Advertisement

ಉಡುಪಿ ಜಿಲ್ಲಾ ರಜತೋತ್ಸವದ ಲಾಂಛನ ಅನಾವರಣ : 5 ಸಾವಿರ ವಿದ್ಯಾರ್ಥಿಗಳಿಂದ ಪುರಮೆರವಣಿಗೆ

09:00 AM Aug 23, 2022 | Team Udayavani |

ಮಣಿಪಾಲ: ಉಡುಪಿ ಜಿಲ್ಲೆಯ ರಜತ ಮಹೋತ್ಸವ ಕಾರ್ಯಕ್ರಮದಲ್ಲಿ ವಿವಿಧ ಕಾಲೇಜಿನ 5 ಸಾವಿರ ವಿದ್ಯಾರ್ಥಿಗಳಿಂದ ಬೋರ್ಡ್‌ ಹೈಸ್ಕೂಲ್‌ನಿಂದ ಮಹಾತ್ಮಾ ಗಾಂಧಿ ಜಿಲ್ಲಾ ಕ್ರೀಡಾಂಗಣದವರೆಗೆ ಪುರ ಮೆರವಣಿಗೆ ಹಮ್ಮಿಕೊಂಡಿದ್ದೇವೆ. ಅನಂತರ ನಡೆಯುವ ಸಭಾ ಕಾರ್ಯಕ್ರಮದಲ್ಲಿ ರಾಜ್ಯಪಾಲ ತಾವರ್‌ಚಂದ್‌ ಗೆಹ್ಲೋಟ್ ಅವರು ರಜತ ಮಹೋತ್ಸವಕ್ಕೆ ಚಾಲನೆ ನೀಡಲಿದ್ದಾರೆ ಎಂದು ಶಾಸಕ ರಘುಪತಿ ಭಟ್‌ ಹೇಳಿದ್ದಾರೆ.

Advertisement

ಜಿಲ್ಲೆಯ ಎಲ್ಲ ಪಂಚಾಯತ್‌ಗಳಿಂದ ಕನಿಷ್ಠ 50 ಮಂದಿ ಭಾಗವಹಿಸಲಿದ್ದಾರೆ ಎಂದು ಜಿ.ಪಂ. ಕಚೇರಿಯಲ್ಲಿ ಸೋಮವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು. ಇದೇ ವೇಳೆ ರಜತೋತ್ಸವದ ಲಾಂಛನವನ್ನು ಬಿಡುಗಡೆಗೊಳಿಸಿದರು.

ರಜತ ಮಹೋತ್ಸವ ಸಂಬಂಧ ಸಾರ್ವಜನಿಕರಿಂದಲೂ ಲಾಂಛನ ಆಹ್ವಾನಿ ಸಿದ್ದೆವು. 52 ಲಾಂಛನಗಳು ಬಂದಿದ್ದವು. ಎಲ್ಲವನ್ನೂ ಪರಿಗಣಿಸಿ ಕಲಾವಿದ ಪುರುಷೋತ್ತಮ ಅಡ್ವೆಯವರ ನೇತೃತ್ವದಲ್ಲಿ ಲಾಂಛನ ರಚಿಸಿ ಅಂತಿಮಗೊಳಿಸಲಾಗಿದೆ ಎಂದರು.

ಆ. 24ರಂದು ಕಾರ್ಕಳದಲ್ಲಿ ಅಗ್ನಿಪಥ್‌ ದೌಡ್‌ಗೆ ಇಂಧನ ಸಚಿವ ಸುನಿಲ್‌ ಕುಮಾರ್‌ ಚಾಲನೆ ನೀಡಲಿದ್ದಾರೆ. 25 ಸಂಸ್ಥೆಗಳು ಇದರಲ್ಲಿ ಭಾಗವಹಿಸಲಿವೆ. ಉದ್ಘಾಟನ ಕಾರ್ಯಕ್ರಮದಲ್ಲಿ 15 ಸಾವಿರ ಮಂದಿ ಸೇರುವ ನಿರೀಕ್ಷೆಯಿದೆ ಮತ್ತು ಅದಕ್ಕೆ ಬೇಕಾದ ಎಲ್ಲ ವ್ಯವಸ್ಥೆ ಮಾಡಿಕೊಂಡಿದ್ದೇವೆ ಎಂದರು.

ಸಮಾರೋಪಕ್ಕೆ ಸಿಎಂ ಬೊಮ್ಮಾಯಿ
ಕಾರ್ಯಕ್ರಮಕ್ಕೆ ಸುಮಾರು 1 ಕೋ.ರೂ. ವೆಚ್ಚವಾಗಲಿದೆ. ಸರಕಾರದಿಂದ ಅನುದಾನ ಬಂದಿಲ್ಲ. ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಇದು ನಡೆಯಲಿದೆ. 2023ರ ಜ. 25ರಂದು ನಡೆಯುವ ಸಮಾರೋಪದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಭಾವಹಿಸಲಿದ್ದಾರೆ ಎಂದು ಹೇಳಿದರು.

Advertisement

ರಜತ ಮಹೋತ್ಸವ ಕಾರ್ಯಕ್ರಮದ ಅಂಗವಾಗಿ ವಿಚಾರ ಸಂಕಿರಣ, ಜಿಲ್ಲೆಯಲ್ಲೊಂದು ಹೂಡಿಕೆದಾರರ ಸಮ್ಮೇಳನ, ಪವರ್‌ ಪರ್ಬ ಹೀಗೆ ಹಲವು ಚಟುವಟಿಕೆಗಳು ನಡೆಯಲಿವೆ. ಜಿಲ್ಲಾದ್ಯಂತ ಉತ್ಸವದ ರೀತಿಯಲ್ಲಿ ಇದು ನಡೆಯಲಿದೆ. ಲೋಗೊವನ್ನು ಎಲ್ಲರೂ ತಮ್ಮ ವಾಟ್ಸ್‌ಆ್ಯಪ್‌ ಸ್ಟೇಟಸ್‌, ಡಿಪಿಯಲ್ಲಿ ಹಾಕಿಕೊಳ್ಳಬೇಕು ಎಂದು ಮನವಿ ಮಾಡಿದರು.
ಶಾಸಕ ಲಾಲಾಜಿ ಆರ್‌. ಮೆಂಡನ್‌, ಜಿಲ್ಲಾಧಿಕಾರಿ ಕೂರ್ಮಾರಾವ್‌ ಎಂ., ಜಿ.ಪಂ. ಸಿಇಒ ಪ್ರಸನ್ನ ಎಚ್‌., ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಮೈಸೂರು ಎಲೆಕ್ಟ್ರಿಕಲ್‌ ಇಂಡಸ್ಟ್ರಿಸ್‌ನ ಅಧ್ಯಕ್ಷ ಉದಯ ಕುಮಾರ್‌ ಶೆಟ್ಟಿ, ಉಪವಿಭಾಗಾಧಿಕಾರಿ ರಾಜು, ಎಎಸ್ಪಿ ಸಿದ್ದಲಿಂಗಪ್ಪ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next