ಉಳ್ಳಾಲ: ಕೈರಂಗಳದ ಪುಣ್ಯಕೋಟಿ ನಗರದ ಅಮೃತಧಾರಾ ಗೋಶಾಲೆಯಲ್ಲಿ ಗೋ ದರೋಡೆ ಮಾಡಿದ ಗೋ ಹಂತಕರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ, ಗೋಶಾಲಾ ಸಮಿತಿ ಅಧ್ಯಕ್ಷ ಟಿ.ಜಿ. ರಾಜಾರಾಮ ಭಟ್ ಅವರ ನೇತೃತ್ವದಲ್ಲಿ ನಡೆಯುತ್ತಿರುವ ಆಮರಣಾಂತ ಉಪವಾಸ ಸತ್ಯಾಗ್ರಹ 7ನೇ ದಿನಕ್ಕೆ ಕಾಲಿಟ್ಟಿದ್ದು, ಭಟ್ ಅವರ ಆರೋಗ್ಯ ಸ್ಥಿತಿ ಹದಗೆಟ್ಟಿದೆ. ಉಪವಾಸ ಸತ್ಯಾಗ್ರಹ ಕೈಬಿಡುವಂತೆ ಒತ್ತಾಯಿಸಿದರೂ ನೈಜ ಆರೋಪಿಗಳ ಬಂಧನವಾಗದೆ ಉಪವಾಸ ಸತ್ಯಾಗ್ರಹ ಹಿಂದೆಗೆದುಕೊಳ್ಳುವ ಪ್ರಶ್ನೆ ಇಲ್ಲ ಎಂದು ಭಟ್ ಪುನರುಚ್ಚರಿಸಿದ್ದಾರೆ.
ಆರೋಪಿಗಳ ಗುರುತು ಪತ್ತೆಯಾಗಿದೆ, ಶೀಘ್ರ ಬಂಧಿಸಲಾಗುವುದು ಎಂದು ಪೊಲೀಸರು ತಿಳಿಸಿದರೂ ಆರೋಪಿಗಳನ್ನು ಬಂಧಿಸಿದ ಬಳಿಕ ಅವರ ಗುರುತನ್ನು ಗೋ ಶಾಲೆಯ ಸಿಬಂದಿ ದೃಢಪಡಿಸುವ ತನಕ ಸತ್ಯಾಗ್ರಹ ಮುಂದು ವರಿಸಲಾಗುವುದು ಎಂದು ಭಟ್ ಸ್ಪಷ್ಟಪಡಿಸಿದರು.
ಕಳೆದ ಏಳು ದಿನಗಳಿಂದ ನಿರಂತರ ಉಪವಾಸ ನಡೆಸುತ್ತಿರುವ ಭಟ್ ಅವರ ಆರೋಗ್ಯ ತಪಾಸಣೆ ನಡೆಸಿದ ವೈದ್ಯರು ಆರೋಗ್ಯ ಹದಗೆಟ್ಟಿರುವುದನ್ನು ಖಚಿತ ಪಡಿಸಿದ್ದಾರೆ. ಶನಿವಾರ ಉಪವಾಸ ಸತ್ಯಾಗ್ರಹ ಸ್ಥಳಕ್ಕೆ ದಕ್ಷಿಣ ಕನ್ನಡ ಜಿಲ್ಲಾ ಸಹಕಾರಿ ಬ್ಯಾಂಕ್‌ನ ಅಧ್ಯಕ್ಷ ಡಾ| ಎಂ.ಎನ್. ರಾಜೇಂದ್ರ ಕುಮಾರ್, ನಿರ್ದೇಶಕ ಶಶಿಕುಮಾರ್ ರೈ, ಡಾ| ಕಲ್ಲಡ್ಕ ಪ್ರಭಾಕರ ಭಟ್, ಬಿಜೆಪಿ ಮುಖಂಡ ಅನ್ವರ್ ಮಾಣಿಪ್ಪಾಡಿ, ಉಚ್ಚಿಲತ್ತಾಯ ಪದ್ಮನಾಭ ತಂತ್ರಿ ಸೇರಿದಂತೆ ಹಲವು ಮಂದಿ ಗಣ್ಯರು ಭೇಟಿ ನೀಡಿದರು. ಎಸ್‌ಸಿಡಿಸಿಸಿ ಬ್ಯಾಂಕ್‌ನ ಅಧ್ಯಕ್ಷ ಡಾ| ಎಂ.ಎನ್. ರಾಜೇಂದ್ರ ಕುಮಾರ್ ಮಾತನಾಡಿ ಗೋ ಹಂತಕರ ಮೂಲವನ್ನು ಪತ್ತೆ ಹಚ್ಚುವ ನಿಟ್ಟಿನಲ್ಲಿ ಭಟ್ ಅವರು ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದು, ಆರೋಗ್ಯದ ಬಗ್ಗೆಯೂ ಅವರು ಗಮನ ನೀಡಬೇಕಾಗಿದೆ ಎಂದರು.
ಉಚ್ಚಿಲತ್ತಾಯ ಪದ್ಮನಾಭ ತಂತ್ರಿಯವರು ಮಾತನಾಡಿ, ನಮ್ಮ ಭೂಮಿ, ನಮ್ಮ ಸಂಸ್ಕೃತಿ ಉಳಿಸುವುದು ನಮ್ಮ ಜವಾಬ್ದಾರಿ. ನಾವು ಜಾಗೃತರಾಗದೆ ಇರುವುದರಿಂದ ಇಂತಹ ಘಟನೆಗಳು ಮರುಕಳಿಸುತ್ತಿವೆ. ಗೋ ಸಂಸ್ಕೃತಿಯನ್ನು ಕಾಪಾಡುವ ನಿಟ್ಟಿನಲ್ಲಿ ಹಿಂದೂ ಸಮಾಜ ಒಗ್ಗಟಾದರೆ ಮಾತ್ರ ಭವಿಷ್ಯದಲ್ಲಿ ಇಂತಹ ಪರಿಸ್ಥಿತಿಯನ್ನು ಎದುರಿಸಲು ಸಾಧ್ಯ. ಈ ಹೋರಾಟಕ್ಕೆ ಸರಕಾರ, ಇಲಾಖೆ ಮಣಿಯದೆ ಹೋದಲ್ಲಿ ಮುಂದಿನ ದಿನಗಳಲ್ಲಿ ಎಲ್ಲರೂ ಸೇರಿ ಒಂದು ದೊಡ್ಡ ಮಟ್ಟದ ಹೋರಾಟವನ್ನು ಮಾಡಲು ಹಿಂಜರಿಯುವುದಿಲ್ಲ ಎಂದರು. ಮಾಗಣೆಗಳ ಮಹಾ ಮಂಡಳಿ ಇದಕ್ಕೆ ಸಂಪೂರ್ಣ ಬೆಂಬಲ ನೀಡುತ್ತದೆ ಎಂದರು.
ಟಿ.ಜಿ. ರಾಜಾರಾಮ ಭಟ್ ಅವರ ಜತೆಗೆ ಕೈ ಜೋಡಿಸಿದ್ದ ಮೀಯಪದವು ನಿವಾಸಿ ಪ್ರಕಾಶ್ ಭಟ್ ಅವರು ಶನಿವಾರ ಮಧ್ಯಾಹ್ನ ವೇಳೆ ಉಪವಾಸ ಸ್ಥಳದಲ್ಲಿ ಕುಸಿದುಬಿದ್ದ ಘಟನೆ ನಡೆಯಿತು. ಅವರನ್ನು ಕೂಡಲೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಯಿತು.
ಉಪವಾಸಕ್ಕೆ ಕೈಜೋಡಿಸಿದ ಕಾಂಗ್ರೆಸ್ ಸದಸ್ಯ: ಶುಕ್ರವಾರ ಸಂಜೆಯಿಂದ ಬಾಳೆಪುಣಿ ಪಂಚಾಯತ್ ಕಾಂಗ್ರೆಸ್ ಬೆಂಬಲಿತ ಸದಸ್ಯ ಹನೀಫ್ ಅವರು ಭಟ್ ಅವರ ಉಪವಾಸದೊಂದಿಗೆ ಕೈ ಜೋಡಿಸಿದರು.
ಎ. 8ಕ್ಕೆ ಗೋ ಭಕ್ತರ ಸಮಾವೇಶ: ಪುಣ್ಯಕೋಟಿ ನಗರದಲ್ಲಿ ಎ. 8ರಂದು ಸಂಜೆ 5 ಗಂಟೆಗೆ ಗೋ ಭಕ್ತರ ಸಮಾವೇಶ ನಡೆಯಲಿದೆ ಎಂದು ಗೋಶಾಲಾ ಪ್ರಕಟನೆ ತಿಳಿಸಿದೆ.