಾಯಿಪ್ರಕಾಶ್ ಅವರ ಬಳಿ ಸಹಾಯಕರಾಗಿ ಹಲವು ಚಿತ್ರಗಳಿಗೆ ಕೆಲಸ ಮಾಡಿದ ಅನುಭವವಿರುವ ಈರಣ್ಣ ಎನ್. ಮಧುಗಿರಿ “ರಾಜವನ’ ಚಿತ್ರಕ್ಕೆ ಕಥೆ, ಚಿತ್ರಕಥೆ, ಸಾಹಿತ್ಯ, ಸಂಭಾಷಣೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ.
ಚಿತ್ರದ ಬಗ್ಗೆ ಮಾತನಾಡಿದ ಈರಣ್ಣ ಎನ್. ಮಧುಗಿರಿ, “ನಮ್ಮ ಸುತ್ತಮುತ್ತ ನಡೆಯುವ ಕೆಲ ವಿಷಯಗಳನ್ನು ಇಟ್ಟುಕೊಂಡು, ಈ ಸಿನಿಮಾ ಮಾಡುತ್ತಿದ್ದೇವೆ. ಒಂದಷ್ಟು ನೈಜ ಘಟನೆಗಳೇ ಈ ಸಿನಿಮಾ ಮಾಡಲು ಕಾರಣವಾಯ್ತು. ಚಿತ್ರದ ಕಥೆಯನ್ನು ಮೊದಲು ಕೇಳಿದ ನಿರ್ಮಾಪಕರು, ತಕ್ಷಣವೇ ಈ ಕಥೆಯನ್ನು ಸಿನಿಮಾ ಮಾಡಲು ಒಪ್ಪಿಕೊಂಡರು. ಇದರಲ್ಲಿ ಮನರಂಜನೆಯ ಜೊತೆಗೆ ಒಂದೊಳ್ಳೆ ಸಂದೇಶವನ್ನೂ ತೆರೆಮೇಲೆ ಹೇಳುತ್ತಿದ್ದೇವೆ. ಲವ್, ಆ್ಯಕ್ಷನ್, ಸಸ್ಪೆನ್ಸ್-ಥ್ರಿಲ್ಲರ್ ಎಲ್ಲ ಅಂಶಗಳೂ ಈ ಸಿನಿಮಾದಲ್ಲಿದೆ. ಚಿತ್ರದ ಕಲಾವಿದರು ಮತ್ತು ಇತರ ತಂತ್ರಜ್ಞರ ಬಗ್ಗೆ ಶೀಘ್ರದಲ್ಲಿಯೇ ಮಾಹಿತಿ ನೀಡಉತ್ತೇವೆ’ ಎಂದರು.
“ಶ್ರೀ ಶ್ರೀ ಶ್ರೀ ಮೂಗೂರು ತಿಬ್ಟಾದೇವಿ ಪ್ರೊಡಕ್ಷನ್ಸ್’ ಬ್ಯಾನರ್‌ನಲ್ಲಿ ನಿರ್ಮಾಣ ವಾಗುತ್ತಿರುವ ಈ ಚಿತ್ರಕ್ಕೆ ಡಾ. ರಾಜು ಆರ್.ಎಸ್ (ರಾಂಪುರ) ಬಂಡವಾಳ ಹೂಡಿ ನಿರ್ಮಿಸುತ್ತಿದ್ದಾರೆ. ಚಿತ್ರದ ಬಗ್ಗೆ ಮಾತನಾಡಿದ ನಿರ್ಮಾಪಕ ಡಾ. ರಾಜು ಆರ್.ಎಸ್, “ನಾನು ರಾಜಕೀಯ ಕ್ಷೇತ್ರದಲ್ಲಿ ಸಕ್ರಿಯವಾಗಿದ್ದರೂ, ಸಿನಿಮಾ ಕ್ಷೇತ್ರವನ್ನು ಹತ್ತಿರದಿಂದ ಬಲ್ಲೆ. ಸುಮಾರು ಹದಿನೈದು ವರ್ಷಗಳ ಹಿಂದೆಯೇ ಹಿರಿಯ ನಿರ್ದೇಶಕ ಓಂ ಸಾಯಿಪ್ರಕಾಶ್ ನೀವು ಮುಂದೆ ನಿರ್ಮಾಪಕರಾಗಿ ಸಿನಿಮಾ ನಿರ್ಮಿಸುವಂತಾಗಲಿ ಎಂದರು ಹಾರೈಸಿದ್ದರು. ಅದರ ಹಾರೈಕೆಯಂತೆ ಈ ಸಿನಿಮಾ ನಿರ್ಮಿಸುತ್ತಿದ್ದೇನೆ. ಸಿನಿಮಾದ ಕಥೆಯನ್ನು ನಿರ್ದೇಶಕರು ಹೇಳಿದಾಗ ತುಂಬ ಇಷ್ಟವಾಯ್ತು. ಕೂಡಲೇ ಈ ಕಥೆಯನ್ನು ನಾನೇ ಸಿನಿಮಾ ಮಾಡಬೇಕು ಅಂಥ ನಿರ್ಧರಿಸಿ, ಈ ಸಿನಿಮಾ ಮಾಡಲು ಮುಂದಾದೆ’ ಎಂದರು.
“ರಾಜವನ’ ಚಿತ್ರದ ಶೀರ್ಷಿಕೆಗೆ “ಕಾಮದರಮನೆಗೆ ಪ್ರೇಮದಕೋಟೆ?!’ ಎಂಬ ಅಡಿಬರಹವಿದೆ. ಸದ್ಯ ಚಿತ್ರದ ಪ್ರೀ-ಪ್ರೊಡಕ್ಷನ್ ಅಂತಿಮ ಹಂತದ ಕೆಲಸಗಳಲ್ಲಿ ನಿರತವಾಗಿರುವ ಚಿತ್ರತಂಡ, ಶೀಘ್ರದಲ್ಲಿಯೇ ಚಿತ್ರದ ಚಿತ್ರೀಕರಣ ಆರಂಭಿಸುವ ಯೋಚನೆಯಲ್ಲಿದೆ.