ಜೈಪುರ್:ಕಳೆದ 50 ವರ್ಷಗಳಿಂದ ವಿಧಾನಸಭೆ, ಲೋಕಸಭೆ ಚುನಾವಣೆಗೆ ಸ್ಪರ್ಧಿಸಿ, ಪ್ರತಿಬಾರಿಯೂ ಠೇವಣಿ ಕಳೆದುಕೊಳ್ಳುತ್ತಿದ್ದ ರಾಜಸ್ಥಾನದ ನರೇಗಾ ಕೂಲಿ ಕಾರ್ಮಿಕ ಟೀಟಾರ್ ಸಿಂಗ್ (78ವರ್ಷ) ಈ ಬಾರಿಯೂ ಮತ್ತೆ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸುವುದಾಗಿ ತಿಳಿಸಿದ್ದಾರೆ.
ಇದನ್ನೂ ಓದಿ:‘Thug Lifeʼನಲ್ಲಿ ʼಶಕ್ತಿವೇಲುʼ ಆಗಿ ಮಿಂಚಿದ ʼನಾಯಕನ್ʼ: ಮಣಿರತ್ನಂ ಸಿನಿಮಾದ ಟೈಟಲ್ ಔಟ್
ನವೆಂಬರ್ 25ರಂದು ನಡೆಯಲಿರುವ ರಾಜಸ್ಥಾನ್ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸುವ ಮೂಲಕ ಮತ್ತೆ ಅದೃಷ್ಟ ಪರೀಕ್ಷೆ ಮುಂದಾಗಿರುವುದಾಗಿ ಸಿಂಗ್ ಹೇಳಿದ್ದಾರೆ. ಕಳೆದ 50 ವರ್ಷಗಳಲ್ಲಿ 20 ಚುನಾವಣೆಗಳಲ್ಲಿ ಸೋತಿದ್ದೀರಿ, ಆದರೂ ಮತ್ತೆ, ಮತ್ತೆ ಯಾಕೆ ಸ್ಪರ್ಧಿಸುತ್ತೀರಿ ಎಂಬ ಪ್ರಶ್ನೆಗೆ ಕರಣ್ ಪುರ್ ವಿಧಾನಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಸಿಂಗ್, ನಾನೇಕೆ ಸ್ಪರ್ಧಿಸಬಾರದು ಎಂದು ಪ್ರಶ್ನಿಸಿದ್ದಾರೆ.
ಸರ್ಕಾರ ಭೂಮಿ ಮತ್ತು ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕೆಂದು ಹೇಳಿರುವ ಸಿಂಗ್, ಇದು ಹಕ್ಕುಗಳಿಗಾಗಿ ಹೋರಾಡುವ ಚುನಾವಣೆಯಾಗಿದೆ ಎಂದು ಕಾರ್ಮಿಕ ಸಿಂಗ್ ಪಿಟಿಐ ಜತೆ ದೂರವಾಣಿಯಲ್ಲಿ ಮಾತನಾಡುತ್ತ ತಿಳಿಸಿದ್ದಾರೆ. ನಾನು ಯಾವುದೇ ಜನಪ್ರಿಯತೆಗಾಗಲಿ ಅಥವಾ ದಾಖಲೆಗಾಗಿ ಚುನಾವಣೆಯಲ್ಲಿ ಸ್ಪರ್ಧಿಸುತ್ತಿಲ್ಲ ಎಂಬುದು ಸಿಂಗ್ ನುಡಿಯಾಗಿದೆ.
“ನಮ್ಮ ಹಕ್ಕುಗಳ ಬೇಡಿಕೆ ಈಡೇರಿಸಿಕೊಳ್ಳಲು ಇದೊಂದು ಅಸ್ತ್ರವಾಗಿದೆ. ಆ ನಿಟ್ಟಿನಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸಲು ವಯಸ್ಸು ಮುಖ್ಯವಾಗುವುದಿಲ್ಲ ಎಂಬುದು ಸಿಂಗ್ ವಾದವಾಗಿದೆ. ಟೀಟಾರ್ ಸಿಂಗ್ ಪಂಚಾಯತ್ ನಿಂದ ಹಿಡಿದು ಲೋಕಸಭಾ ಚುನಾವಣೆಗೆ ಸತತವಾಗಿ ಸ್ಪರ್ಧಿಸುತ್ತಿದ್ದಾರೆ. ಆದರೆ ಸಿಂಗ್ ಎಲ್ಲಾ ಚುನಾವಣೆಯಲ್ಲಿಯೂ ಪರಾಜಯಗೊಂಡಿರುವುದಾಗಿ ವರದಿ ವಿವರಿಸಿದೆ.
ನವೆಂಬರ್ 25ರಂದು ನಡೆಯಲಿರುವ ವಿಧಾನಸಭಾ ಚುನಾವಣೆಗಾಗಿ ಈಗಾಗಲೇ ನಾಮಪತ್ರ ಸಲ್ಲಿಸಿರುವುದಾಗಿ ಸಿಂಗ್ ತಿಳಿಸಿದ್ದಾರೆ. ಕಾಲುವೆ ಪ್ರದೇಶದಲ್ಲಿ ಭೂಮಿಯನ್ನು ಕಳೆದುಕೊಂಡ ಜನರು ಹೆಚ್ಚು ಒಲವು ತೋರಲು ಆರಂಭಿಸಿದ್ದಾಗಿನಿಂದ (1970) ಚುನಾವಣೆಗೆ ಸ್ಪರ್ಧಿಸಲು ನಿರ್ಧರಿಸಿರುವುದಾಗಿ ಸಿಂಗ್ ಹೇಳಿದರು.
ಸರ್ಕಾರ ಭೂಮಿ ಇಲ್ಲದವರಿಗೆ ಹಾಗೂ ಬಡ ಕಾರ್ಮಿಕರಿಗೆ ಭೂಮಿ ಒದಗಿಸಬೇಕು ಎಂಬುದು ಸಿಂಗ್ ಪ್ರಮುಖ ಬೇಡಿಕೆಯಾಗಿದೆ. ಆದರೆ ಕಳೆದ 50 ವರ್ಷಗಳಿಂದ ಚುನಾವಣೆಗೆ ಸ್ಪರ್ಧಿಸುತ್ತಿದ್ದರೂ ಕೂಡಾ ಭೂಮಿ ಕೊಡಬೇಕು ಎಂಬ ಬೇಡಿಕೆ ಇನ್ನೂ ಈಡೇರಿಲ್ಲ. ಸಿಂಗ್ ಪುತ್ರ ಕೂಡಾ ದಿನಗೂಲಿ ಕಾರ್ಮಿಕನಾಗಿ ದುಡಿಯುತ್ತಿದ್ದಾನೆ.
ಸಿಂಗ್ ಗೆ ಮೂವರು ಹೆಣ್ಣು, ಇಬ್ಬರು ಗಂಡು ಮಕ್ಕಳಿದ್ದಾರೆ. ಅಲ್ಲದೇ ಮೊಮ್ಮಕ್ಕಳಿಗೂ ಕೂಡಾ ವಿವಾಹವಾಗಿದೆ. ತನ್ನ ಬಳಿ 2,500 ರೂಪಾಯಿ ನಗದು ಇದ್ದು, ಯಾವುದೇ ಭೂಮಿ, ಆಸ್ತಿ, ವಾಹನಗಳು ಇಲ್ಲ ಎಂದು ಸಿಂಗ್ ತಿಳಿಸಿದ್ದಾರೆ.
2008ರಲ್ಲಿ ನಡೆದ ರಾಜಸ್ಥಾನ್ ವಿಧಾನಸಭಾ ಚುನಾವಣೆಯಲ್ಲಿ ಸಿಂಗ್ 938 ಮತ ಪಡೆದಿದ್ದು, 2013ರಲ್ಲಿ 427 ಮತ ಹಾಗೂ 2018ರ ವಿಧಾನಸಭಾ ಚುನಾವಣೆಯಲ್ಲಿ 653 ಮತ ಗಳಿಸಿರುವುದಾಗಿ ವರದಿ ತಿಳಿಸಿದೆ.