ಕೊಪ್ಪಳ: ಕೋವಿಡ್ 19 ವೈರಸ್ ನಿಯಂತ್ರಣಕ್ಕಾಗಿ ಸರ್ಕಾರ ಜಾರಿ ಮಾಡಿದ್ದ ಲಾಕ್‌ಡೌನ್ ವೇಳೆ ಜಿಲ್ಲೆಯಲ್ಲಿ ಸಿಲುಕಿದ್ದ ರಾಜಸ್ಥಾನದ 96 ವಲಸೆ ಕಾರ್ಮಿಕರನ್ನು ಜಿಲ್ಲಾಡಳಿತವು ಭಾನುವಾರ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ತವರಿಗೆ ಕಳುಹಿಸಿಕೊಟ್ಟಿತು.
ಜಿಲ್ಲೆಯ ವಿವಿಧ ಕಡೆಗಳಲ್ಲಿ ಕೆಲಸ ಅರಸಿಕೊಂಡು ರಾಜಸ್ಥಾನ ಮೂಲದ ಕಾರ್ಮಿಕರು ಹಲವು ಸಮಯಗಳ ಹಿಂದೆ ಇಲ್ಲಿಗೆ ಆಗಮಿಸಿದ್ದರು. ಇನ್ನು ಕೆಲವರು ಕೊಪ್ಪಳ ಮಾರ್ಗವಾಗಿ ಬೇರೆ ಜಿಲ್ಲೆಗೆ ಪ್ರಯಾಣ ಮಾಡುವ ವೇಳೆ ಲಾಕ್ ಡೌನ್ ಜಾರಿಯಾಗುತ್ತಿದ್ದಂತೆ ಜಿಲ್ಲೆಯಲ್ಲಿಯೇ ಸಿಲುಕಿದ್ದರು.
ಸರ್ಕಾರ ಇವರ ಸಂಕಷ್ಟ ಅರಿತು ವಸತಿ ನಿಲಯದಲ್ಲಿ ಅವರಿಗೆ ವಾಸ್ತವ್ಯ ಮಾಡಿದ್ದಲ್ಲದೇ, ನಿತ್ಯವೂ ಊಟ, ಉಪಚಾರ ಮಾಡಿತ್ತು. ಅಲ್ಲದೇ ಕಾಲ ಕಾಲಕ್ಕೆ ಆರೋಗ್ಯ ತಪಾಸಣೆ ಮಾಡಿ ವಲಸಿಗ ಕಾರ್ಮಿಕರ ಮೇಲೆ ಹೆಚ್ಚು ನಿಗಾ ವಹಿಸಿತ್ತು.
ತಿಂಗಳು ಕಾಲ ಕೊಪ್ಪಳದ ವಸತಿಯ ನಿಲಯದಲ್ಲಿಯೇ ವಾಸ್ತವ್ಯ ಮಾಡಿದ್ದ ಕಾರ್ಮಿಕರು ನಮ್ಮನ್ನು ನಮ್ಮ ಊರಿಗೆ ಕಳುಹಿಸಿಕೊಡಿ ಎಂದು ಮನವಿ ಮಾಡಿದ್ದರಲ್ಲದೇ, ವಸತಿ ನಿಲಯದಲ್ಲಿ ಅಧಿಕಾರಿಗಳನ್ನು ಪರಿಪರಿಯಾಗಿ ಕೇಳಿಕೊಂಡಿದ್ದರು.
ಕೇಂದ್ರ ಹಾಗೂ ರಾಜ್ಯ ಸರ್ಕಾರವು ಅಂತರಾಜ್ಯದಲ್ಲೂ ಜನ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟ ಹಿನ್ನೆಲೆಯಲ್ಲಿ ಜಿಲ್ಲಾಡಳಿತವು ಮೂರು ಸರ್ಕಾರಿ ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ 96 ಕಾರ್ಮಿಕರನ್ನು ಅವರ ಊರುಗಳತ್ತ ಕಳುಹಿಸಿಕೊಟ್ಟಿತು. ಪ್ರತಿ ಬಸ್‌ನಲ್ಲಿಯೂ 32 ಜನರಿಗೆ ಮಾತ್ರ ಅವಕಾಶ ಮಾಡಿಕೊಡಲಾಗಿತ್ತು.
ಹಾಗಾಗಿ ಭಾನುವಾರ ವಸತಿ ನಿಲಯದಿಂದ ಎಸಿಸಿ. ಡಿ. ಗೀತಾ, ಕೊಪ್ಪಳ ತಹಸೀಲ್ದಾರ ಜೆ.ಬಿ. ಮಜ್ಜಗಿ ಸೇರಿ ಇತರೆ ಅಧಿಕಾರಿ ವರ್ಗವು ಎಲ್ಲ ಕಾರ್ಮಿಕರನ್ನು ಅವರ ಊರುಗಳತ್ತ ಪ್ರಯಾಣ ಬೆಳೆಸಲು ಬೀಳ್ಕೊಟ್ಟರು.