ಜೈಪುರ: ರಾಜಸ್ಥಾನದ ರಾಜಕೀಯದಲ್ಲಿ ಉಂಟಾಗಿದ್ದ ಬಿಕ್ಕಟ್ಟು ತಾತ್ಕಾಲಿಕವಾಗಿ ಶಮನವಾದ ಬೆನ್ನಲ್ಲೇ ಕಾಂಗ್ರೆಸ್ ನಾಯಕ ಸಚಿನ್ ಪೈಲಟ್ ಅವರು ಮುಖ್ಯಮಂತ್ರಿ ಅಶೋಕ್ ಗೆಹೋಲೊಟ್ ಅವರಿಗೆ ಐವರು ಶಾಸಕರ ಪಟ್ಟಿಯೊಂದನ್ನು ನೀಡಿ, ಉಪಮುಖ್ಯಮಂತ್ರಿ ಸೇರಿದಂತೆ ಪ್ರಮುಖ ಹುದ್ದೆಗಳನ್ನು ನೀಡುವಂತೆ ಆಗ್ರಹಿಸಿದ್ದಾರೆ. ಈ ಬೆಳವಣಿಗೆಯಿಂದಾಗಿ ರಾಜಸ್ಥಾನ ಕಾಂಗ್ರೆಸ್‌ನಲ್ಲಿ ಇನ್ನೂ ಎಲ್ಲವೂ ಸರಿಯಾಗಿಲ್ಲ ಎಂಬುದು ಸ್ಪಷ್ಟವಾದಂತಾಗಿದೆ.
ರಾಜ್ಯದ ಉಪಮುಖ್ಯಮಂತ್ರಿ ಹುದ್ದೆ, ಎರಡು ಸಂಪುಟ ದರ್ಜೆ ಹುದ್ದೆಗಳು ಮತ್ತು ಎರಡು ಸಚಿವ ಸ್ಥಾನಗಳನ್ನು ನೀಡುವಂತೆ ಪೈಲಟ್ ಒತ್ತಾಯಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಅಲ್ಲದೆ, ರಾಜಕೀಯ ಬಿಕ್ಕಟ್ಟಿನ ಸಂದರ್ಭದಲ್ಲಿ ವಜಾಗೊಂಡಿದ್ದ ಶಾಸಕರಾದ ವಿಶ್ವೇಂದ್ರ ಸಿಂಗ್ ಮತ್ತು ರಮೇಶ್ ಮೀನಾ ಅವರಿಗೂ ಪ್ರಮುಖ ಹುದ್ದೆ ಸಿಗುವ ನಿರೀಕ್ಷೆಯಿದೆ. ವಜಾಗೊಳ್ಳುವ ಮುನ್ನ ಇವರಿಬ್ಬರೂ ಕ್ರಮವಾಗಿ ಪ್ರವಾಸೋದ್ಯಮ ಮತ್ತು ಆಹಾರ ಸರಬರಾಜು ಸಚಿವರಾಗಿದ್ದರು.
ರಾಹುಲ್ ಕೃಪಾಕಟಾಕ್ಷ
ಸಚಿನ್ ಪೈಲಟ್ ತಂಡಕ್ಕೆ ರಾಹುಲ್ ಗಾಂಧಿಯವರ ಸಂಪೂರ್ಣ ಬೆಂಬಲವಿದ್ದು, ಗೆಹೋಲೊಟ್ ಜತೆಗಿನ ಸಂಧಾನ ಮಾತುಕತೆ ವೇಳೆಯೂ ಇದು ಸ್ಪಷ್ಟವಾಗಿತ್ತು.