Advertisement

ದೇಶಾದ್ಯಂತ ವರುಣನ ರುದ್ರತಾಂಡವ: ರಾಜಸ್ಥಾನ ಸೇರಿ ಹಲವೆಡೆ ಪ್ರವಾಹ ಪರಿಸ್ಥಿತಿ

12:33 AM Jul 11, 2022 | Team Udayavani |

ಹೊಸದಿಲ್ಲಿ: ಕರ್ನಾಟಕ, ಮಹಾರಾಷ್ಟ್ರ, ರಾಜಸ್ಥಾನ, ಪಂಜಾಬ್‌ ಹಾಗೂ ಹರಿಯಾಣದಲ್ಲಿ ಭಾರೀ ಮಳೆ ಯಾಗಿದ್ದು, ಹಲವು ಸ್ಥಳಗಳಲ್ಲಿನ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ಆ ಪ್ರಾಂತದಲ್ಲೆಲ್ಲ ಪ್ರವಾಹದ ಪರಿಸ್ಥಿತಿ ಉಂಟಾಗಿದೆ. ಇದರ ನಡುವೆಯೇ ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ ಸೇರಿದಂತೆ ದೇಶ 15 ಜಿಲ್ಲೆಗಳಿಗೆ ಭಾರತೀಯ ಹವಾಮಾನ ಇಲಾಖೆ (ಐಎಂಡಿ) ರೆಡ್‌ ಅಲರ್ಟ್‌ ಘೋಷಿಸಿದೆ.

Advertisement

ಮಹಾರಾಷ್ಟ್ರದ ಗಾಡಿcರೋಲಿಯಲ್ಲಿ ಹರಿ ಯುತ್ತಿರುವ ಕುಂಡಲಿಕಾ, ಅಂಬಾ, ಸಾವಿತ್ರಿ, ಪಾತಾಳಗಂಗಾ, ಉಲ್ಹಾಸ್‌ ಹಾಗೂ ಗಾರ್ಗಿ ನದಿಗಳು ಅಪಾಯ ಮಟ್ಟ ಮೀರಿ ಹರಿಯುತ್ತಿವೆ.

ಹರಿಯಾಣದ ಅಂಬಾಲಾದಲ್ಲಿ ತಗ್ಗು ಪ್ರದೇಶ ಗಳಿಗೆ ನುಗ್ಗಿದ ನೀರನ್ನು ನಗರ ಸಭೆ ಅಧಿಕಾರಿಗಳು, ಸಿಬಂದಿ ಮೋಟಾರ್‌ ಪಂಪ್‌ ಬಳಸಿ ತೆರವುಗೊಳಿಸಿದ್ದಾರೆ.

ಪಂಜಾಬ್‌, ಚಂಡೀಗಢದಲ್ಲಿ ಸೋಮವಾರ 64.5 ಮಿ.ಮೀ.ನಿಂದ 114.5 ಮಿ.ಮೀ.ನಷ್ಟು ಮಳೆಯಾಗಬಹುದೆಂದು ಐಎಂಡಿ ಎಚ್ಚರಿಸಿದೆ.

ರಾಜಸ್ಥಾನದಲ್ಲಿ ಚಂಬಲ್‌ ನದಿಯ ದಡದಲ್ಲಿ ರುವ ಧೋಲಾರ್‌ಪುರ ನಗರದಲ್ಲಿ ಭಾರೀ ಮಳೆ ಸುರಿದ ಪರಿಣಾಮ ನದಿಯ ನೀರಿನ ಮಟ್ಟ ಏರಿಕೆ ಯಾಗಿ, ಆ ನೀರು ಊರಿನೊಳಗೆ ನುಗ್ಗಿದೆ.

Advertisement

ಹಾಗಾಗಿ, ನದಿಗೆ ಹತ್ತಿರದಲ್ಲಿರುವ ನಗರದ ಕೆಲವು ಪ್ರಾಂತ ಗಳಲ್ಲಿ ಪ್ರವಾಹ ಆವರಿಸಿದೆ. ಸ್ಥಳೀಯ ಸಂಸ್ಥೆಗಳು ಪರಿಹಾರ ಕಾರ್ಯದಲ್ಲಿ ತೊಡಗಿಸಿಕೊಂಡಿವೆ.

ಮುನ್ನೆಚ್ಚರಿಕೆ: ಕರ್ನಾಟಕದ ಕರಾವಳಿ, ಮಧ್ಯ ಪ್ರದೇಶ, ಒಡಿಶಾ, ಗುಜರಾತ್‌ನ ಕರಾವಳಿಯಲ್ಲಿ ಮಂಗಳವಾರ ಹಾಗೂ ಬುಧವಾರ ಭಾರೀ ಮಳೆ ಯಾಗುವ ಸಾಧ್ಯತೆಗಳಿವೆ ಎಂದು ಐಎಂಡಿ ತಿಳಿಸಿದೆ.

ಆಂಧ್ರಪ್ರದೇಶ, ತೆಲಂಗಾಣದಲ್ಲಿ ಸೋಮವಾರ ದಿಂದ 3 ದಿನ, ಮಂಗಳವಾರ-ಬುಧವಾರ, ಹಿಮಾಚಲ ಪ್ರದೇಶದಲ್ಲಿ ಸೋಮವಾರ- ಮಂಗಳ ವಾರ, ಉತ್ತರಾಖಂಡದಲ್ಲಿ ಬುಧವಾರ, ರಾಜಸ್ಥಾನ ದ ಪಶ್ಚಿಮ ಭಾಗದಲ್ಲಿ ಸೋಮವಾರ, ಪೂರ್ವ ಭಾಗದಲ್ಲಿ ಸೋಮವಾರದಿಂದ ಬುಧವಾರದವರೆಗೆ ಹೆಚ್ಚಿನ ಮಳೆಯಾಗಲಿದೆ ಎಂದು ಇಲಾಖೆ ತಿಳಿಸಿದೆ.

ರಾಜಸ್ಥಾನದ ಝಲಾವರ್‌ ಹಾಗೂ ಬಿಕಾನೇರ್‌ ಜಿಲ್ಲೆಗಳಲ್ಲಿ ಶನಿವಾರ-ರವಿವಾರ ನಡುವೆ ಕ್ರಮವಾಗಿ 72 ಮಿ.ಮೀ. ಹಾಗೂ 64 ಮಿ.ಮೀ. ನಷ್ಟು ಮಳೆಯಾಗಿದೆ ಎಂದು ಐಎಂಡಿ ಹೇಳಿದೆ. ಬೇಸಡಿ, ಛಬ್ರಾ ಜಿಲ್ಲೆಗಳಲ್ಲಿ 60 ಮಿ.ಮೀ.ನಷ್ಟು, ಸಿಕಾರ್‌ ತಾಲೂಕು, ಬಯಾನಾ ಪಟ್ಟಣ ಹಾಗೂ ಬಿಕಾನೇರ್‌ ತಾಲೂಕಿನಲ್ಲಿ 50 ಮಿ.ಮೀ. ಮಳೆ ಬಿದ್ದಿದೆ ಎಂದು ಇಲಾಖೆ ತಿಳಿಸಿದೆ.

15 ಜಿಲ್ಲೆಗಳಿಗೆ ರೆಡ್‌ ಅಲರ್ಟ್‌
ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ (ಕರ್ನಾಟಕ), ಸತಾರಾ, ಪುಣೆ, ರಾಯಗಢ (ಮಹಾರಾಷ್ಟ್ರ), ಮೇಡಕ್‌, ನಿಜಾಮಾಬಾದ್‌, ಎಟುರ್‌ನಗರಂ, ರಮಣಗುಡೆಂ (ತೆಲಂಗಾಣ), ವಲ್ಸಾದ್‌, ನವಾÕರಿ, ಗಿರ್‌, ಸೋಮನಾಥ, ಜುನಾಗಢ (ಗುಜರಾತ್‌) ಜಿಲ್ಲೆಗಳಲ್ಲಿ ಜು. 11ರಿಂದ 13ರ ವರೆಗೆ ಭಾರೀ ಮಳೆಯಾಗಲಿದೆ ಎಂದಿರುವ ಐಎಂಡಿ, ಈ ಜಿಲ್ಲೆಗಳಿಗೆ ರೆಡ್‌ ಅಲರ್ಟ್‌ ಘೋಷಿಸಿದೆ.

ತೆಲಂಗಾಣದಲ್ಲಿ ಶಾಲಾ ಕಾಲೇಜುಗಳಿಗೆ ರಜೆ
ತೆಲಂಗಾಣದಲ್ಲಿ ಮುಂದಿನ ಮೂರು ದಿನ ಸತತ ವಾಗಿ ಮಳೆ ಸುರಿಯಲಿರುವ ಬಗ್ಗೆ ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಮುನ್ನೆಚ್ಚರಿಕೆ ನೀಡಿರುವ ಹಿನ್ನೆಲೆಯಲ್ಲಿ ಅಲ್ಲಿನ ರಾಜ್ಯ ಸರಕಾರ, ಶಾಲಾ ಕಾಲೇಜುಗಳಿಗೆ 3 ದಿನಗಳ ರಜೆ ಘೋಷಿಸಿದೆ. ರವಿವಾರ, ಎಲ್ಲ ಇಲಾ ಖೆಗಳ ಉನ್ನತ ಮಟ್ಟದ ಸಭೆ ನಡೆಸಿದ ಮುಖ್ಯ ಮಂತ್ರಿ ಚಂದ್ರಶೇಖರ್‌ ರಾವ್‌, ಈ ನಿರ್ಧಾರ ಕೈಗೊಂಡರು. ಸಭೆಯಲ್ಲಿ ಎಲ್ಲ ಜಿಲ್ಲಾಧಿಕಾರಿ ಗಳೂ ಆನ್‌ಲೈನ್‌ ಮೂಲಕ ಭಾಗಿಯಾಗಿದ್ದರು.

ದಿಲ್ಲಿಯಲ್ಲಿ
ಎಲ್ಲೋ ಅಲರ್ಟ್‌
ದಿಲ್ಲಿಯಲ್ಲಿ ಮುಂದಿನ ಕೆಲವು ವಾರ ಭಾರೀ ಮಳೆಯಾಗುವುದಾಗಿ ಐಎಂಡಿ ತಿಳಿಸಿದೆ. ಹಾಗಾಗಿ ದಿಲ್ಲಿಗೆ ಎಲ್ಲೋ ಅಲರ್ಟ್‌ ಘೋಷಿಸಲಾಗಿದೆ. ಸೂರ್ಯನ ಪ್ರಕಾಶ ಆವರಿಸಿದಾಗ ವಾತಾವರಣ ಗರಿಷ್ಠ 40 ಡಿಗ್ರಿ ಸೆಲ್ಸಿಯಸ್‌ಗೆ ಏರುವ ಸಾಧ್ಯತೆಯಿದ್ದು, ಮಳೆಯಿಂದಾಗಿ ಉಷ್ಣಾಂಶ ಕನಿಷ್ಠ 29.2 ಡಿಗ್ರಿ ಸೆಲ್ಸಿಯಸ್‌ಗೆ ಕುಸಿಯಲಿದೆ ಎಂದು ಐಎಂಡಿ ತಿಳಿಸಿದೆ. ಇದೇ ವೇಳೆ ಸತತ ಮಳೆಯಿಂದಾಗಿ ದಿಲ್ಲಿಯ ವಾಯು ಗುಣಮಟ್ಟ ಉತ್ತಮಗೊಂಡಿದೆ ಎಂದು ಮೂಲಗಳು ತಿಳಿಸಿವೆ.

 

Advertisement

Udayavani is now on Telegram. Click here to join our channel and stay updated with the latest news.

Next