ರಾಜಸ್ಥಾನ: ಜೈಪುರದಲ್ಲಿ ರಜಪೂತ ಕರ್ಣಿ ಸೇನೆಯ ಮುಖ್ಯಸ್ಥ ಸುಖದೇವ್ ಸಿಂಗ್ ಗೊಗಮೆಡಿ ಅವರ ಮೇಲೆ ಗುಂಡಿನ ದಾಳಿ ನಡೆಸಿ ಹತ್ಯಗೈದ ಘಟನೆಗೆ ಸಂಬಂಧಿಸಿ ಕರ್ಣಿ ಸೇನೆ ಹಾಗೂ ಇತರ ಸಂಘಟನೆಗಳು ಇಂದು ರಾಜಸ್ಥಾನ ಬಂದ್ ಗೆ ಕರೆ ನೀಡಿದೆ.
ಮಂಗಳವಾರ ಮಧ್ಯಾಹ್ನ ಗೊಗಮೆಡಿ ಮನೆಯಲ್ಲಿದ್ದ ಸಂದರ್ಭ ಇಬ್ಬರು ಅಪರಿಚಿತರು ಮಾತನಾಡುವ ಉದ್ದೇಶದಲ್ಲಿ ಮನೆಯೊಳಗೆ ಬಂದು ಎಕಾಏಕಿ ಬಂದೂಕಿನಿಂದ ಗುಂಡಿನ ದಾಳಿ ನಡೆಸಿ ಸುಖದೇವ್ ಸಿಂಗ್ ಅವರನ್ನು ಹತ್ಯೆ ಮಾಡಿ ಸ್ಥಳದಿಂದ ಪರಾರಿಯಾಗಿದ್ದಾರೆ. ಈ ಘಟನೆಯ ಸುದ್ದಿ ತಿಳಿಯುತ್ತಲೇ ರಾಜಸ್ಥಾನದಲ್ಲಿರುವ ಕರ್ಣಿ ಸೇನೆ ಪ್ರತಿಭಟನೆ ನಡೆಸಿ ಹತ್ಯೆ ನಡೆಸಿದ ದುಷ್ಕರ್ಮಿಗಳನ್ನು ಕೂಡಲೇ ಬಂಧಿಸುವಂತೆ ಆಗ್ರಹಿಸಿದೆ.
ಜೈಪುರ ಪೊಲೀಸರು ಹತ್ಯೆ ನಡೆಸಿದ ಆರೋಪಿಗಳಿಗೆ ಬಲೆ ಬಿಸಿದ್ದು ಇಂದಿನ ತನಕ ಆರೋಪಿಗಳ ಪತ್ತೆ ಸಾಧ್ಯವಾಗಲಿಲ್ಲ. ಇಂದು ಕರ್ಣಿ ಸಂಘಟನೆ ಸೇರಿದಂತೆ ಹಲವು ಸಂಘಟನೆಗಳು ಗೊಗಮೆಡಿ ಹತ್ಯೆಯನ್ನು ಖಂಡಿಸಿ ರಾಜಸ್ಥಾನ ಬಂದ್ ಗೆ ಕರೆ ನೀಡಿದೆ.
ಗೋಲ್ಡಿ ಬ್ರಾರ್ ಮತ್ತು ಲಾರೆನ್ಸ್ ಬಿಷ್ಣೋಯ್ ಅವರ ಗ್ಯಾಂಗ್‌ಗಳೊಂದಿಗೆ ನಿಕಟ ಸಂಬಂಧ ಹೊಂದಿರುವ ದರೋಡೆಕೋರ ರೋಹಿತ್ ಗೋಡಾರಾ ಅವರು ಫೇಸ್‌ಬುಕ್ ಪೋಸ್ಟ್‌ನಲ್ಲಿ ಕೊಲೆಯ ಹೊಣೆಯನ್ನು ಹೊತ್ತುಕೊಂಡಿದ್ದಾರೆ.
ಪರಾರಿಯಾಗಿರುವ ಇಬ್ಬರು ದುಷ್ಕರ್ಮಿಗಳನ್ನು ಪತ್ತೆಹಚ್ಚಲು ಶೋಧ ನಡೆಸಲಾಗಿದೆ ಎಂದು ರಾಜಸ್ಥಾನ ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ಉಮೇಶ್ ಮಿಶ್ರಾ ಹೇಳಿದ್ದಾರೆ. ಇದರ ನಡುವೆ ಘಟನೆಯ ಕುರಿತು ರಾಜ್ಯಪಾಲ ಕಲ್ರಾಜ್ ಮಿಶ್ರಾ ಅವರು ಡಿಜಿಪಿಯಿಂದ ವರದಿ ಕೇಳಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: Threat: ಡಿ.13 ಕ್ಕೂ ಮೊದಲು ಸಂಸತ್ ಮೇಲೆ ದಾಳಿ ಮಾಡುವೆ..: ಮತ್ತೆ ಬೆದರಿಕೆ ಹಾಕಿದ ಪನ್ನುನ್