ಜೈಪುರ: ಚಾಣಾಕ್ಷ ರಾಜಕಾರಣಿ, ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರು ಕಾಂಗ್ರೆಸ್ ಅಧ್ಯಕ್ಷರಾಗಲು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂಬ ವಿಚಾರ ಕಾಂಗ್ರೆಸ್ ಸರಕಾರದಲ್ಲಿ ಭಾರಿ ರಾಜಕೀಯ ಬಿಕ್ಕಟ್ಟಿಗೆ ಕಾರಣವಾಗಿದೆ.
ರೋಚಕ ತಿರುವಿನಲ್ಲಿ, ಅಶೋಕ್ ಗೆಹ್ಲೋಟ್ ಅವರ ಬಣ ಬಂಡಾಯಕ್ಕೆ ಸಾಕ್ಷಿಯಾಗಿದ್ದು, ಪಕ್ಷದ ಅಧ್ಯಕ್ಷರಾಗಲು ಸಿದ್ಧರಾಗಿದ್ದರೂ ಸಹ, ಮೂಲಗಳ ಪ್ರಕಾರ ಗೆಹ್ಲೋಟ್‌ಗೆ ನಿಷ್ಠರಾಗಿರುವ ರಾಜಸ್ಥಾನದ 92 ಶಾಸಕರು ಮಾಜಿ ಉಪಮುಖ್ಯಮಂತ್ರಿ ಸಚಿನ್ ಪೈಲಟ್ ಅವರ ಉನ್ನತ ಹುದ್ದೆಗೆ ಉಮೇದುವಾರಿಕೆಯನ್ನು ಬಹಿರಂಗವಾಗಿ ವಿರೋಧಿಸಿದ್ದಾರೆ.
ಶಾಸಕರು ವಿಧಾನಸಭಾಧ್ಯಕ್ಷ ಸಿಪಿ ಜೋಶಿ ಅವರ ನಿವಾಸಕ್ಕೆ ಆಗಮಿಸಿದ್ದು, ಅಲ್ಲಿ ಅವರು ವಿಧಾನಸಭೆ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸುವ ಸಾಧ್ಯತೆ ಇದೆ. ಅಶೋಕ್ ಗೆಹ್ಲೋಟ್ ಕಾಂಗ್ರೆಸ್ ಮುಖ್ಯಸ್ಥರಾಗುತ್ತಾರೆ ಎಂದು ಪರಿಗಣಿಸಲ್ಪಟ್ಟಿದ್ದರಿಂದ ಬಂಡಾಯ ಸಂಪೂರ್ಣವಾಗಿ ಅನಿರೀಕ್ಷಿತವಾಗಿತ್ತು.
ಇದನ್ನೂ ಓದಿ: 15 ಕೋಟಿ ರೂ ವಂಚನೆ: ಆರೋಗ್ಯ ಸಚಿವಾಲಯದ ಸಿಬಂದಿ ಸೇರಿ ಐವರ ಬಂಧನ
ರಾಜ್ಯ ಸಚಿವ ಪ್ರತಾಪ್ ಖಚ್ರಿಯಾವಾಸ್ ಪ್ರಕಾರ, 92 ಶಾಸಕರು ಒಟ್ಟಾಗಿದ್ದು ರಾಜೀನಾಮೆ ನೀಡಲು ನಿರ್ಧರಿಸಿದ್ದಾರೆ. ನಮ್ಮ ನಾಯಕನನ್ನು ಆಯ್ಕೆ ಮಾಡಲು ನಮಗೆ ಎಲ್ಲಾ ಹಕ್ಕಿದೆ ಮತ್ತು ನಮ್ಮ ನಾಯಕನನ್ನು ನಾವೇ ನಿರ್ಧರಿಸುತ್ತೇವೆ ಎಂದು ಅವರು ಹೇಳಿದರು. ಈ ಶಾಸಕರು ವಿಧಾನಸಭೆ ಸ್ಪೀಕರ್ ಸಿ.ಪಿ. ಜೋಶಿ ರಾಜೀನಾಮೆ ಸಲ್ಲಿಸಲಿದ್ದಾರೆ ಎಂದು ಹೇಳಲಾಗಿದೆ.
ಹೊಸ ಬಿಕ್ಕಟ್ಟಿನೊಂದಿಗೆ, ಸಚಿನ್ ಪೈಲಟ್‌ಗೆ ಈಗ ರಾಜಸ್ಥಾನದ ಮುಖ್ಯಮಂತ್ರಿಯಾಗುವುದು ಹೆಚ್ಚು ಕಷ್ಟಕರವಾಗಿದೆ ಎಂದು ಕಂಡು ಬಂದಿದೆ.