ಘಟಪ್ರಭಾ: ಬೆಳಗಾವಿ ಜಿಲ್ಲೆ ಮೂಡಲಗಿ ತಾಲೂಕಿನ ಅರಭಾವಿ ಹೋಬಳಿಯ ರಾಜಾಪುರ ಗ್ರಾಮದ ಚೂನಮ್ಮಾದೇವಿ ದೇವಸ್ಥಾನ ಇತಿಹಾಸ ಪ್ರಸಿದ್ಧ ದೇವಸ್ಥಾನವಾಗಿದೆ. ಚೂನಮ್ಮಾದೇವಿ-ದ್ಯಾಮವ್ವದೇವಿ ಪೌರಾಣಿಕ ಹಿನ್ನೆಲೆ ಹೊಂದಿದ್ದು ಪುರಾಣ ಕಾಲದ ಪ್ರಮುಖ ದೇವತೆಯಾಗಿದ್ದಾಳೆ. ಪ್ರತಿ ಮೂರು ವರ್ಷಕ್ಕೊಮ್ಮೆ ನಡೆಯುವ ಜಗನ್ಮಾತೆಯರ ಈ ಜಾತ್ರಾ ಮಹೋತ್ಸವ ಮೇ 7ರಿಂದ 11ರ ವರೆಗೆ ವಿಜೃಂಭಣೆಯಿಂದ ನಡೆಯಲಿದೆ.
ಘಟಪ್ರಭಾ ಹಾಗೂ ಮಾರ್ಕಂಡೇಯ ನದಿಗಳ ಸಂಗಮ ಸ್ಥಾನ ರಾಜಾಪುರ ಗ್ರಾಮಕ್ಕೆ ಅತ್ಯಂತ ಸಮೀಪವಾಗಿವೆ.
ರಾಜಾಪುರ ಗ್ರಾಮ ಐತಿಹಾಸಿಕ ಮಹತ್ವ ಹೊಂದಿದ ಗ್ರಾಮವಾಗಿದೆ. ಬಾದಾಮಿ ಚಾಲುಕ್ಯರು ಹಾಗೂ ಕಲ್ಯಾಣಿ ಚಾಲುಕ್ಯರು ಈ ಗ್ರಾಮವನ್ನು ಆಳಿದ್ದಾರೆ. ನಂತರ ಕೆಲ ಕಾಲ ವಿಜಯಪುರ ಸುಲ್ತಾನರು, ಸವಣೂರ ನವಾಬರು, ಜಮಖಂಡಿ ಸಂಸ್ಥಾನ, ಕಿತ್ತೂರು ಸಂಸ್ಥಾನ ಹಾಗೂ ಮರಾಠಾ ಪೇಶ್ವೆಗಳ ಆಡಳಿತಕ್ಕೆ ಒಳಪಟ್ಟ ಗ್ರಾಮ ಇದಾಗಿದೆ.
ಹೀಗೆ ಹಲವಾರು ರಾಜ-ಮಹಾರಾಜರು ಆಳ್ವಿಕೆ ನಡೆಸಿದ ಕಾರಣಕ್ಕೆ ರಾಜರ ಪುರ ಎಂದು ಹೆಸರು ಬಂದಿತು. ಕಾಲಾ ನಂತರ ರಾಜರು ಆಳಿದ ಊರು ಯಾವುದೋ ಅದೇ ರಾಜಾಪುರ ಎಂದು ಬದಲಾಯಿತು. 1956ರಲ್ಲಿ ರಾಜ್ಯ ಪುನರ್ವಿಂಗಡಣೆಯಾದಾಗ ಮುಂಬೈ ಸರ್ಕಾರದಿಂದ ಬೇರ್ಪಟ್ಟು ಕರ್ನಾಟಕದೊಂದಿಗೆ ಸೇರಿಕೊಂಡಿತು ಎಂದು ಇತಿಹಾಸ ಹೇಳುತ್ತದೆ.
ರಾಜಾಪುರದಿಂದ ದಕ್ಷಿಣ ದಿಕ್ಕಿಗೆ 5 ಕಿ.ಮೀ ಅಂತರದಲ್ಲಿ ಇನ್ನೊಂದು ಚೂನಮ್ಮದೇವಿಯ ದೇವಸ್ಥಾನವೂ ಇದೆ. ತಮಿಳುನಾಡಿನ ಚೆನ್ನೈದಿಂದ ಮೂರ್ತಿ ತಂದು ಪ್ರತಿಷ್ಠಾಪನೆ ಮಾಡಲಾಗಿದೆ. ಈ ಸ್ಥಳದಲ್ಲಿ ಚೂನಮ್ಮದೇವಿ ದೇವಸ್ಥಾನ ಇರುವುದರಿಂದ ಆ ಊರಿಗೆ ಚೂನಿಮಟ್ಟಿ ಎಂದು ಹೆಸರು ಬಂದಿದೆ. ಆರಂಭದಲ್ಲಿ ಅತ್ಯಂತ ಸಣ್ಣ ದೇವಸ್ಥಾನ ಇದಾಗಿತ್ತು ಕಾಲ ಕಳೆದಂತೆ ಗ್ರಾಮಸ್ಥರ ಸಹಕಾರದಿಂದ ಇಂದು ದೇವಸ್ಥಾನ ಬೆಳೆದು ಜಿಲ್ಲೆಯ ಪ್ರಮುಖ ದೇವಸ್ಥಾನಗಳಲ್ಲಿ ಒಂದಾಗಿದೆ.
ಚೂನಮ್ಮಾದೇವಿ ಹಾಗೂ ದ್ಯಾಮವ್ವದೇವಿ ದೇವಸ್ಥಾನಗಳು ಚೌಕಾಕೃತಿಯಲ್ಲಿ ನಿರ್ಮಾಣವಾಗಿವೆ. ಆಧುನಿಕ ಶೈಲಿಯಲ್ಲಿ ಕಟ್ಟಲಾಗಿರುವ ದೇವಸ್ಥಾನದ ಹೆಬ್ಟಾಗಿಲು, ಪ್ರವೇಶ ದ್ವಾರ, ನವರಂಗ, ಅಂತರಂಗ, ಅಂತರಾಳ, ಗರ್ಭಗೃಹ ಹೊಂದಿದೆ. ಗರ್ಭಗುಡಿ ಒಂದು ಕಡೆ ಚೂನಮ್ಮಾದೇವಿ ಇನ್ನೊಂದು ಕಡೆ ದ್ಯಾಮವ್ವದೇವಿ ವಿಗ್ರಹಗಳಿವೆ. ಒಳಭಾಗದಲ್ಲಿ ಸುಂದರವಾದ ಕೆತ್ತನೆ ಇದೆ. ಗುಡಿಯ ದಕ್ಷಿಣ ಭಾಗದಲ್ಲಿ ಪಾಂಡುರಂಗ ಮಂದಿರವಿದ್ದು, ಆಗ್ನೇಯ ದಿಕ್ಕಿನಲ್ಲಿ ಅಮೋಘಸಿದ್ಧನ ದೇವಸ್ಥಾನ ನಿರ್ಮಾಣವಾಗಿವೆ. ಗುಡಿ ಮುಂಭಾಗದಲ್ಲಿ ದೀಪಸ್ತಂಭ ನಿರ್ಮಿಸಲಾಗಿದೆ. ಅಲ್ಲದೇ ಗ್ರಾಮದಲ್ಲಿ ಬೀರಸಿದ್ದೇಶ್ವರ ದೇವಸ್ಥಾನ, ಸದ್ಗುರು ಸಮರ್ಥ ಮಾಧವಾನಂದ ಆಶ್ರಮ, ಆಂಜನೇಯ ಸ್ವಾಮಿ, ವೀರಭದ್ರೇಶ್ವರ ಸ್ವಾಮಿ, ದುರ್ಗಾದೇವಿ, ಯಲ್ಲಮ್ಮಾದೇವಿ ದೇವಸ್ಥಾನಗಳು ಗ್ರಾಮದ ಕೀರ್ತಿ ಹೆಚ್ಚಿಸಿವೆ.
ಪ್ರತಿ ಮೂರು ವರ್ಷಕ್ಕೊಮ್ಮೆ ಜಗನ್ಮಾತೆಯರ ಜಾತ್ರಾ ಮಹೋತ್ಸವ ನಡೆಸಲಾಗುವುದು. ಸಮಸ್ತ ನಾಗರಿಕರ ನೇತೃತ್ವದಲ್ಲಿ ವಾದ್ಯಗಳೊಂದಿಗೆ ಕೂಡಿ ಛತ್ರಿ, ನಿಶಾನಿ, ಕಾಳಿ, ಕರಡಿ, ಸಂಬಾಳ, ಬೆಂಡಬಾಜಿ ಸಕಲ ವೈಭವದೊಂದಿಗೆ ಹಾಗೂ ದೇವಿಯ ನಾಮಸ್ಮರಣೆಯೊಂದಿಗೆ ಗ್ರಾಮದೇವತೆ ರಥೋತ್ಸವ 5 ಕಿಮೀ ಅಂತರದಲ್ಲಿರುವ ಚೂನಿಮಟ್ಟಿ ದೇವಸ್ಥಾನದವರೆಗೆ ಹೋಗಿ ಅದೇ ದಿನ ಸಾಯಂಕಾಲ ಮರಳಿ ಊರಿಗೆ ಬರುತ್ತದೆ.
•ರಮೇಶ ಬ. ಜಿರಲಿ