Advertisement

ಏನಿದು ವಿವಾದ: ಹಾಡಹಗಲೇ ಅರ್ಚಕರ ಜೀವಂತ ದಹನ, ಪ್ರಮುಖ ಆರೋಪಿ ಬಂಧನ

03:24 PM Oct 09, 2020 | Nagendra Trasi |

ಜೈಪುರ್: ರಾಜಸ್ಥಾನ ರಾಜಧಾನಿ ಜೈಪುರ್ ನಿಂದ ಸುಮಾರು 177 ಕಿಲೋ ಮೀಟರ್ ದೂರದಲ್ಲಿರುವ ಕರೌಲಿ ಜಿಲ್ಲೆಯಲ್ಲಿ ಅರ್ಚಕರೊಬ್ಬರನ್ನು ಜೀವಂತವಾಗಿ ಸುಟ್ಟು ಹಾಕಿರುವ ಘಟನೆ ನಡೆದಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

Advertisement

ಭೂಮಿ ವಿವಾದದ ಹಿನ್ನೆಲೆಯಲ್ಲಿ ಗುಂಪೊಂದು ಅರ್ಚಕರ ಮೇಲೆ ಹಲ್ಲೆ ನಡೆಸಿತ್ತು. ದೇಹ ಶೇ.90ರಷ್ಟು ಸುಟ್ಟು ಹೋಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಸಾವನ್ನಪ್ಪಿರುವುದಾಗಿ ವರದಿ ತಿಳಿಸಿದೆ.

ಕರೌಲಿ ಜಿಲ್ಲೆಯ ಅರ್ಚಕರ ಬಳಿ ರಾಧಾ ಕೃಷ್ಣ ದೇವಾಲಯದ ಟ್ರಸ್ಟ್ ಗೆ ಸೇರಿದ್ದ ಸುಮಾರು 13 ಬಿಘಾಸ್ (5.2 ಎಕರೆ) ಜಾಗ ಹೊಂದಿದ್ದರು. ದೇವಸ್ಥಾನದ ಆದಾಯಕ್ಕಾಗಿ ಮುಖ್ಯ ಪುರೋಹಿತರು ಈ ಜಾಗವನ್ನು ನೀಡಿದ್ದರು. ದೇವಾಲಯದ ಟ್ರಸ್ಟ್ ಗಳಿಗೆ ಸೇರಿದ ಈ ರೀತಿಯ ಭೂಮಿಯನ್ನು ಸಾಮಾನ್ಯವಾಗಿ ದೇವಸ್ಥಾನದ ಉಸ್ತುವಾರಿ ನೋಡಿಕೊಳ್ಳುವ, ಪೂಜೆ ಕೈಗೊಳ್ಳುವ ಪುರೋಹಿತರಿಗೆ ನೀಡಲಾಗುತ್ತದೆ.

ಇಂತಹ ಭೂಮಿಯನ್ನು “ಮಂದಿರ್ ಮಾಫಿ” ಎಂದು ಕರೆಯುತ್ತಾರೆ. ರಾಜಸ್ಥಾನದಲ್ಲಿ ಹಳ್ಳಿಗಳಲ್ಲಿನ ದೇವಾಲಯಗಳನ್ನು ನೋಡಿಕೊಳ್ಳುವ ಪುರೋಹಿತರ ಆದಾಯದ ಮೂಲಗಳು ಇಂತಹ ಜಮೀನುಗಳಾಗಿದೆ ಎಂದು ವರದಿ ವಿವರಿಸಿದೆ.

ಇದನ್ನೂ ಓದಿ:ವಠಾರ ಶಾಲೆಯ ನಾಲ್ವರು ಮಕ್ಕಳಿಗೆ ಕೋವಿಡ್ ಪಾಸಿಟಿವ್: ಪೋಷಕರಲ್ಲಿ ಹೆಚ್ಚಿದ ಆತಂಕ

Advertisement

ಆದರೆ ರಾಜಸ್ಥಾನದ ಕರೌಲಿಯಲ್ಲಿ ವಿವಾದಕ್ಕೆ ಕಾರಣವಾಗಿತ್ತು. ಗ್ರಾಮದ ಪುರೋಹಿತ ಬಾಬು ಲಾಲ್ ವೈಷ್ಣವ್ ಅವರು ಪುಟ್ಟ ಬೆಟ್ಟದ ಗಡಿಯಲ್ಲಿರುವ ತನ್ನ ಜಮೀನಿನಲ್ಲಿ ಸ್ವಂತ ಮನೆ ಕಟ್ಟಲು ಮುಂದಾಗಿದ್ದರು. ಹೀಗೆ ಮನೆ ಕಟ್ಟಿಸುವ ನಿಟ್ಟಿನಲ್ಲಿ ಭೂಮಿಯನ್ನು ಸಮತಟ್ಟುಗೊಳಿಸಿದ್ದರು.

ಏತನ್ಮಧ್ಯೆ ಈ ಪ್ರದೇಶದಲ್ಲಿ ಪ್ರಭಾವಶಾಲಿಯಾಗಿದ್ದ ಮೀನಾ ಸಮುದಾಯದ ಜನರು ಅರ್ಚಕರು ನಿವಾಸ ಕಟ್ಟುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿ, ಜಾಗ ತಮಗೆ ಸೇರಿದ್ದು ಎಂದು ಹೇಳಿದ್ದರು. ಈ ವಿವಾದ ಗ್ರಾಮದ ಹಿರಿಯರ ಬಳಿ ಹೋಗಿದ್ದು, ಪಂಚಾಯ್ತಿಯಲ್ಲಿ ಅರ್ಚಕರ ಪರವಾಗಿ ನ್ಯಾಯ ಕೊಡಿಸಿದ್ದರು. ಬಳಿಕ ಅರ್ಚಕರು ತನ್ನ ಭೂಮಿ ಒಡೆತನ ಸಾಬೀತುಪಡಿಸಲು ಜೋಳವನ್ನು ನೆಟ್ಟಿದ್ದರು.

ಇದರಿಂದ ಕೆರಳಿದ ಆರೋಪಿಗಳು ಮತ್ತೆ ಪುರೋಹಿತರು ಸಮತಟ್ಟುಗೊಳಿಸಿದ ಜಾಗದಲ್ಲಿ ತಮ್ಮದೇ ಗುಡಿಸಲು ಕಟ್ಟಲು ಆರಂಭಿಸಿದ್ದರು. ಹೀಗೆ ಘರ್ಷಣೆ ನಡೆದಾಗ ಆರು ಮಂದಿ ಮೈಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿರುವುದಾಗಿ ಸಾಯುವ ಮುನ್ನ ಪೊಲೀಸರಿಗೆ ನೀಡಿರುವ ಹೇಳಿಕೆಯಲ್ಲಿ ತಿಳಿಸಿರುವುದಾಗಿ ವರದಿ ಹೇಳಿದೆ.

ಇದನ್ನೂ ಓದಿ:ರಿಷಿಕೇಶ್: ಯೋಗ ನಿರತ ಯುವತಿ ಮೇಲೆ ಅತ್ಯಾಚಾರ; ಪೊಲೀಸರಿಗೆ ದೂರು

ಶೇ.90ರಷ್ಟು ದೇಹ ಸುಟ್ಟು ಹೋಗಿದ್ದ ಅರ್ಚಕರನ್ನು ಜೈಪುರ್ ಎಸ್ ಎಂಎಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಗುರುವಾರ ಸಾವನ್ನಪ್ಪಿರುವುದಾಗಿ ವರದಿ ತಿಳಿಸಿದೆ. ಘಟನೆಗೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ಕೈಲಾಶ್ ಮೀನಾ ಎಂಬಾತನನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಪೊಲೀಸ್ ಅಧಿಕಾರಿ ಹರಿಜಿ ಲಾಲ್ ಯಾದವ್ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next