ಪುಣೆ: ಮಂಗಳವಾರ ರಾತ್ರಿ ನಡೆದ ಐಪಿಎಲ್ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಏಕಪಕ್ಷೀಯ ಗೆಲುವು ಸಾಧಿಸಿತು. ಬ್ಯಾಟಿಂಗ್-ಬೌಲಿಂಗ್ ಎರಡರಲ್ಲೂ ಹೈದರಾಬಾದ್ ವಿಫಲವಾಗುವುದರೊಂದಿಗೆ, ಹಿಂದಿನ ಆವೃತ್ತಿಯ ಶೋಚನೀಯ ಪ್ರದರ್ಶನವನ್ನೇ ಮುಂದುವರಿಸಿದಂತಾಯಿತು.
ಮೊದಲು ಬ್ಯಾಟ್ ಮಾಡಿದ ರಾಜಸ್ಥಾನ್, ನಾಯಕ ಸಂಜು ಸ್ಯಾಮ್ಸನ್ ಅವರ ಸ್ಫೋಟಕ ಅರ್ಧಶತಕ ಹಾಗೂ ಅಗ್ರ ಕ್ರಮಾಂಕದ ಆಟಗಾರರ ಉಪಯುಕ್ತ ಆಟದಿಂದಾಗಿ 20 ಓವರ್‌ಗಳಲ್ಲಿ 6 ವಿಕೆಟಿಗೆ 210 ರನ್ನುಗಳ ಬೃಹತ್ ಮೊತ್ತ ಪೇರಿಸಿತು. ಇದನ್ನು ಬೆನ್ನತ್ತಿದ ಹೈದರಾಬಾದ್ 20 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು 149 ರನ್ ಗಳಿಸಿತು. ರಾಜಸ್ಥಾನ್ ಗೆಲುವಿನ ಅಂತರ 61 ರನ್.
ಹೈದರಾಬಾದ್ ಪರ ಐಡೆನ್ (57 ರನ್, 41 ಎಸೆತ) , ವಾಷಿಂಗ್ಟನ್ ಸುಂದರ್, ರೊಮಾರಿಯೊ ಶೆಫರ್ಡ್ ಹೊರತುಪಡಿಸಿದರೆ ಉಳಿದೆಲ್ಲ ಬ್ಯಾಟಿಗರು ಸಂಪೂರ್ಣ ವಿಫಲರಾದರು. ಸುಂದರ್ ಕೇವಲ 14 ಎಸೆತಗಳಲ್ಲಿ 5 ಬೌಂಡರಿ, 2 ಸಿಕ್ಸರ್ ಮೂಲಕ 40 ರನ್ ಸಿಡಿಸಿದರು. ರಾಜಸ್ಥಾನ್ ಪರ ಸ್ಪಿನ್ನರ್ ಯಜುವೇಂದ್ರ ಚಹಲ್ (22ಕ್ಕೆ 3), ಪ್ರಸಿದ್ಧ ಕೃಷ್ಣ (16ಕ್ಕೆ 2), ಟ್ರೆಂಟ್ ಬೌಲ್ಟ್ (23ಕ್ಕೆ 2) ಅತ್ಯುತ್ತಮ ಬೌಲಿಂಗ್ ಮಾಡಿದರು.
ರಾಜಸ್ಥಾನ್ ಬ್ಯಾಟಿಂಗ್ ಸ್ಫೋಟ: ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ಥಾನ್ ಪರ ಆರಂಭಿಕರು ಉತ್ತಮ ಆಟವಾಡಿದರು. ಬಳಿಕ ಜತೆಗೂಡಿದ ನಾಯಕ ಸಂಜು ಸ್ಯಾಮ್ಸನ್ ಮತ್ತು ದೇವದತ್ತ ಪಡಿಕ್ಕಲ್ ಅವರ ಭರ್ಜರಿ ಆಟದಿಂದಾಗಿ ರಾಜಸ್ಥಾನ ಉತ್ತಮ ಮೊತ್ತ ಪೇರಿಸುವಂತಾಯಿತು. ಸುಮಾರು 7 ಓವರ್ ನಿಭಾಯಿಸಿದ ಅವರಿಬ್ಬರು ಮೂರನೇ ವಿಕೆಟಿಗೆ 73 ರನ್ನುಗಳ ಜತೆಯಾಟದಲ್ಲಿ ಪಾಲ್ಗೊಂಡು ಬೇರ್ಪಟ್ಟರು. 41 ರನ್ ಗಳಿಸಿದ ಪಡಿಕ್ಕಲ್ ಔಟಾದ ಸ್ವಲ್ಪ ಹೊತ್ತಿನಲ್ಲಿ ಸ್ಯಾಮ್ಸನ್ ಕೂಡ ನಿರ್ಗಮಿಸಿದರು. ಬಿರುಸಿನ ಆಟವಾಡಿದ ಸ್ಯಾಮ್ಸನ್ ಕೇವಲ 27 ಎಸೆತಗಳಲ್ಲಿ 55 ರನ್ ಸಿಡಿಸಿದರು. 3 ಬೌಂಡರಿ ಮತ್ತು 5 ಮನಮೋಹಕ ಸಿಕ್ಸರ್ ಬಾರಿಸಿ ರಂಜಿಸಿದರು. ಪಡಿಕ್ಕಲ್ 29 ಎಸೆತಗಳಿಂದ 4 ಬೌಂಡರಿ ಮತ್ತು 2 ಸಿಕ್ಸರ್ ಬಾರಿಸಿದರು.
ಎಚ್ಚರಿಕೆಯ ಆಟ: ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ರಾಜಸ್ಥಾನ್ ರಾಯಲ್ಸ್ ಎಚ್ಚರಿಕೆಯ ಆಟವಾಡಿತು. ನೋಬಾಲ್‌ನಿಂದಾಗಿ ಮೊದಲ ಓವರಿನಲ್ಲಿಯೇ ಜೀವದಾನ ಪಡೆದ ಜೋಸ್ ಬಟ್ಲರ್ ಆಬಳಿಕ ಉತ್ತಮ ಪ್ರದರ್ಶನ ನೀಡಿದರು. ಬಟ್ಲರ್ ಬಿರುಸಿನ ಆಟ ಆಡಿದರೆ ಯಶಸ್ವಿ ಜೈಸ್ವಾಲ್ ಉತ್ತಮ ಬೆಂಬಲ ನೀಡಿದರು. ವಾಷಿಂಗ್ಟನ್ ಸುಂದರ್ ಎಸೆದ ಐದನೇ ಓವರಿನಲ್ಲಿ ಅವರಿಬ್ಬರು 18 ರನ್ ಸಿಡಿಸಿದ್ದರಿಂದ ತಂಡದ ಮೊತ್ತ 50ರ ಗಡಿ ದಾಟುವಂತಾಯಿತು. ಆದರೆ ಮುಂದಿನ ಓವರಿನಲ್ಲಿ ಶೆಫರ್ಡ್ ಅವರು ಯಶಸ್ವಿ ಜೈಸ್ವಾಲ್ ಅವರ ವಿಕೆಟನ್ನು ಹಾರಿಸಲು ಯಶಸ್ವಿಯಾದರು. ಕೊನೆ ಹಂತದಲ್ಲಿ ಶಿಮ್ರಾನ್ ಹೆಟ್‌ಮೈರ್ 13 ಎಸೆತಗಳಿಂದ ಮೂರು ಸಿಕ್ಸರ್ ಸಹಿತ 32 ರನ್ ಸಿಡಿಸಿದ್ದರಿಂದ ತಂಡದ ಮೊತ್ತ ಇನ್ನೂರರ ಗಡಿ ದಾಟುವಂತಾಯಿತು.
ಹೈದರಾಬಾದ್ ಪರ ವೆಸ್ಟ್‌ಇಂಡೀಸ್ ಮತ್ತು ಗಯಾನ ಅಮೆಜಾನ್ ವಾರಿಯರ್ಸ್ ತಂಡದ ಶಕ್ತಿಶಾಲಿ ಹೊಡೆತಗಾರ ರೊಮಾರಿಯೊ ಶೆಫರ್ಡ್ ಐಪಿಎಲ್‌ಗೆ ಪಾದಾರ್ಪಣೆಗೈದಿದ್ದಾರೆ. ಟಿ20 ಕ್ರಿಕೆಟ್‌ನಲ್ಲಿ ಅವರ ಸ್ಟ್ರೈಕ್‌ರೇಟ್ 160 ಇದೆ. ಸ್ಫೋಟಕ ಆಟಕ್ಕೆ ಅವರು ಹೆಸರುವಾಸಿಯಾಗಿದ್ದಾರೆ. ಅಂತಿಮ ಓವರಿನಲ್ಲಿ ನಟರಾಜನ್ ಎರಡು ವಿಕೆಟ್ ಉರುಳಿಸಲು ಯಶಸ್ವಿಯಾಗಿದ್ದಾರೆ. ಉಮ್ರಾನ್ ಮಲಿಕ್ ಕೂಡ ಎರಡು ವಿಕೆಟ್ ಪಡೆದಿದ್ದಾರೆ.
ಸಂಕ್ಷಿಪ್ತ ಸ್ಕೋರು: ರಾಜಸ್ಥಾನ್ 20 ಓವರ್, 210/6 (ಸಂಜು ಸ್ಯಾಮ್ಸನ್ 55, ದೇವದತ್ತ ಪಡಿಕ್ಕಲ್ 41, ಉಮ್ರಾನ್ ಮಲಿಕ್ 39ಕ್ಕೆ 2). ಹೈದರಾಬಾದ್ 20 ಓವರ್, 149/7 (ಐಡೆನ್ 57, ವಾಷಿಂಗ್ಟನ್ ಸುಂದರ್ 40, ಚಹಲ್ 22ಕ್ಕೆ 3)