ಜೈಪುರ : ಮಾಜಿ ರಾಜ್ಯ ಸಚಿವ, ಐದು ಬಾರಿಯ ಶಾಸಕ ಘನಶ್ಯಾಮ್ ತಿವಾರಿ ಅವರು ಭಾರತೀಯ ಜನತಾ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ.
ರಾಜಸ್ಥಾನ ಮತ್ತು ದೇಶದಲ್ಲಿನ ಅಘೋಷಿತ ತುರ್ತು ಪರಿಸ್ಥಿತಿಯ ವಿರುದ್ಧ ಹೋರಾಡಲು ತನ್ನ ಪುತ್ರನ ಜತೆಗೆ ತಾನು ಹೊಸ ರಾಜಕೀಯ ಪಕ್ಷವೊಂದನ್ನು ಹುಟ್ಟು ಹಾಕಿರುವುದಾಗಿ ತಿವಾರಿ ಹೇಳಿದ್ದಾರೆ.
ತಿವಾರಿ ಅವರು ತಮ್ಮ ರಾಜೀನಾಮೆ ಪತ್ರವನ್ನು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರಿಗೆ ಕಳುಹಿಸಿದ್ದಾರೆ.
ಬಂಡುಕೋರ ಬಿಜೆಪಿ ನಾಯಕ ಘನಶ್ಯಾಮ್ ತಿವಾರಿ ಅವರ ಪುತ್ರ ಅಖೀಲೇಶ್ ಅವರು ರಾಜಸ್ಥಾನ ವಿಧಾನಸಭೆಗೆ ಸ್ಪರ್ಧಿಸಲು ‘ಭಾರತ್ ವಾಹಿನಿ ಪಾರ್ಟಿ’ ಎಂಬ ರಾಜಕೀಯ ಪಕ್ಷವನ್ನು ಸ್ಥಾಪಿಸಿದ್ದಾರೆ.
ಸಂಗನೇರ್ ವಿಧಾನಸಭಾ ಕ್ಷೇತ್ರದ ಶಾಸಕರಾಗಿರುವ ತಿವಾರಿ ಅವರಿಗೆ ರಾಜಸ್ಥಾನದ ಮುಖ್ಯಮಂತ್ರಿ ವಸುಂಧರಾ ರಾಜೆ ಅವರೊಂದಿಗೆ ತೀವ್ರ ತಿಕ್ಕಾಟವಿದೆ. ರಾಜೆ ಅವರನ್ನು ಕಿತ್ತು ಹಾಕದಿದ್ದರೆ ಬಿಜೆಪಿ ಮುಂಬರುವ ವಿಧಾನಸಭಾ ಚುನಾವಣೆಯನ್ನು ಸೋಲುವುದು ನಿಶ್ಚಿತ ಎಂದು ತಿವಾರಿ ಭವಿಷ್ಯ ನುಡಿದಿದ್ದಾರೆ.
ಸ್ಥಾಪಕ ಮತ್ತು ಅಧ್ಯಕ್ಷ ಘನಶ್ಯಾಮ್ ಇವಾರಿ ಅವರ ನೇತೃತ್ವದ ಭಾರತ್ ವಾಹಿನಿ ಪಾರ್ಟಿ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಎಲ್ಲ 200 ಸ್ಥಾನಗಳಲ್ಲಿ ಸ್ಪರ್ಧಿಸಲಿದೆ ಎಂದು ಅಖೀಲೇಶ್ ತಿವಾರಿ ಹೇಳಿದ್ದಾರೆ.