ಹೊಸದಿಲ್ಲಿ/ಜೈಪುರ: ರಾಜಸ್ಥಾನ ಬಿಕ್ಕಟ್ಟು ಸುಪ್ರೀಂಕೋರ್ಟ್ ಮೆಟ್ಟಿಲೇರಿದೆ. ಮಾಜಿ ಡಿಸಿಎಂ ಸಚಿನ್ ಪೈಲಟ್ ಮತ್ತು ಅವರ ಬೆಂಬಲಿಗ ಶಾಸಕರ ವಿರುದ್ಧ ಜು.24ರ ವರೆಗೆ ಕ್ರಮ ಕೈಗೊಳ್ಳುವಂತೆ ಇಲ್ಲ ಎಂಬ ರಾಜಸ್ಥಾನ ಹೈಕೋರ್ಟ್ ನೀಡಿದ ಮಧ್ಯಾಂತರ ಆದೇಶದ ವಿರುದ್ಧ ವಿಧಾನಸಭೆ ಸ್ಪೀಕರ್ ಸಿ.ಪಿ.ಜೋಶಿ ಮೇಲ್ಮನವಿ ಸಲ್ಲಿಸಿದ್ದಾರೆ. ಜು. 23ರಂದು ನ್ಯಾ|ಅರುಣ್ ಮಿಶ್ರಾ, ನ್ಯಾ| ಬಿ.ಆರ್.ಗವಾಯಿ ಮತ್ತು ನ್ಯಾ| ಕೃಷ್ಣ ಮುರಾರಿ ಅವರ ನ್ನೊಳಗೊಂಡ ನ್ಯಾಯಪೀಠದ ಮುಂದೆ ಪ್ರಕರಣ ವಿಚಾರಣೆಗೆ ಬರಲಿದೆ.
ವಿಧಾನಸಭೆಯಲ್ಲಿ ಕೈಗೊಳ್ಳಲಾಗುವ ಶಾಸಕತ್ವ ಅಸಿಂಧು ಹಾಗೂ ಇನ್ನಿತರ ನಡಾವಳಿಗಳು ಸಾಂವಿಧಾನಿಕ ಚೌಕಟ್ಟಿನಲ್ಲಿ ನಡೆಯುತ್ತವೆ. ಇದರಲ್ಲಿ ನ್ಯಾಯಾಲಯದ ಮಧ್ಯಪ್ರವೇಶಿಸಿ ನಿರ್ದೇಶನಗಳನ್ನೂ ನೀಡು ವುದು ಸಲ್ಲದು ಎಂದು ಸಿ.ಪಿ.ಜೋಶಿ ಅರ್ಜಿಯಲ್ಲಿ ವಾದಿಸಿದ್ದಾರೆ. ಸ್ಪೀಕರ್ ಅವರು ಮನವಿ ಸಲ್ಲಿಸಿದ ಬೆನ್ನಿಗೇ ಸುಪ್ರೀಂ ಕೋರ್ಟ್‌ನಲ್ಲಿ ತಾವೊಂದು ಕೇವಿ ಯಟ್ ಅರ್ಜಿ ಸಲ್ಲಿಸಿರುವ ಮಾಜಿ ಡಿಸಿಎಂ ಸಚಿನ್ ಪೈಲಟ್, ಬೆಂಬಲಿಗರ ಶಾಸಕರು “ನಮ್ಮ ಅಹವಾಲು ಕೇಳದೆಯೇ ಸ್ಪೀಕರ್ ಮನವಿ ಬಗ್ಗೆ ತೀರ್ಪು ನೀಡಬಾರದು’ ಎಂದು ಅರಿಕೆ ಮಾಡಿದ್ದಾರೆ.
ಇ.ಡಿ. ದಾಳಿ: ಮತ್ತೂಂದೆಡೆ ಕೀಟನಾಶಕ ಹರಣದಲ್ಲಿನ ಅವ್ಯವಹಾರ ಆರೋಪಕ್ಕೆ ಸಂಬಂಧಿಸಿದಂತೆ ರಾಜಸ್ಥಾನ ಸಿಎಂ ಅಶೋಕ್ ಗೆಹಲೋಟ್ ಸಹೋದರ ಅಗ್ರಸೇನ ಗೆಹಲೋಟ್ ನಿವಾಸ, ಕಚೇರಿಗಳ ಮೇಲೆ ಜಾರಿ ನಿರ್ದೇಶನಾಲಯ (ಇ.ಡಿ.) ದಾಳಿ ಮಾಡಿದೆ. ಅಗ್ರಸೇನ್ ವಿರುದ್ಧ 7 ಕೋಟಿ ರೂ.ಗಳಷ್ಟು ಹಣ ವರ್ಗಾವಣೆ ಮಾಡಿದ ಆರೋಪವಿದೆ.
ದಂಪತಿ ಬಂಧನ: ರಾಜಸ್ಥಾನ ರಾಜಕೀಯ ದಲ್ಲಿ ತಲ್ಲಣ ಸೃಷ್ಟಿಸಿರುವ ಟೆಲಿಫೋನ್ ಕದ್ದಾಲಿಕೆ ಪ್ರಕರಣದ ತನಿಖೆ ನಡೆಸುತ್ತಿರುವ ರಾಜಸ್ಥಾನ ಪೊಲೀಸರು, ಸಂಜಯ್ ಜೈನ್ ಬರಾಡಿಯಾ ಹಾಗೂ ಅವರ ಪತ್ನಿ ವಿನೀತಾ ಎಂಬವರನ್ನು ಬಂಧಿಸಿದ್ದಾರೆ. ಇದೇ ವೇಳೆ ಫೋನ್ ಟ್ಯಾಪಿಂಗ್ ಬಗ್ಗೆ ಯಾವುದೇ ಆದೇಶ ನೀಡಿಲ್ಲವೆಂದು ರಾಜಸ್ಥಾನ ಸರಕಾರ ಕೇಂದ್ರ ಗೃಹ ಸಚಿವಾಲಯಕ್ಕೆ ತಿಳಿಸಿದೆ.
ಹೈಕೋರ್ಟ್‌ನ ಮಧ್ಯಾಂತರ ಆದೇಶದಿಂದ ಸ್ಪೀಕರ್‌ಗೆ ಇರುವ ಹಕ್ಕುಗಳನ್ನು ಮೊಟಕುಗೊಳಿಸಿದಂತಾಗಿದೆ. ಹೀಗಾಗಿ ರಾಜ್ಯದಲ್ಲಿ ಸಾಂವಿಧಾನಿಕ ಬಿಕ್ಕಟ್ಟು ಸೃಷ್ಟಿಯಾಗಿದೆ. ಶಾಸಕರನ್ನು ಅನರ್ಹಗೊಳಿಸಿದರೆ ಮಾತ್ರ ಕೋರ್ಟ್ ಮಧ್ಯ ಪ್ರವೇಶಿಸಬೇಕು.
ಸಿ.ಪಿ.ಜೋಶಿ, ರಾಜಸ್ಥಾನ ಸ್ಪೀಕರ್