Advertisement

ರಾಜಸ್ಥಾನ್‌-ಡೆಲ್ಲಿ ನಡುವೆ ಮೊದಲ ಮೇಲಾಟ

09:27 AM Apr 23, 2019 | Team Udayavani |

ಜೈಪುರ: ಹನ್ನೆರಡನೇ ಐಪಿಎಲ್‌ನಲ್ಲಿ ರಾಜಸ್ಥಾನ್‌ ರಾಯಲ್ಸ್‌ ಮತ್ತು ಡೆಲ್ಲಿ ಕ್ಯಾಪಿಟಲ್ಸ್‌ ತಂಡಗಳು ಮೊದಲ ಮುಖಾಮುಖೀಗೆ ಸಜ್ಜಾಗಿವೆ. ಸೋಮವಾರ ರಾತ್ರಿ ಇಲ್ಲಿನ “ಸವಾಯ್‌ ಮಾನ್‌ಸಿಂಗ್‌ ಸ್ಟೇಡಿಯಂ’ನಲ್ಲಿ ಸ್ಮಿತ್‌-ಅಯ್ಯರ್‌ ಪಡೆಗಳ ಕಾದಾಟಕ್ಕೆ ಅಣಿಯಾಗಿದೆ.

Advertisement

ಈ ವರೆಗಿನ ಫ‌ಲಿತಾಂಶದ ಲೆಕ್ಕಾಚಾರದಲ್ಲಿ ಡೆಲ್ಲಿ ಉತ್ತಮ ಸ್ಥಿತಿಯಲ್ಲಿದೆ. ಹತ್ತರಲ್ಲಿ 6 ಪಂದ್ಯಗಳನ್ನು ಗೆದ್ದು 3ನೇ ಸ್ಥಾನದಲ್ಲಿದೆ. ಆದರೆ ರಾಜಸ್ಥಾನ್‌ 9ರಲ್ಲಿ ಮೂರನ್ನಷ್ಟೇ ಗೆದ್ದು 7ನೇ ಸ್ಥಾನಕ್ಕೆ ಕುಸಿದಿದೆ. ಪ್ಲೇ ಆಫ್ ತಲುಪಬೇಕಾದರೆ ರಾಜಸ್ಥಾನ್‌ಗೆ ಇಲ್ಲಿಂದ ಮುಂದೆ ಪ್ರತಿಯೊಂದರಲ್ಲೂ ಗೆಲುವು ಕಾಣಬೇಕಾದುದು ಅಗತ್ಯ.

ಬದಲಾಗುತ್ತಿದೆಯೇ ಅದೃಷ್ಟ?
ಮುಂದಿನ ಸುತ್ತಿಗೆ ಏರಲೇಬೇಕೆಂಬ ಹಠದಲ್ಲಿರುವ ರಾಜಸ್ಥಾನ್‌, ಕೂಟದ ನಡುವೆಯೇ ತಂಡದ ನಾಯಕನನ್ನು ಬದಲಿಸಿತ್ತು. ಅಷ್ಟೇನೂ ಯಶಸ್ಸು ಕಾಣದ ಅಜಿಂಕ್ಯ ರಹಾನೆ ಬದಲು ಸ್ಟೀವನ್‌ ಸ್ಮಿತ್‌ ಅವರಿಗೆ ಜವಾಬ್ದಾರಿ ಹೊರಿಸಿತು. ಸ್ಮಿತ್‌ ಮೊದಲ ಪ್ರಯತ್ನದಲ್ಲೇ ಧಾರಾಳ ಯಶಸ್ಸು ಕಂಡಿರುವುದು ರಾಜಸ್ಥಾನ್‌ ತಂಡದ ಅದೃಷ್ಟ ಬದಲಾಗುತ್ತಿರುವುದರ ಸೂಚನೆಯೇ ಎಂಬುದೊಂದು ಕುತೂಹಲ.

ಶನಿವಾರದ ಪಂದ್ಯ ದಲ್ಲಿ ರಾಜಸ್ಥಾನ್‌ 5 ವಿಕೆಟ್‌ಗಳಿಂದ ಮುಂಬೈಗೆ ಸೋಲುಣಿಸಿತ್ತು. ಸ್ಮಿತ್‌ ಅಜೇಯ ಅರ್ಧ ಶತಕ ಬಾರಿಸಿ ಕಪ್ತಾನನ ಆಟವಾಡಿದ್ದಲ್ಲದೇ ಪಂದ್ಯಶ್ರೇಷ್ಠ ಪ್ರಶಸ್ತಿಗೂ ಪಾತ್ರರಾಗಿದ್ದರು. ಇನ್ನೊಂದೆಡೆ ಕೋಟ್ಲಾದಲ್ಲಿ ಡೆಲ್ಲಿ ಕೂಡ 5 ವಿಕೆಟ್‌ ಅಂತರದಿಂದಲೇ ಪಂಜಾಬ್‌ಗ ಸೋಲಿನ ಪಂಚ್‌ ಕೊಟ್ಟಿತ್ತು. ಹೀಗೆ ಎರಡೂ ತಂಡಗಳು ಶನಿವಾರದ ತವರಿನ ಪಂದ್ಯಗಳನ್ನು ಗೆದ್ದ ಖುಷಿಯಲ್ಲಿವೆ.

ಜೋಶ್‌ ತೋರದ ಡೆಲ್ಲಿ
ರಾಜಸ್ಥಾನ್‌ಗೆ ಹೋಲಿಸಿದರೆ ಡೆಲ್ಲಿಯ ಬ್ಯಾಟಿಂಗ್‌ ವಿಭಾಗ ಬಲಿಷ್ಠವಾಗಿದೆ. ವಾರ್ನರ್‌, ಶಾ, ಪಂತ್‌, ಅಯ್ಯರ್‌, ಇನ್‌ಗ್ರಾಮ್, ಅಕ್ಷರ್‌ ಪಟೇಲ್‌ ಅವರನ್ನು ಒಳಗೊಂಡಿದೆ. ಆದರೆ ಟಿ20 ಜೋಶ್‌ ಕಾಣಿಸುತ್ತಿಲ್ಲ. ಸಣ್ಣ ಮೊತ್ತ ಎದುರಿಗಿದ್ದರೂ ತಿಣುಕಾಡಿಯೇ ಗೆಲ್ಲುತ್ತದೆ, ಇಲ್ಲವೇ ಪಂದ್ಯವನ್ನು ಕೈಚೆಲ್ಲುತ್ತದೆ. ರಬಾಡ, ಇಶಾಂತ್‌, ಲಮಿಚಾನೆ,
ಮಿಶ್ರಾ, ಪಟೇಲ್‌ ಅವರನ್ನೊಳಗೊಂಡ ಬೌಲಿಂಗ್‌ ವಿಭಾಗ ವೈವಿಧ್ಯಮಯ. ಈ ಪಂದ್ಯ ಗೆದ್ದರೆ ಡೆಲ್ಲಿಯ ಪ್ಲೇ-ಆಫ್ ಅವಕಾಶ ಉಜ್ವಲಗೊಳ್ಳಲಿದೆ.

Advertisement

ರಾಜಸ್ಥಾನ್‌ ಅಸ್ಥಿರ ಬ್ಯಾಟಿಂಗ್‌
ರಾಜಸ್ಥಾನ್‌ ತವರಲ್ಲೇ ಆಡುತ್ತಿದ್ದರೂ ಸ್ಥಿರವಾದ ಬ್ಯಾಟಿಂಗ್‌ ಪ್ರದರ್ಶಿಸಲು ವಿಫ‌ಲವಾಗುತ್ತಿದೆ. ತಂಡವಿನ್ನೂ ಸೂಕ್ತ ಬ್ಯಾಟಿಂಗ್‌ ಸರದಿಯನ್ನೇ ಹೊಂದಿಲ್ಲ. ಜಾಸ್‌ ಬಟ್ಲರ್‌ ಬಹಳ ಬೇಗ ತವರಿಗೆ ವಾಪಸ್ಸಾದ್ದರಿಂದ ತಂಡದ ಬ್ಯಾಟಿಂಗ್‌ ಲೈನ್‌ಅಪ್‌ ಸಮಸ್ಯೆ ಇನ್ನಷ್ಟು ಬಿಗಡಾಯಿಸಿದೆ. ಅಜಿಂಕ್ಯ ರಹಾನೆ ಅವರ ಕಳಪೆ ಫಾರ್ಮ್ ತಂಡಕ್ಕೆ ಭಾರೀ ಹೊಡೆತ ನೀಡುತ್ತಿದೆ.

ಬಟ್ಲರ್‌ ಗೈರಲ್ಲಿ ರಹಾನೆ- ಸ್ಯಾಮ್ಸನ್‌ ಜೋಡಿ ಕಳೆದ ಪಂದ್ಯದಲ್ಲಿ ಇನ್ನಿಂಗ್ಸ್‌ ಆರಂಭಿ ಸಿತ್ತು. ಆದರೆ ರಹಾನೆ 12 ರನ್ನಿಗೆ ಆಟ ಮುಗಿಸಿದ್ದರು. ಸ್ಯಾಮ್ಸನ್‌, ಸ್ಮಿತ್‌ ಮತ್ತು ರಿಯಾನ್‌ ಪರಾಗ್‌ ಮೇಲಷ್ಟೇ ಬ್ಯಾಟಿಂಗ್‌ ಭರವಸೆ ಇಡಬಹುದು.
ಬೌಲಿಂಗ್‌ ವಿಭಾಗದಲ್ಲಿ ಜೋಫ್ರಾ ಆರ್ಚರ್‌, ಶ್ರೇಯಸ್‌ ಗೋಪಾಲ್‌ ಹೊರತುಪಡಿಸಿ ಉಳಿದವರ್ಯಾರೂ ಘಾತಕವಾಗಿ ಪರಿಣಮಿಸಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next