Advertisement

ರಾಜಸ್ಥಾನ ರಾಜಕೀಯ ಬೆಂಗಳೂರಿಗೆ ಸ್ಥಳಾಂತರ ; ಕರ್ನಾಟಕಕ್ಕೆ ಆಗಮಿಸಿದ 18 ಬಂಡಾಯ ಶಾಸಕರು

02:21 AM Jul 19, 2020 | Hari Prasad |

ಜೈಪುರ/ಬೆಂಗಳೂರು: ರಾಜಸ್ಥಾನ ಮುಖ್ಯಮಂತ್ರಿ ಅಶೋಕ್‌ ಗೆಹ್ಲೋಟ್‌ ವಿರುದ್ಧ ಬಂಡಾಯ ಸಾರಿ ಹರಿಯಾಣದ ರೆಸಾರ್ಟ್‌ನಲ್ಲಿ ತಂಗಿದ್ದ ರಾಜಸ್ಥಾನದ 18 ಮಂದಿ ಬಂಡಾಯ ಶಾಸಕರು ಸದ್ದಿಲ್ಲದೆ ಬೆಂಗಳೂರಿಗೆ ಸ್ಥಳಾಂತರಗೊಂಡಿದ್ದಾರೆ.

Advertisement

ಎರಡು ವಿಶೇಷ ವಿಮಾನಗಳಲ್ಲಿ, ಎರಡು ತಂಡಗಳಾಗಿ ಬೆಂಗಳೂರಿಗೆ ಈ ಶಾಸಕರು ಆಗಮಿಸಿ ನಗರದ ಹೊರವಲಯದ ರೆಸಾರ್ಟ್‌ವೊಂದರಲ್ಲಿ ವಾಸ್ತವ್ಯ ಹೂಡಿದ್ದಾರೆ ಎಂದು ಹೇಳಲಾಗಿದೆ. ಆದರೆ ಅಧಿಕೃತವಾಗಿ ಈ ಬಗ್ಗೆ ಯಾವುದೇ ಮಾಹಿತಿ ಸಿಕ್ಕಿಲ್ಲ.

ಬಿಜೆಪಿ ಜತೆ ಡೀಲ್‌ ಕುದುರಿಸುತ್ತಿದ್ದಾರೆ ಎಂದು ಆರೋಪಿಸಿ ಕಾಂಗ್ರೆಸ್‌ ಶುಕ್ರವಾರ ಬಿಡುಗಡೆ ಮಾಡಿದ್ದ ಆಡಿಯೋ ಟೇಪ್‌ನಲ್ಲಿ ಬಂಡಾಯ ಶಾಸಕ ಭನ್ವರ್‌ಲಾಲ್‌ ಶರ್ಮಾ ಅವರ ಧ್ವನಿಯೂ ಇದೆ ಎಂದು ಹೇಳಲಾಗಿತ್ತು.
ಹೀಗಾಗಿ ಅವರ ಧ್ವನಿ ಮಾದರಿ ಸಂಗ್ರ ಹಿಸಲು ರಾಜಸ್ಥಾನ ಪೊಲೀಸರು ಶುಕ್ರವಾರ ರಾತ್ರಿಯೇ ಹರಿಯಾಣದ ಮನೇಸಾರ್‌ಗೆ ತೆರಳಿದ್ದರು.

ರೆಸಾರ್ಟ್‌ನ ಹೊರಗಡೆ ಸುಮಾರು ಒಂದು ತಾಸು ಕಾಲ ರಾಜಸ್ಥಾನ ಪೊಲೀಸರನ್ನು ತಡೆದು ನಿಲ್ಲಿಸಿದ್ದ ಹರಿಯಾಣ ಪೊಲೀಸರು ಬಳಿಕ ಒಳಹೋಗಲು ಅವಕಾಶ ಕಲ್ಪಿಸಿದ್ದರು. ರೆಸಾರ್ಟ್‌ನಲ್ಲಿದ್ದ ಶಾಸಕರು ಅಲ್ಲಿಂದ ಸ್ಥಳಾಂತರಗೊಳ್ಳುವವರೆಗೆ ಕಾದು, ಅನಂತರ ರಾಜಸ್ಥಾನ ಪೊಲೀಸರನ್ನು ಒಳಗೆ ಕಳುಹಿಸಲಾಯಿತು. ಪೊಲೀಸರ ಕರ್ತವ್ಯಕ್ಕೆ ಹರಿಯಾಣ ಪೊಲೀಸರು ಅಡ್ಡಿಪಡಿಸಿರುವುದು ಸ್ಪಷ್ಟ. ಎಂದು ಕಾಂಗ್ರೆಸ್‌ ವಕ್ತಾರ ಪವನ್‌ ಖೇರಾ ಆರೋಪಿಸಿದ್ದಾರೆ.

ರಾಜಭವನಕ್ಕೆ ಗೆಹ್ಲೋಟ್‌
ಪ್ರಮುಖ ಬೆಳವಣಿಗೆಯೊಂದರಲ್ಲಿ ಶನಿವಾರ ಸಂಜೆ ಮುಖ್ಯಮಂತ್ರಿ ಅಶೋಕ್‌ ಗೆಹ್ಲೋಟ್‌ ರಾಜಭವನಕ್ಕೆ ತೆರಳಿ ರಾಜ್ಯಪಾಲ ಕಲ್‌ರಾಜ್‌ ಮಿಶ್ರಾ ಅವರನ್ನು ಭೇಟಿಯಾಗಿದ್ದಾರೆ. ತನಗೆ 102 ಶಾಸಕರ ಬೆಂಬಲವಿದೆ ಎಂದು ಹೇಳಿಕೊಂಡಿದ್ದಾರೆ. ಗೆಹ್ಲೋಟ್‌ ಸರಕಾರಕ್ಕೆ ಬೆಂಬಲ ನೀಡುತ್ತಿರುವುದಾಗಿ ಭಾರತೀಯ ಟ್ರೈಬಲ್‌ ಪಾರ್ಟಿಯ (ಬಿಟಿಪಿ) ಇಬ್ಬರು ಶಾಸಕರು ಘೋಷಿಸಿದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.

Advertisement

ಅಡುಗೆ ಕಲಿತ ಶಾಸಕರು!
ಈ ನಡುವೆ ಸಿಎಂ ಗೆಹ್ಲೋಟ್‌ ಬಣದ ಶಾಸಕರು ಜೈಪುರದ ರೆಸಾರ್ಟ್‌ನಲ್ಲಿ ಮೋಜು ಮಾಡುತ್ತಾ ದಿನ ದೂಡುತ್ತಿದ್ದಾರೆ. ಹೊಟೇಲ್‌ನ ಬಾಣಸಿಗರೊಂದಿಗೆ ಸೇರಿ ಪಿಜ್ಜಾ, ಪಾಸ್ತಾದಂಥ ಖಾದ್ಯ ತಯಾರಿ ಕಲಿಯುತ್ತಿರುವ ಫೋಟೋ ವೈರಲ್‌ ಆಗಿವೆ.

ಫೋನ್‌ ಕದ್ದಾಲಿಕೆ: ಸಿಬಿಐ ತನಿಖೆಗೆ ಬಿಜೆಪಿ ಆಗ್ರಹ
ರಾಜಸ್ಥಾನದಲ್ಲಿ ಎಲ್ಲ ರಾಜಕೀಯ ನಾಯಕರ ಫೋನ್‌ಗಳನ್ನು ಕದ್ದಾಲಿಸಲಾಗುತ್ತಿದೆ ಎಂದು ಆರೋಪಿಸಿರುವ ಬಿಜೆಪಿ, ಈ ಕುರಿತು ಸಿಬಿಐ ತನಿಖೆ ನಡೆಸಬೇಕು ಎಂದು ಆಗ್ರಹಿಸಿದೆ. ಬಿಜೆಪಿಯು ಶಾಸಕರ ಖರೀದಿ ಮೂಲಕ ರಾಜಸ್ಥಾನ ಸರಕಾರವನ್ನು ಕೆಡವಲು ಮುಂದಾಗಿದೆ ಎಂಬ ಆರೋಪಕ್ಕೆ ಪುಷ್ಟಿ ನೀಡುವಂಥ ಆಡಿಯೋ ಕ್ಲಿಪ್‌ಗಳನ್ನು ಕಾಂಗ್ರೆಸ್‌ ಬಿಡುಗಡೆ ಮಾಡಿದ ಬೆನ್ನಲ್ಲೇ ಬಿಜೆಪಿ ಈ ಆಗ್ರಹ ಮಾಡಿದೆ.

ಇದಕ್ಕೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್‌, ಪ್ರಜಾಪ್ರಭುತ್ವದ ಕಗ್ಗೊಲೆಯಲ್ಲಿ ಬಿಜೆಪಿ ತನ್ನ ಪಾತ್ರವನ್ನು ಸ್ವತಃ ಒಪ್ಪಿಕೊಂಡಂತಾಯಿತು ಎಂದಿದೆ. ಈ ನಡುವೆ ಆಡಿಯೋ ಪ್ರಕರಣ ಸಂಬಂಧ ಶುಕ್ರವಾರ ಬಂಧಿತನಾಗಿದ್ದ ಸಂಜಯ್‌ ಜೈನ್‌ನನ್ನು ಜೈಪುರ ಕೋರ್ಟ್‌ 4 ದಿನ ಪೊಲೀಸ್‌ ವಶಕ್ಕೊಪ್ಪಿಸಿದೆ.

ಕಾಂಗ್ರೆಸ್‌ನೊಳಗಿನ ಕಚ್ಚಾಟಕ್ಕೆ ರಾಜ್ಯದ ಜನತೆ ಬೆಲೆ ತೆರಬೇಕಾಗಿದೆ. ನಿಮ್ಮ ಈ ಕೊಳಕು ರಾಜಕೀಯಕ್ಕೆ ಬಿಜೆಪಿಯನ್ನಾಗಲಿ, ಬಿಜೆಪಿ ನಾಯಕರನ್ನಾಗಲಿ ಎಳೆದು ತರಬೇಡಿ. ಮೊದಲು ರಾಜ್ಯದ ಜನತೆಯ ಹಿತಾಸಕ್ತಿ ಕಾಪಾಡಿ.
– ವಸುಂಧರಾ ರಾಜೇ, ರಾಜಸ್ಥಾನ ಮಾಜಿ ಸಿಎಂ

ರಾಜಸ್ಥಾನದಲ್ಲಿ ಉಂಟಾಗಿರುವ ರಾಜಕೀಯ ಅಸ್ಥಿರತೆಯನ್ನು ಗಣನೆಗೆ ತೆಗೆದುಕೊಂಡು, ರಾಜ್ಯಪಾಲ ಕಲ್‌ರಾಜ್‌ ಮಿಶ್ರಾ ಅವರು ಕೂಡಲೇ ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಲು ಶಿಫಾರಸು ಮಾಡಬೇಕು.
– ಮಾಯಾವತಿ, ಬಿಎಸ್‌ಪಿ ನಾಯಕಿ

Advertisement

Udayavani is now on Telegram. Click here to join our channel and stay updated with the latest news.

Next