ನವದೆಹಲಿ: ರಾಜ್ಯದ ಮೈನಿಂಗ್ ಮಾಫಿಯಾ ತನ್ನ ಕಾರಿನ ಮೇಲೆ ಕಲ್ಲು ತೂರಾಟ ನಡೆಸಿ, ಕೊಲ್ಲಲು ಯತ್ನಿಸಿರುವ ಘಟನೆ ನಡೆದಿರುವುದಾಗಿ ರಾಜಸ್ಥಾನದ ಭಾರತ್ ಪುರ್ ಬಿಜೆಪಿ ಸಂಸದೆ ರಂಜಿತಾ ಕೋಲಿ ಸೋಮವಾರ (ಆಗಸ್ಟ್ 08) ಆರೋಪಿಸಿದ್ದಾರೆ.
ಇದನ್ನೂ ಓದಿ:ಅಕ್ರಮ ಗೋಹತ್ಯೆ ತಡೆಯಲು ಯೋಗಿ ಮಾದರಿಗೆ ಮುಂದಾದ ಚಿಕ್ಕಮಗಳೂರು ನಗರಸಭೆ
ಪೊಲೀಸರ ವಿರುದ್ಧ ಆಕ್ರೋಶ:
ಸುಮಾರು 150ಕ್ಕೂ ಅಧಿಕ ಲಾರಿಗಳು ಗಣಿಗಾರಿಕೆಯಲ್ಲಿ ತೊಡಗಿದ್ದು, ನಾನು ಲಾರಿಗಳನ್ನು ನಿಲ್ಲಿಸಲು ಪ್ರಯತ್ನಿಸಿದ್ದೆ. ಆದರೆ ಒಂದೆರಡು ಲಾರಿ ನಿಲ್ಲಿಸಿದ್ದು, ಉಳಿದ ಲಾರಿಗಳು ನಿಲ್ಲಿಸದೇ ಹೋಗಿದ್ದು, ಈ ಸಂದರ್ಭದಲ್ಲಿ ನನ್ನನ್ನು ಕೊಲ್ಲಲು ಯತ್ನಿಸಿರುವುದಾಗಿ ಸಂಸದೆ ರಂಜಿತಾ ಆರೋಪಿಸಿದ್ದಾರೆ. ಅಲ್ಲದೇ ಪೊಲೀಸರು ಶೀಘ್ರವಾಗಿ ಕ್ರಮ ತೆಗೆದುಕೊಳ್ಳಲಿಲ್ಲ ಎಂದು ದೂರಿ ಸಂಸದೆ ಸ್ಥಳದಲ್ಲೇ ಧರಣಿ ನಡೆಸಿರುವ ಘಟನೆ ನಡೆದಿತ್ತು.
ಘಟನೆ ಬಗ್ಗೆ ತಿಳಿಯುತ್ತಿದ್ದಂತೆಯೇ ಜಿಲ್ಲಾಧಿಕಾರಿ ಅಲೋಕ್ ರಂಜನ್ ಸಂಸದೆ ಬಳಿ ಬಂದು ದೂರು ನೀಡುವಂತೆ ಮನವಿ ಮಾಡಿಕೊಂಡಿದ್ದರು. ಸಮೀಪದ ಪೊಲೀಸ್ ಚೌಕಿಯಲ್ಲಿ ಸಮರ್ಪಕ ಪ್ರತಿಕ್ರಿಯೆ ದೊರೆಯದಿದ್ದ ಪರಿಣಾಮ ಸಂಸದೆ ಅಸಮಧಾನಗೊಂಡಿರುವುದಾಗಿ ಅಲೋಕ್ ತಿಳಿಸಿದ್ದು, ಇದೀಗ ದೂರು ದಾಖಲಿಸಿಕೊಂಡಿದ್ದು ತನಿಖೆ ನಡೆಸಲಾಗುತ್ತಿದೆ ಎಂದು ವಿವರಿಸಿದ್ದಾರೆ.
ರಾಜಸ್ಥಾನದಲ್ಲಿ ಗಣಿ ಮಾಫಿಯಾದಿಂದಾಗಿ ಕಾನೂನು ವ್ಯವಸ್ಥೆ ಕುಸಿದು ಬಿದ್ದಿರುವುದಾಗಿ ಕೇಂದ್ರ ಸಚಿವ ಅರ್ಜುನ್ ಮೇಘವಾಲ್ ಆರೋಪಿಸಿದ್ದು, ನಮ್ಮ ಹಾಲಿ ಸಂಸದೆ ಮೇಲೆ ದಾಳಿ ನಡೆಸಲು ಯತ್ನಿಸಿರುವುದು ಗಂಭೀರವಾದ ವಿಷಯವಾಗಿದೆ ಎಂದು ಅರ್ಜುನ್ ತಿಳಿಸಿದ್ದಾರೆ.