Advertisement

ಗೆಹ್ಲೋಟ್‌ಗೆ ಅಕ್ರಮ ಕಳಂಕ? : ಆದಾಯ ತೆರಿಗೆ ಇಲಾಖೆ ದಾಳಿ ವೇಳೆ ಹಲವು ಅಂಶ ಬಹಿರಂಗ

03:05 AM Jul 14, 2020 | Hari Prasad |

ಹೊಸದಿಲ್ಲಿ/ಜೈಪುರ: ರಾಜಸ್ಥಾನ ರಾಜಕೀಯ ಬಿಕ್ಕಟ್ಟಿನ ನಡುವೆ ಆದಾಯ ತೆರಿಗೆ ಇಲಾಖೆ ಜೈಪುರ, ಮುಂಬಯಿ, ರಾಜಸ್ಥಾನದ ಕೋಟಾ, ಹೊಸದಿಲ್ಲಿಯಲ್ಲಿ ಸೋಮವಾರ ದಾಳಿ ನಡೆಸಿದೆ.

Advertisement

ಈ ಸಂದರ್ಭದಲ್ಲಿ ಕೆಲವು ಪ್ರಕರಣಗಳು ಪತ್ತೆಯಾಗಿದ್ದು, ಅವು ನೇರವಾಗಿ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್‌ ಗೆಹ್ಲೋಟ್‌ ಅವರ ಕುಟುಂಬದೊಂದಿಗೆ ಬೆಸೆದುಕೊಂಡಿರುವುದು ಬೆಳಕಿಗೆ ಬಂದಿದೆ.

ತೆರಿಗೆಯನ್ನು ವಂಚಿಸಿರುವ ಕಂಪೆನಿಗಳ ವಿರುದ್ಧ ಸಮರ ಸಾರಿರುವ ಕೇಂದ್ರ ಐಟಿ ಇಲಾಖೆ, ದೇಶದ ನಾನಾ ಕಡೆ ನಾನಾ ಕಂಪೆನಿಗಳು, ವಾಣಿಜ್ಯ ಸಂಸ್ಥೆಗಳ ಮೇಲೆ ದಾಳಿ ನಡೆಸಿದೆ. ಮುಂಬಯಿಯಲ್ಲಿರುವ ಮಯಾಂಕ್‌ ಶರ್ಮಾ ಎಂಟರ್‌ಪ್ರೈಸಸ್‌ ಹಾಗೂ ಓಂ ಕೊಠಾರಿ ಗ್ರೂಪ್‌ ಎಂಬ ಎರಡು ಕಂಪನಿಗಳ ಮೇಲೆಯೂ ದಾಳಿ ನಡೆಸಲಾಗಿತ್ತು.

ಇವುಗಳಲ್ಲಿ, ಮಯಾಂಕ್‌ ಶರ್ಮಾ ಎಂಟರ್‌ಪ್ರೈಸಸ್‌ ಕಂಪೆನಿಯ ಮಾಲಕರಾದ ರತನ್‌ ಕಾಂತ್‌ ಶರ್ಮಾ ಅವರು ಅಶೋಕ್‌ ಗೆಹ್ಲೋಟ್‌ ಅವರ ಪುತ್ರ ವೈಭವ್‌ ಗೆಹ್ಲೋಟ್‌ ಅವರ ಜತೆಗೆ ವ್ಯಾವಹಾರಿಕ ನಂಟು ಹೊಂದಿದ್ದಾರೆ ಎಂದು ಹೇಳಲಾಗಿದೆ.

ರತನ್‌ ಕಾಂತ್‌ ಶರ್ಮಾ ಅವರು, ಮಾರಿಷಸ್‌ನಲ್ಲಿರುವ ಕಂಪನಿಯೊಂದರಿಂದ 96.7 ಕೋಟಿ ರೂ.ಗಳಷ್ಟು ಹಣವನ್ನು ಅಕ್ರಮವಾಗಿ ಪಡೆದಿದ್ದಾರೆ ಎನ್ನಲಾಗಿದೆ. ಅಲ್ಲದೆ, ಶರ್ಮಾ ಅವರು, ಜೈಪುರದಲ್ಲಿರುವ ಹೋಟೆಲ್‌ ಫೇರ್‌ಮೌಂಟ್‌ನಲ್ಲಿ ಷೇರು ಹೊಂದಿದ್ದಾರೆಂದು ಹೇಳಲಾಗಿದ್ದು, ಅದೇ ಹೋಟೆಲ್‌ಗೆ ಈಗ ಕಾಂಗ್ರೆಸ್‌ ಪಕ್ಷ ತನ್ನ ರಾಜಸ್ಥಾನ ಶಾಸಕರನ್ನು ಕಳುಹಿಸಿದೆ. ಆದರೆ, ಸೋಮವಾರ ಬೆಳಗ್ಗೆಯೇ ಫೇರ್‌ಮೌಂಟ್‌ ಹೋಟೆಲ್‌ ರೈಡ್‌ ಮಾಡಲಾಗಿತ್ತು.

Advertisement

ಮತ್ತೊಂದೆಡೆ, ದೆಹಲಿ ಮತ್ತು ಜೈಪುರದಲ್ಲಿ ಇರುವ ಎರಡು ಕಂಪನಿಗಳ ಮೇಲೆ ಐಟಿ ಇಲಾಖೆ ದಾಳಿ ನಡೆಸಿದೆ. ಆ ಕಂಪನಿಗಳು, ಅಶೋಕ್‌ ಗೆಹ್ಲೋಟ್‌ ಅವರ ಆಪ್ತ ಶಾಸಕರಾದ ಧರ್ಮೇಂದ್ರ ರಾಥೋಡ್‌ ಹಾಗೂ ರಾಜೀವ್‌ ಅರೋರಾ ಅವರಿಗೆ ಸೇರಿದ ಕಂಪನಿಗಳಾಗಿವೆ ಎಂದು ಹೇಳಲಾಗಿದೆ. ಅದರಲ್ಲೂ ಚಿನ್ನಾಭರಣ ಕಂಪೆನಿಯೊಂದರ ಮಾಲಕರೂ ಆಗಿರುವ ಅರೋರಾ ಅವರಿಗೆ ಸಂಬಂಧಿಸಿದಂತೆ ಹೆಚ್ಚು ತನಿಖೆ ನಡೆಸಲಾಗುತ್ತಿದೆ ಎಂದು ಐಟಿ ಮೂಲಗಳು ತಿಳಿಸಿವೆ.

ಕಾಂಗ್ರೆಸ್‌ ಖಂಡನೆ: ರಾಜಸ್ಥಾನದ ಕಾಂಗ್ರೆಸ್‌ ನಾಯಕರಾದ ರಾಜೀವ್‌ ಅರೋರಾ ಹಾಗೂ ಧರ್ಮೇಂದ್ರ ರಾಥೋಡ್‌ ಅವರಿಗೆ ಸೇರಿದ ಕಂಪನಿಗಳ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿರುವುದನ್ನು ರಾಜಸ್ಥಾನ ಕಾಂಗ್ರೆಸ್‌ನ ಮುಖ್ಯ ಸಚೇತಕ ಮಹೇಶ್‌ ಜೋಷಿ ಖಂಡಿಸಿದ್ದಾರೆ.

ಮಾತುಕತೆಗೆ ಅವಕಾಶ ಇದೆ ಎಂದ ಕಾಂಗ್ರೆಸ್‌
ಎಲ್ಲಾ ಸದಸ್ಯರು ಸೇರಿದಂತೆ ಮಾತ್ರ ಅದನ್ನು ಕುಟುಂಬ ಎನ್ನಲು ಸಾಧ್ಯ. ಯಾವುದೇ ಕುಟುಂಬದ ಸದಸ್ಯ ಮುನಿಸಿಕೊಂಡು ದೂರವಾದರೆ ಆತನನ್ನು ಪ್ರತ್ಯೇಕವಾಗಿ ಕುಟುಂಬ ಎಂದು ಕರೆಯಲು ಸಾಧ್ಯವಿಲ್ಲ. ಈಗ ಕೋಪಗೊಂಡವರು, ಮುನಿಸಿಕೊಂಡವರು ತಮ್ಮ ನೋವು, ಅಹವಾಲುಗಳನ್ನು ಹೇಳಿಕೊಳ್ಳಲು ಕುಟುಂಬ ಅವಕಾಶ ಕೊಟ್ಟಿದೆ. ಬಂದು ತಮ್ಮ ಪಾಲಿನ ದೂರುಗಳನ್ನು ಹೇಳಿಕೊಳ್ಳಬಹುದು

– ಇದು ಕಾಂಗ್ರೆಸ್‌ ವಕ್ತಾರ ರಣದೀಪ್‌ ಸುರ್ಜೇವಾಲ, ರಾಜಸ್ಥಾನದ ಉಪಮುಖ್ಯಮಂತ್ರಿ ಸಚಿನ್‌ ಪೈಲಟ್‌ ಹಾಗೂ ಅವರ ಬೆಂಬಲಿಗರಿಗೆ ನೀಡಿದ ಸೂಚನೆ. ಮುಖ್ಯಮಂತ್ರಿ ಅಶೋಕ್‌ ಗೆಹ್ಲೋಟ್‌ ವಿರುದ್ಧ ಸಡ್ಡು ಹೊಡೆದಿರುವ ಪೈಲಟ್‌, ತಮ್ಮ ಬೆಂಬಲಿಗರಾದ 30 ಶಾಸಕರೊಂದಿಗೆ ಶನಿವಾರ ದಿಲ್ಲಿಗೆ ಆಗಮಿಸಿದ್ದರು. ಅದರ ಬೆನ್ನಲ್ಲೇ ಕಾಂಗ್ರೆಸ್‌, ಪರಿಸ್ಥಿತಿ ನಿಯಂತ್ರಣಕ್ಕೆ ತರಲು ಕಾಂಗ್ರೆಸ್‌ ವಕ್ತಾರ ರಣದೀಪ್‌ ಸುರ್ಜೇವಾಲ, ಹಿರಿಯ ನಾಯಕ ಅಜಯ್‌ ಮಾಕೆನ್‌ಅವರನ್ನು ಜೈಪುರಕ್ಕೆ ರವಾನಿಸಿತ್ತು.

ಬಿಕ್ಕಟ್ಟಿನ ಮುಂದಿರುವ ಸಾಧ್ಯತೆಗಳೇನು?
– ಸಚಿನ್‌ ಪೈಲಟ್‌ ಅವರ ಬಂಡಾಯದಿಂದಾಗಿ ರಾಜಸ್ಥಾನದಲ್ಲಿ ಅಶೋಕ್‌ ಗೆಹ್ಲೋಟ್‌ ಸರಕಾರ ಉರುಳಬಹುದು.

– ಗೆಹ್ಲೋಟ್‌ ಅವರು ಮುಖ್ಯಮಂತ್ರಿ ಹುದ್ದೆಯನ್ನು ಕಳೆದುಕೊಂಡು ಕಾಂಗ್ರೆಸ್‌ ಸರಕಾರ ಹಾಗೇ ಉಳಿಯಬಹುದು.

– ಸಚಿನ್‌ ಪಕ್ಷ ಬಿಟ್ಟು ಬಿಜೆಪಿಗೆ ಸೇರಬಹುದು ಅಥವಾ ಬೇರೆ ಪಕ್ಷ ಕಟ್ಟಬಹುದು. ಹಾಗೆ ಮಾಡಿದರೆ ಶಾಸಕರ ಸಂಖ್ಯೆ ಇಳಿಮುಖವಾಗಿ ಸರಕಾರ ಉರುಳಬಹುದು.

– ಕರ್ನಾಟಕದಲ್ಲಿ, ಮಧ್ಯ ಪ್ರದೇಶದಲ್ಲಿ ಕಲಿತ ಪಾಠದಿಂದಾಗಿ ಕಾಂಗ್ರೆಸ್‌ ಸಚಿನ್‌ ಪೈಲಟ್‌ ಅವರ ಬೇಡಿಕೆಗಳನ್ನು ಮನ್ನಿಸಿ, ಸರಕಾರವನ್ನು ಉಳಿಸಿಕೊಳ್ಳಬಹುದು.

Advertisement

Udayavani is now on Telegram. Click here to join our channel and stay updated with the latest news.

Next