Advertisement

ನಗರದೆಲ್ಲೆಡೆ ರಾಜರ್ಷಿ ಜನ್ಮದಿನದ ಸಂಭ್ರಮ

01:46 PM Jun 05, 2018 | Team Udayavani |

ಮೈಸೂರು: ಸಾಂಸ್ಕೃತಿಕ ನಗರಿಯ ಅಭಿವೃದ್ಧಿಗಾಗಿ ಅವಿರತ ಶ್ರಮಿಸಿದ ಆಧುನಿಕ ಮೈಸೂರಿನ ನಿಮಾತೃ ನಾಲ್ವಡಿ ಕೃಷ್ಣರಾಜ ಒಡೆಯರ್‌ 134ನೇ ಜನ್ಮದಿನೋತ್ಸವದ ಅಂಗವಾಗಿ ನಗರದೆಲ್ಲೆಡೆ ವಿಶೇಷ ಕಾರ್ಯಕ್ರಮಗಳು ನಡೆಯಿತು. 

Advertisement

ಜಿಲ್ಲಾಡಳಿತ, ಅರಮನೆ ಆಡಳಿತ ಮಂಡಳಿ, ಅರಸು ಮಂಡಲಿ ಸೇರಿದಂತೆ ವಿವಿಧ ಸಂಘಟನೆಗಳ ವತಿಯಿಂದ ನಾಲ್ವಡಿ ಕೃಷ್ಣರಾಜ ಒಡೆಯರ್‌ ಭಾವಚಿತ್ರ ಮೆರವಣಿಗೆ, ಸಿಹಿ ವಿತರಣೆ, ಗೀತಗಾಯನ ಹೀಗೆ ಹಲವು ಕಾರ್ಯಕ್ರಮಗಳನ್ನು ನಡೆಯಿತು. ಜನಪ್ರತಿನಿಧಿಗಳು, ಅಧಿಕಾರಿಗಳ ಜತೆಗೆ ಹಲವು ಸಂಘಟನೆಗಳ ಮುಖ್ಯಸ್ಥರು ನಾಲ್ವಡಿ ಕೃಷ್ಣರಾಜ ಒಡೆಯರ್‌ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡುವ ಮೂಲಕ “ರಾಜರ್ಷಿ’ಗೆ ನಮನ ಸಲ್ಲಿಸಿದರು. 

ಭಾವಚಿತ್ರ ಮೆರವಣಿಗೆ: ನಗರದ ಅರಸು ಮಂಡಲಿ ವತಿಯಿಂದ ನಾಲ್ವಡಿ ಕೃಷ್ಣರಾಜ ಒಡೆಯರ್‌ ಜಯಂತಿ ಅಂಗವಾಗಿ ರಾಜರ್ಷಿ ಅವರ ಭಾವಚಿತ್ರ ಮೆರವಣಿಗೆ ನಡೆಸಲಾಯಿತು. ತ್ಯಾಗರಾಜ ರಸ್ತೆಯಲ್ಲಿರುವ ಅರಸು ಮಂಡಲಿ ಆವರಣದಿಂದ ಹೊರಟ ಮೆರವಣಿಯು ವಿವಿಧ ಕಲಾತಂಡಗಳ ಮೂಲಕ ನಗರದೆಲ್ಲೆಡೆ ಸಂಚರಿಸುವ ಮೂಲಕ ಕೆ.ಆರ್‌.ವೃತ್ತದಲ್ಲಿ ಅಂತ್ಯಕಂಡಿತು. ಇದಕ್ಕೂ ಮುನ್ನ ಮಾಜಿ ಶಾಸಕ ಎಂ.ಕೆ. ಸೋಮಶೇಖರ್‌ ಮೆರವಣಿಗೆಗೆ ಚಾಲನೆ ನೀಡಿದರು. 

ಕೆ.ಆರ್‌.ವೃತ್ತದಲ್ಲಿರುವ ನಾಲ್ವಡಿ ಕೃಷ್ಣರಾಜ ಒಡೆಯರ್‌ ಪ್ರತಿಮೆಗೆ ಗಣ್ಯರು ಹಾಗೂ ಅರಸು ಮಂಡಲಿ ಸದಸ್ಯರು ಪುಷ್ಪಾರ್ಚನೆಗೈದು ಗೌರವ ಸಲ್ಲಿಸಿದರು. ಇದೇ ವೇಳೆ ನಗರದ ಚಿಕ್ಕಗಡಿಯಾರ ವೃತ್ತದ ಆವರಣದಲ್ಲಿ ಪರಿವರ್ತನಾ ತಂಡದಿಂದ ನಾಲ್ವಡಿ ಒಡೆಯರ್‌ ಅವರ ಕುರಿತ ಗೀತೆಗಳನ್ನು ಪ್ರಸ್ತುತಪಡಿಸಲಾಯಿತು. ಈ ಸಂದರ್ಭದಲ್ಲಿ ಶಾಸಕ ಎಸ್‌.ಎ.ರಾಮದಾಸ್‌, ಅಪರ ಜಿಲ್ಲಾಧಿಕಾರಿ ಟಿ.ಯೋಗೇಶ್‌, ಮೇಯರ್‌ ಬಿ.ಭಾಗ್ಯವತಿ ಇನ್ನಿತರರು ಹಾಜರಿದ್ದರು.

ವಿವಿಧೆಡೆ ಜಯಂತ್ಯುತ್ಸವ: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ವತಿಯಿಂದ ನಾಲ್ವಡಿ ಕೃಷ್ಣರಾಜ ಒಡೆಯರ್‌ ಅವರ 134ನೇ ಜನೋತ್ಸವವನ್ನು ಆಚರಿಸಲಾಯಿತು. ಮುಡಾ ಕಚೇರಿ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಡಾ ಆಯುಕ್ತ ಪಿ.ಎಸ್‌.ಕಾಂತರಾಜು, ನಗರ ಯೋಜನಾ ಸದಸ್ಯರಾದ ಗಿರೀಶ್‌ ಹಾಗೂ ಸಿಬ್ಬಂದಿ ನಾಲ್ವಡಿ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡುವ ಮೂಲಕ ಗೌರವ ಸಲ್ಲಿಸಿದರು. 

Advertisement

ನಜರ್‌ಬಾದ್‌ನ ಶ್ರೀ ಜಯಚಾಮರಾಜ ಅರಸು ಎಜುಕೇಷನ್‌ ಟ್ರಸ್ಟ್‌ ಹಾಗೂ ವಾಣಿವಿಲಾಸ ಅರಸು ಶಿಕ್ಷಣ ಸಂಸ್ಥೆ ವತಿಯಿಂದಲೂ ನಾಲ್ವಡಿ ಒಡೆಯರ್‌ ಅವರ ಜನ್ಮದಿನೋತ್ಸವ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ವಾಣಿವಿಲಾಸ ಅರಸು ಬಾಲಿಕಾ ಪದವಿಪೂರ್ವ ಕಾಲೇಜು ಉಪನ್ಯಾಸಕಿ ಟಿ.ಕೆ.ಹೇಮಲತಾ, ಅರಸು ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಮಹೇಶ್‌ ಎನ್‌.ಅರಸ್‌ ಮತ್ತಿತರರಿದ್ದರು. 

ಸಸಿನೆಟ್ಟು ಆಚರಣೆ: ನಗರದ ಕೆಎಂಪಿಕೆ ಚಾರಿಟೆಬಲ್‌ ಟ್ರಸ್ಟ್‌ನಿಂದ ಅಗ್ರಹಾರದ ಬಿಬಿ ಲಾಯದಲ್ಲಿರುವ ಕೃಷ್ಣರಾಜ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್‌ ಜನ್ಮದಿನ ಹಾಗೂ ವಿಶ್ವ ಪರಿಸರ ದಿನವನ್ನು ಆಚರಿಸಲಾಯಿತು. ಇದೇ ಸಂದರ್ಭದಲ್ಲಿ ವಿವಿಧ ಜಾತಿಯ ಸಸಿಗಳನ್ನು ನೆಡುವ ಮೂಲಕ ಅರ್ಥಪೂರ್ಣ ಆಚರಣೆ ಮಾಡಲಾಯಿತು.

ಈ ವೇಳೆ ಮಾತನಾಡಿದ ಅತಿಥಿಗಳು, ನಾಲ್ವಡಿ ಕೃಷ್ಣರಾಜ ಒಡೆಯರ್‌ ಅವರ ಜಯಂತಿಯನ್ನು ಸರ್ಕಾರದ ವತಿಯಿಂದ ಆಚರಣೆ ಮಾಡುವಂತೆ ಒತ್ತಾಯಿಸಲಾಯಿತು. ಕಾರ್ಯಕ್ರಮದಲ್ಲಿ ನಗರ ಪಾಲಿಕೆ ಮಾಜಿ ಸದಸ್ಯ ಎಂ.ಡಿ.ಪಾರ್ಥಸಾರಥಿ, ಟ್ರಸ್ಟ್‌ನ ಅಧ್ಯಕ್ಷ ವಿಕ್ರಂ ಅಯ್ಯಂಗಾರ್‌, ಪದಾಧಿಕಾರಿಗಳಾದ ರಂಗನಾಥ್‌, ಜಯಸಿಂಹ, ಸಂದೇಶ್‌, ಶ್ರೀಕಾಂತ್‌ ಕಷ್ಯಪ್‌ ಇನ್ನಿತರರು ಹಾಜರಿದ್ದರು. 

ನಾಡಿಗೆ ರಾಜರ್ಷಿ ಕೊಡುಗೆ ಅಪಾರ: ನಾಲ್ವಡಿ ಕೃಷ್ಣರಾಜ ಒಡೆಯರ್‌ ನಾಡಿಗೆ ಅಪಾರವಾದ ಕೊಡುಗೆಯನ್ನು ನೀಡಿದ್ದಾರೆ ಎಂದು ರಾಜವಂಶಸ್ಥ ಯದುವೀರ್‌ ಕೃಷ್ಣದತ್ತ ಒಡೆಯರ್‌ ಹೇಳಿದರು. ಅರಮನೆ ಆವರಣದಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್‌ ಜಯಂತಿ ಪ್ರಯುಕ್ತ ಅರಮನೆ ಆಡಳಿತ ಮಂಡಳಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್‌ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು.

ರಾಜರ್ಷಿಯವರ ಆಡಳಿತ ವೈಖರಿ, ಆದರ್ಶಗಳು, ಸಾಮಾಜಿಕ ಕಾಳಜಿ, ಅಭಿವೃದ್ಧಿಯ ದೂರದೃಷ್ಟಿ ಇಂದಿನ ಯುವಕರಿಗೆ ಸ್ಫೂರ್ತಿಯಾಗಿದೆ. ಅವರು ನೀಡಿದ ಕೊಡುಗೆಗಳು ಇಂದಿಗೂ ಜೀವಂತವಾಗಿವೆ ಎಂದು ಹೇಳಿದರು. ಪ್ರಸ್ತುತ ಜಿಲ್ಲಾಡಳಿತ, ಪಾಲಿಕೆ ವತಿಯಿಂದ ನಾಲ್ವಡಿ ಕೃಷ್ಣರಾಜ ಒಡೆಯರ್‌ ಜಯಂತಿ ಆಚರಿಸುತ್ತಿದ್ದು, ಮುಂದೆ ದೊಡ್ಡಮಟ್ಟದಲ್ಲಿ ಆಚರಣೆಯಾಗಬೇಕಿದೆ ಎಂಬ ಆಶಯ ವ್ಯಕ್ತಪಡಿಸಿದರು. ಈ ವೇಳೆ ಅರಮನೆ ಆಡಳಿತ ಮಂಡಳಿ ಪನಿರ್ದೇಶಕ ಟಿ.ಎಸ್‌.ಸುಬ್ರಹ್ಮಣ್ಯ ಸೇರಿದಂತೆ ಇನ್ನಿತರರು ಹಾಜರಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next