ಜೈಪುರ : ಮನೆಯಲ್ಲಿ ಶೌಚಾಲಯ ಇಲ್ಲದ ಕಾರಣಕ್ಕೆ ಬಯಲಲ್ಲಿ ಶೌಚಕಾರ್ಯ ನಡೆಸುತ್ತಿದ್ದ ಮುಸ್ಲಿಂ ಮಹಿಳೆಯರ ಫೋಟೋ ಕ್ಲಿಕ್ಕಿಸಲು ತೊಡಗಿದ ಮುನಿಸಿಪಾಲಿಟಿ ಕೆಲಸಗಾರರನ್ನು ತಡೆದ ಸಾಮಾಜಿಕ ಕಾರ್ಯಕರ್ತನೊಬ್ಬನನ್ನು ಆ ಕಾರ್ಮಿಕರು ಹೊಡೆದು ಚಚ್ಚಿ ಸಾಯಿಸಿದ ಘಟನೆ ರಾಜಸ್ಥಾನದ ಪ್ರತಾಪಗಢ ಜಿಲ್ಲೆಯಿಂದ ವರದಿಯಾಗಿದೆ.
ಮನೆಯಲ್ಲಿ ಶೌಚಾಲಯ ಇಲ್ಲದ ಕಾರಣಕ್ಕೆ ಈ ಮುಸ್ಲಿಂ ಮಹಿಳೆಯರು ಅನಿವಾರ್ಯವಾಗಿ ಬಯಲಲ್ಲೇ ಶೌಚಕಾರ್ಯ ಮುಗಿಸಿಲು ಬಂದಿದ್ದರು. ಇವರು ಶೌಚಕಾರ್ಯದಲ್ಲಿ ನಿರತರಾಗಿದ್ದ ವೇಳೆ ಅವರ ಫೋಟೋ ಮತ್ತು ವಿಡಿಯೋ ತೆಗೆಯಲು ಮುಂದಾದ ಮುನಿಸಿಪಾಲಿಟಿ ಕಾರ್ಮಿಕರನ್ನು ತಡೆದ 44 ವರ್ಷ ಪ್ರಾಯದ ಸಾಮಾಜಿಕ ಕಾರ್ಯಕರ್ತ ಜಾಫರ್ ಹುಸೇನ್ ಅವರನ್ನು ಕೋಪೋದ್ರಿಕ್ತ ಕಾರ್ಮಿಕರು ಹೊಡೆದು ಚಚ್ಚಿ ಸಾಯಿಸಿದರು ಎಂದು ಸಿಪಿಎಂ ಹೊರಡಿಸಿದ ಹೇಳಿಕೆಯಲ್ಲಿ ತಿಳಿಸಿದೆ.
ನಗರ ಪರಿಷತ್ ಕಮಿಷನರ್ ಅಶೋಕ್ ಜೈನ್ ಅವರು ಬಗ್‌ವಾಸಾ ಕಾಚಿ ಗ್ರಾಮದಲ್ಲಿ ಬಯಲು ಬಹಿರ್ದೆಶೆಯಲ್ಲಿ ನಿರತರಾಗಿದ್ದ ಈ ಮುಸ್ಲಿಂ ಮಹಿಳೆಯರ ಫೋಟೋ ವಿಡಿಯೋ ತೆಗೆಯುವಂತೆ ಮುನಿಸಿಪಲ್ ಕೌನ್ಸಿಲ್ ಕಾರ್ಮಿಕರಿಗೆ ಆದೇಶಿಸಿದ್ದರು ಎಂದು ಸಿಪಿಎಂ ಹೇಳಿಕೆ ಆರೋಪಿಸಿದೆ.
ಮನೆಯಲ್ಲಿ ಶೌಚಾಲಯ ಇಲ್ಲದ ಕಾರಣಕ್ಕೆ ಹೀಗೆ ಬಯಲು ಬಹಿರ್ದೆಶೆಗೆ ಅನಿವಾರ್ಯವಾಗಿ ತೊಡಗಿಕೊಳ್ಳುವ ಮಹಿಳೆಯರ ಫೋಟೋ ವಿಡಿಯೋ ಮಾಡಕೂಡದೆಂಬ ಮನವಿಯನ್ನು ಕೆಲವು ದಿನಗಳ ಹಿಂದಷ್ಟೇ ಸಾಮಾಜಿಕ ಕಾರ್ಯಕರ್ತ ಜಫರ್ ಅವರು ನರಗ ಪರಿಷತ್ತಿಗೆ ಕೊಟ್ಟಿದ್ದರು.
ಜಾಫರ್ ಅವರನ್ನು ಹೊಡೆದು ಚಚ್ಚಿ ಸಾಯಿಸಲಾದ ಅತ್ಯಮಾನುಷ ಪ್ರಕರಣಕ್ಕೆ ಕಾರಣರಾದ ಮತ್ತು ಎಫ್ಐಆರ್‌ನಲ್ಲಿ ಹೆಸರಿಸಲ್ಪಟ್ಟಿರುವ ಅಶೋಕ್ ಜೈನ್ ಮತ್ತು ಇತರರನ್ನು ಈ ಕೂಡಲೇ ಬಂಧಿಸಿ ಅವರಿಗೆ ತ್ವರಿತವಾಗಿ ಶಿಕ್ಷೆ ನೀಡಬೇಕು ಎ,ದು ಸಿಪಿಎಂ ಸರಕಾರವನ್ನು ಒತ್ತಾಯಿಸಿದೆ.