ಬೆಂಗಳೂರು: ಉಡುಗೊರೆ ರಾಜಕಾರಣದ ವಿಚಾರವಾಗಿ ಪ್ರತಿ ಬಾರಿಯೂ ಸದ್ದು ಮಾಡುವ ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರ ಈ ಬಾರಿ ಕೂಡ ಗಿಫ್ಟ್ ಬಾಕ್ಸ್ ವಿಚಾರದಲ್ಲಿ ಮತ್ತೆ ಸದ್ದು ಮಾಡುತ್ತಿದೆ. ವೋಟರ್ ಐಡಿ ಹಗರಣ ವಿಚಾರದಲ್ಲಿ ರಾಜ್ಯ ರಾಜಕೀಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದ್ದ ಈ ಕ್ಷೇತ್ರ ಇದೀಗ ಎದುರಾಳಿಗಳ ವಾಕ್ಸಮರದ ಕಣವಾಗಿ ರೂಪಾಂತರಗೊಂಡಿದೆ.
ಈಗಾಗಲೇ ಕಾಂಗ್ರೆಸ್ ಕಳೆದ ಬಾರಿ ಕಣಕ್ಕಿಳಿಸಿದ್ದ ಕುಸುಮಾ ಹನುಮಂತರಾಯಪ್ಪ (ಡಿ.ಕೆ.ರವಿ ಪತ್ನಿ)ಗೆ ಟಿಕೆಟ್ ನೀಡಿದೆ. ಕೈ ಬಿಡುಗಡೆ ಮಾಡಿರುವ ಮೊದಲ ಪಟ್ಟಿಯಲ್ಲಿ ಕುಸುಮಾ ಟಿಕೆಟ್ ಗಿಟ್ಟಿಸಿಕೊಂಡಿದ್ದಾರೆ. ಆದರೆ ಬಿಜೆಪಿ ಮತ್ತು ಜೆಡಿಎಸ್ ಅಭ್ಯರ್ಥಿಗಳ ಪಟ್ಟಿ ಇನ್ನೂ, ಅಂತಿಮವಾಗಿಲ್ಲ. ಆ ಹಿನ್ನೆಲೆಯಲ್ಲಿ ಕ್ಷೇತ್ರದಲ್ಲಿ ಕುಸುಮಾ ಎದುರು ಯಾರು ಕಣಕ್ಕಿಳಿಯುತ್ತಾರೆ ಎಂಬುವುದು ಕೌತುಕ ಮೂಡಿಸಿದೆ.
2008ರ ಕ್ಷೇತ್ರ ಪುನರ್ ವಿಂಗಡಣೆ ನಂತರ ನಡೆದ ಮೊದಲ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಿತ್ತು. 2013ರ ನಂತರ ಕಾಂಗ್ರೆಸ್ ತನ್ನ ತೆಕ್ಕೆಗೆ ಕ್ಷೇತ್ರವನ್ನು ಪಡೆಯಿತು. ಬದಲಾದ ರಾಜಕೀಯ ವಿದ್ಯಮಾನದಲ್ಲಿ ಸಚಿವ ಮುನಿರತ್ನ “ಆಪರೇಷನ್ ಕಮಲ’ಕ್ಕೆ ಒಳಗಾಗಿ ಬಿಜೆಪಿ ಸೇರಿದರು. ಹೀಗಾಗಿ, ಮತ್ತೆ ಈ ಕ್ಷೇತ್ರ ಕಾಂಗ್ರೆಸ್ ತೆಕ್ಕೆಯಿಂದ ಬಿಜೆಪಿ ಮಡಿಲಿಗೆ ಬಿತ್ತು.
ಅಖಾಡಕ್ಕೆ ಸಂಸದ ಡಿ.ಕೆ.ಸುರೇಶ್ ಎಂಟ್ರಿ: ರಾಜರಾಜೇಶ್ವರಿ ನಗರ ಕ್ಷೇತ್ರದ ಚುನಾವಣೆ ಅಖಾಡಕ್ಕೆ ಸಂಸದ ಡಿ.ಕೆ.ಸುರೇಶ್ ಎಂಟ್ರಿ ಕೊಟ್ಟಿದ್ದಾರೆ. ಈ ಕ್ಷೇತ್ರ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರಕ್ಕೆ ಸೇರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ತೆಕ್ಕೆಗೆ ಮತ್ತೆ ಈ ಕ್ಷೇತ್ರವನ್ನು ತೆಗೆದುಕೊಳ್ಳಬೇಕು ಎಂಬ ನಿಟ್ಟಿನಲ್ಲಿ ತಮ್ಮದೇ ಆದ ಯುವ ಪಡೆಯನ್ನು ಕಟ್ಟಿಕೊಂಡು ಕ್ಷೇತ್ರದ ತುಂಬೆಲ್ಲಾ ಓಡಾಟ ನಡೆಸುತ್ತಿದ್ದಾರೆ. ಜತೆಗೆ ಕುಸುಮಾ ಕೂಡ ಮಹಿಳಾ ಸಂಘಟನೆ ಸೇರಿದಂತೆ ಕೈ ಕಾರ್ಯಕರ್ತರ ಜತೆಗೂಡಿ ಕ್ಷೇತ್ರವಿಡೀ ಪ್ರಚಾರ ನಡೆಸಿದ್ದಾರೆ. ಪಾಲಿಕೆ ಮಾಜಿ ಕಾರ್ಪೋರೆಟರ್‌ಗಳು ಸೇರಿದಂತೆ ಸ್ಥಳೀಯ ಮುಖಂಡರು ಸಾಥ್ ನೀಡಿದ್ದಾರೆ. ಜತೆಗೆ ಈ ಕ್ಷೇತ್ರದಲ್ಲಿ ಒಕ್ಕಲಿಗರು ಅಧಿಕ ಸಂಖ್ಯೆಯಲ್ಲಿದ್ದು ಒಕ್ಕಲಿಗ ದಾಳ ಕೂಡ ಎಸೆಯಲಾಗಿದೆ.
ತುಳುಸಿ ಮುನಿರಾಜು ಗೌಡ ಟಿಕೆಟ್ ಆಕಾಂಕ್ಷಿ: ಉರಿಗೌಡ, ನಂಜೇಗೌಡ ಚಿತ್ರ ನಿರ್ಮಾಣ, ಕೆರೆ ಒತ್ತುವರಿ ಸೇರಿದಂತೆ ಇನ್ನಿತರ ವಿಚಾರಗಳು ಅಖಾಡದಲ್ಲಿ ಸದ್ದು ಮಾಡುತ್ತಿವೆ. ರಾಜಕೀಯ ಮುಖಂಡರ ದ್ವೇಷ ಪೂರಿತ ಭಾಷಣಗಳು ಕೇಳಿ ಬಂದಿವೆ. ಹಾಲಿ ಶಾಸಕ ಹಾಗೂ ಸಚಿವ ಮುನಿರತ್ನ ಮತ್ತೂಮ್ಮೆ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಅವರ ಜತೆಗೆ ವಿಧಾನ ಪರಿಷತ್ ಸದಸ್ಯ ತುಳಸಿ ಮುನಿರಾಜು ಗೌಡ ಬಿಜೆಪಿ ಟಿಕೆಟ್ ಬೇಕು ಎನ್ನುತ್ತಿದ್ದಾರೆ. ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಬಿ.ಎಲ್.ಸಂತೋಷ್ ಅವರ ನಿಕಟವರ್ತಿ ಆಗಿರುವ ಹಿನ್ನೆಲೆಯಲ್ಲಿ ಯಾರಿಗೆ ಟಿಕೆಟ್ ಎಂಬುದು ಕುತೂಹಲ ಕೆರಳಿಸಿದೆ. ಒಕ್ಕಲಿಗರು ಅಧಿಕ ಸಂಖ್ಯೆಯಲ್ಲಿದ್ದರೂ ಜೆಡಿಎಸ್ ಈ ಕ್ಷೇತ್ರದಲ್ಲಿ ನೆಲೆ ಕಂಡುಕೊಳ್ಳಲು ಆಗುತ್ತಿಲ್ಲ. ಕಳೆದ ಉಪಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಕೃಷ್ಣಮೂರ್ತಿ ಕಣಕ್ಕಿಳಿದಿದ್ದರು. ಈ ಬಾರಿಯೂ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಜತೆಗೆ ಸ್ಥಳೀಯ ಮುಖಂಡ ಗಿರೀಶ್‌ಗೌಡ ಕೂಡ ಜನತಾದಳ ವರಿಷ್ಠರ ಜತೆಗೆ ನಿಕಟ ಸಂಪರ್ಕದಲ್ಲಿದ್ದಾರೆ.
ರಾಜರಾಜೇಶ್ವರಿನಗರ: ಕ್ಷೇತ್ರ ವ್ಯಾಪ್ತಿಗೆ ಸೇರುವ ವಾರ್ಡ್‌ಗಳು : ನೈಸ್ ರಸ್ತೆ, ಮಾಲ್‌ಗಳು, ನಮ್ಮ ಮೆಟ್ರೋ, ಬೆಳೆಯುತ್ತಿರುವ ರಿಯಲ್ ಎಸ್ಟೇಟ್ ಆರ್.ಆರ್.ನಗರದ ಪ್ರಮುಖ ಅಂಶಗಳು. ಕ್ಷೇತ್ರದಲ್ಲಿ ವಲಸಿಗರ ಸಂಖ್ಯೆ ಹೆಚ್ಚಿದೆ. ಬಿಬಿಎಂಪಿಯ ಲಕ್ಷ್ಮೀ ದೇವಿನಗರ, ಜಾಲಹಳ್ಳಿ, ಜೆ.ಪಿ. ಪಾರ್ಕ್, ಯಶವಂತಪುರ, ಹೆಚ್.ಎಂ.ಟಿ., ಲಗ್ಗೆರೆ, ಜ್ಞಾನ ಭಾರತಿ, ರಾಜರಾಜೇಶ್ವರಿ ನಗರ, ಕೊಟ್ಟಿಗೆಪಾಳ್ಯ ವಾರ್ಡ್‌ಗಳನ್ನು ರಾಜರಾ ಜೇಶ್ವರಿ ನಗರ ವಿಧಾನ ಸಭಾಕ್ಷೇತ್ರ ಒಳಗೊಂಡಿದೆ.
2020ರ ಉಪಚುನಾವಣೆಯಲ್ಲಿ ಏನಾಗಿತ್ತು?: 2020ರಲ್ಲಿ ಉಪ ಚುನಾವಣೆ ನಡೆದಿತ್ತು. ಶಾಸಕ ಮುನಿರತ್ನ 1,25,734 ಮತ ಪಡೆದಿದ್ದರು. ಕಾಂಗ್ರೆಸ್ ಅಭ್ಯರ್ಥಿ ಎಚ್. ಕುಸುಮಾ 67,798 ಮತ್ತು ಜೆಡಿಎಸ್‌ನಿಂದ ಸ್ಪರ್ಧಿಸಿದ್ದ ವಿ.ಕೃಷ್ಣಮೂರ್ತಿ 10,251 ಮತ ಗಳಿಸಿದ್ದರು. 2,497 ಮಂದಿ ನೋಟಾ ಚಲಾಯಿಸಿದ್ದರು. ಮುನಿರತ್ನ ಶೇ.60.12 ರಷ್ಟು ಮತ ಪಡೆದಿದ್ದರು.
-ದೇವೇಶ ಸೂರಗುಪ್ಪ