ಜೈಪುರ್:ಚಾಯ್ ವಾಲ್ (ಟೀ ಮಾರಾಟಗಾರ) ಗಾಂಧಿ ಕುಟುಂಬವನ್ನು ಕೋರ್ಟ್ ಕಟಕಟೆಯನ್ನು ಹತ್ತಿಸಿರುವುದಕ್ಕೆ ಕಾಂಗ್ರೆಸ್ ಪಕ್ಷ ತನ್ನ ಮೇಲೆ ಆಕ್ರೋಶ ವ್ಯಕ್ತಪಡಿಸುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಬುಧವಾರ ವಾಗ್ದಾಳಿ ನಡೆಸಿದರು.
ನ್ಯಾಶನಲ್ ಹೆರಾಲ್ಡ್ ಪತ್ರಿಕೆ ಪರಭಾರೆ ಪ್ರಕರಣ ಸಂಬಂಧ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಸೋನಿಯಾ ಗಾಂಧಿ, ಕಾಂಗ್ರೆಸ್ ಮುಖಂಡ ಆಸ್ಕರ್ ಫರ್ನಾಂಡಿಸ್ ವಿರುದ್ಧದ ತೆರಿಗೆ ಮೌಲ್ಯಮಾಪನಕ್ಕೆ ಸುಪ್ರೀಂಕೋರ್ಟ್ ಮಂಗಳವಾರ ಅನುಮತಿ ನೀಡಿತ್ತು. ಆದರೆ ಈ ಪ್ರಕರಣದಲ್ಲಿ ರಾಹುಲ್ ಹಾಗೂ ಸೋನಿಯಾ ವಿಚಾರಣೆ ನಡೆಸಲು ಕೋರ್ಟ್ ಅನುಮತಿ ನೀಡಿಲ್ಲ.
ಬುಧವಾರ ರಾಜಸ್ಥಾನ್ ವಿಧಾನಸಭಾ ಚುನಾವಣೆಯ ಕೊನೆಯ ದಿನದ ಪ್ರಚಾರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಆಗಸ್ಟಾ ವೆಸ್ಟ್ ಲ್ಯಾಂಡ್ ಖರೀದಿ ಹಗರಣದ ಮಧ್ಯವರ್ತಿಯನ್ನು ಯುಪಿಎ ಸರ್ಕಾರ ರಕ್ಷಿಸಿತ್ತು. ಆದರೆ ಈ ಚಾಯ್ ವಾಲಾ ಮಧ್ಯವರ್ತಿ ಕ್ರಿಶ್ಚಿಯನ್ ಮಿಶೆಲ್ ನನ್ನು ದೇಶಕ್ಕೆ ತಂದಿದ್ದಾನೆ. ಆ ಶಕ್ತಿಯನ್ನು ನನಗೆ ದೇಶದ ಜನರು ಕೊಟ್ಟಿದ್ದಾರೆ ಎಂದರು.
ಈ ಮಧ್ಯವರ್ತಿ ಎಲ್ಲಾ ರಹಸ್ಯ ಮತ್ತು ಲಂಚದ ಕುರಿತ ಮಾಹಿತಿಯನ್ನು ಹೊಂದಿದ್ದಾನೆ. ನೋಡುವ ಮುಂದೇನಾಗುತ್ತೆ ಎಂದು..ಯಾಕೆಂದರೆ ಯಾವ ರಹಸ್ಯವೂ ಯಾವತ್ತೂ ರಹಸ್ಯವಾಗಿಯೇ ಉಳಿಯೋದಿಲ್ಲ ಎಂದು ಸೋನಿಯಾ ಮತ್ತು ರಾಹುಲ್ ಗೆ ಟಾಂಗ್ ನೀಡಿದರು.
ಹಳೆ ಪ್ರಕರಣಗಳನ್ನು ಕೆದಕುತ್ತಿದ್ದಂತೆಯೇ ತಾಯಿ ಮಗ ಕೋರ್ಟ್ ಗೆ ಹೋಗಿದ್ದರು. ಈಗ ನೋಡುತ್ತೇನೆ ಹೇಗೆ ಬಚಾವ್ ಆಗುತ್ತಾರೆ ಅಂತ. ತಾವು ಮಾಡಿದ್ದೇ ಫೈನಲ್ ಎಂದು ಭಾವಿಸಿದ್ದಾರೆ. ಪ್ರತಿಯೊಂದು ಹಳೆಯ ಪ್ರಕರಣವನ್ನು ಕೈಗೆತ್ತಿಕೊಳ್ಳುವ ಅಧಿಕಾರ ಸರ್ಕಾರಕ್ಕಿದೆ ಎಂದು ಮೋದಿ ಚಾಟಿ ಬೀಸಿದರು.