Advertisement

ಶಾರ್ಜಾ ಮೈದಾನದಲ್ಲಿ ಸ್ಯಾಮ್ಸನ್-ಸ್ಮಿತ್ ಸ್ಪೋಟಕ ಜೊತೆಯಾಟ ; ಚೆನ್ನೈಗೆ 217 ರನ್ ಟಾರ್ಗೆಟ್

11:39 PM Sep 22, 2020 | Hari Prasad |

ಶಾರ್ಜಾ: ರಾಜಸ್ಥಾನ ರಾಯಲ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವೆ ಇಲ್ಲಿ ನಡೆಯುತ್ತಿರುವ IPL ಟಿ20 ಪಂದ್ಯದಲ್ಲಿ ಚೆನ್ನೈ ವಿರುದ್ಧ ರಾಜಸ್ಥಾನ ಸ್ಪರ್ಧಾತ್ಮಕ ಮೊತ್ತ ಕಲೆಹಾಕಿದೆ.

Advertisement

ಸಂಜು ಸ್ಯಾಮ್ಸನ್ (74) ಮತ್ತು ನಾಯಕ ಸ್ಟೀವನ್ ಸ್ಮಿತ್ (69) ಅವರ ಶತಕದ ಜೊತೆಯಾಟ ಮತ್ತು ಕೊನೆಯಲ್ಲಿ ಜೋಫ್ರಾ ಆರ್ಚರ್ (ಔಟಾಗದೇ 27) ಅವರ ಹಿಟ್ಟಿಂಗ್ ನೆರವಿನಿಂದ ರಾಜಸ್ಥಾನ ರಾಯಲ್ಸ್ ನಿಗದಿತ 20 ಓವರ್ ಗಳಲ್ಲಿ 216 ರನ್ ಗಳ ಭರ್ಜರಿ ಮೊತ್ತವನ್ನು ಕಲೆ ಹಾಕಿತು.

ಟಾಸ್ ಗೆದ್ದ ಚೆನ್ನೈ ನಾಯಕ ಧೋನಿ ರಾಜಸ್ಥಾನ ರಾಯಲ್ಸ್ ಗೆ ಬ್ಯಾಟಿಂಗ್ ಬಿಟ್ಟಕೊಟ್ಟರು. ಓಪನರ್ ಯಶಸ್ವೀ ಜೈಸ್ವಾಲ್ (06) ಅವರನ್ನು ರಾಯಲ್ಸ್ ಬೇಗನೇ ಕಳೆದುಕೊಂಡಿತು.

ಆದರೆ, ಇನ್ನೋರ್ವ ಓಪನರ್ ಕಪ್ತಾನ ಸ್ಟೀವನ್ ಸ್ಮಿತ್ ಅವರನ್ನು ಸೇರಿಕೊಂಡ ಸಂಜು ಸ್ಯಾಮ್ಸನ್ ಶಾರ್ಜಾ ಮೈದಾನದಲ್ಲಿ ಸಿಕ್ಸರ್ ಸುರಿಮಳೆಯನ್ನೇ ಸುರಿಸಿದರು.


ಸ್ಪೋಟಕ ಬ್ಯಾಟಿಂಗ್ ಪ್ರದರ್ಶಿಸಿದ ಸಂಜು ಸ್ಯಾಮ್ಸನ್ ಕೇವಲ 32 ಎಸೆತಗಳಲ್ಲಿ 74 ರನ್ ಗಳಿಸಿ ಅರಬ್ ನಾಡಿನಲ್ಲಿ ಚೆನ್ನೈ ಬೌಲರ್ ಗಳ ಬೆವರಳಿಸಿದರು. ಅವರ ಈ ಸ್ಪೋಟಕ ಇನ್ನಿಂಗ್ಸ್ 09 ಭರ್ಜರಿ ಸಿಕ್ಸರ್ ಗಳನ್ನು ಒಳಗೊಂಡಿತ್ತು. ಹೊಡೆದದ್ದು ಸಿಂಗಲ್ ಬೌಂಡರಿ!

Advertisement

ಈ ಸ್ಪೋಟಕ ಆಟದ ಮೂಲಕ ಧೋನಿ ಅನುಪಸ್ಥಿತಿಯನ್ನು ಎದುರಿಸುತ್ತಿರುವ ಭಾರತೀಯ ತಂಡಕ್ಕೆ ಮರಳುವ ಇರಾದೆಯನ್ನು ವಿಕೆಟ್ ಕೀಪರ್ ಮತ್ತು ಬ್ಯಾಟ್ಸ್ ಮನ್ ಆಗಿರುವ ಸಂಜು ಸ್ಯಾಮ್ಸನ್ ಭರ್ಜರಿಯಾಗಿಯೇ ಸಾರಿದರು.

ಇನ್ನೊಂದೆಡೆ ಸ್ಮಿತ್ ಸಹ ನಾಯಕನ ಆಟವಾಡಿದರು. ಇವರಿಬ್ಬರ ನಡುವೆ 121 ರನ್ ಗಳ ಭರ್ಜರಿ ಜೊತೆಯಾಟ ದಾಖಲಾಯಿತು. 47 ಎಸೆತಗಳಲ್ಲಿ 4 ಸಿಕ್ಸರ್ ಹಾಗೂ 4 ಬೌಂಡರಿ ಸಹಿತ 69 ರನ್ ದಾಖಲಿಸಿದ ಸ್ಮಿತ್ 18.2ನೇ ಓವರಿನಲ್ಲಿ ಔಟಾದರು.

ಇದನ್ನೂ ಓದಿ: ರಾಯಲ್ಸ್ ಪರಾಕ್ರಮಕ್ಕೆ ತಲೆಬಾಗಿದ ಸೂಪರ್ ಕಿಂಗ್ಸ್


ರಾಜಸ್ಥಾನ ರಾಯಲ್ಸ್ 11 ಓವರ್ ಗಳಲ್ಲಿ 132 ರನ್ ಕಲೆಹಾಕಿತ್ತು ಆದರೆ ಈ ಹಂತದಲ್ಲಿ ಶತಕದ ಓಟದಲ್ಲಿದ್ದ ಸ್ಯಾಮ್ಸನ್ ಎನ್ ಗಿಡಿ ಬೌಲಿಂಗ್ ನಲ್ಲಿ ಔಟಾದರು. ಬಳಿಕ ರಾಯಲ್ಸ್ ಬ್ಯಾಟಿಂಗ್ ನಿಧಾನಗತಿಯತ್ತ ಮುಖಮಾಡಿತು.

ಬಳಿಕ ಬಂದ ಡೇವಿಡ್ ಮಿಲ್ಲರ್ (0), ರಾಬಿನ್ ಉತ್ತಪ್ಪ (5), ರಾಹುಲ್ ತೆವಾಟಿಯಾ (10) ಉತ್ತಮ ಬ್ಯಾಟಿಂಗ್ ಪ್ರದರ್ಶಿಸಲು ವಿಫಲವಾದರು. ಈ ಕಾರಣದಿಂದ ರಾಯಲ್ಸ್ ರನ್ ಗಳಿಕೆ ನಿಧಾನಗತಿಗೆ ಜಾರಿತು ಮತ್ತು ಚೆನ್ನೈ ಬೌಲರ್ ಗಳು ಈ ಹಂತದಲ್ಲಿ ಮೇಲುಗೈ ಸಾಧಿಸಿದರು.

ಆದರೆ, ಕೊನೆಯ ಎರಡು ಓವರ್ ಗಳಲ್ಲಿ ಸಿಡಿದು ನಿಂತ ಬೌಲರ್ ಜೋಫ್ರಾ ಆರ್ಚರ್ ಚೆನ್ನೈ ಬೌಲರ್ ಗಳನ್ನು ಕಾಡಿದರು. ಕೇವಲ 8 ಎಸೆತಗಳಲ್ಲಿ 27 ರನ್ ಸಿಡಿಸುವ ಮೂಲ ತಂಡ 200ರ ಗಡಿ ದಾಟುವಲ್ಲಿ ಆರ್ಚರ್ ನೆರವಾದರು. ಇವರಿಗೆ ಇನ್ನೋರ್ವ ಬೌಲರ್ ಟಾಮ್ ಕರ್ರನ್ (ನಾಟೌಟ್ 10) ಉತ್ತಮ ಸಾಥ್ ನೀಡಿದರು. ಈ ಜೋಡಿ ಏಳನೇ ವಿಕೆಟಿಗೆ ಅಮೂಲ್ಯ 38 ರನ್ ಗಳನ್ನು ಕಲೆ ಹಾಕಿತು.

Advertisement

Udayavani is now on Telegram. Click here to join our channel and stay updated with the latest news.

Next