“ನೋಡಿ ಸ್ವಾಮಿ, ನಿಮ್ಮ ಹುಡುಗರು ನನ್ನ ಹೊಲ ಹಾಳು ಮಾಡವ್ರೆ. ಇದನ್ನೇ ಏನು ನೀವು ಇಸ್ಕೂಲ್ನಾಗೆ ಹೇಳ್ಕೊಡೋದು?’ ಎಂದು ಅಣ್ಣಪ್ಪ ಅಬ್ಬರಿಸಿದರು.
ಬಾಲ್ಯದ ನೆನಪುಗಳಲ್ಲಿ ಮೀಯೋದೇ ಒಂದು ಖುಷಿಯ ಅನುಭವ. ಪದೇಪದೆ ನೆನಪಾಗುವ ನನ್ನ ಬದುಕಿನ ಘಟನೆ ಹೀಗಿದೆ. ನಮ್ಮ ಊರು ಚೌಡಗೊಂಡನಹಳ್ಳಿ ಅಂತ. ನಾಲ್ಕನೇ ತರಗತಿ ತನಕ, ಅಲ್ಲಿ ಶಾಲೆ ಇತ್ತು. ನಂತರ, ಎರಡು ಕಿಲೋಮೀಟರ್ ದೂರದ, ಉಪ್ಪರಿಗೇನಹಳ್ಳಿಯಲ್ಲಿದ್ದ ಹಿರಿಯ ಪ್ರಾಥಮಿಕ ಶಾಲೆಗೆ ಸೇರಿದ್ದಾಯಿತು. ಇದನ್ನೇ, ಉನ್ನತ ವ್ಯಾಸಂಗಕ್ಕೆ ಬೇರೆ ನಗರಕ್ಕೆ ಹೋದಂತೆ ಕೊಚ್ಚಿಕೊಳ್ಳುತ್ತಿದ್ದೆವು.
ಕಾರಣ, ನಾಲ್ಕನೇ ತರಗತಿ ಪಾಸಾಗುವವರೇ ಅಂದು ವಿರಳ. ನಮ್ಮ ತಂದೆ- ತಾಯಿ, ನಾಲ್ಕನೇ ಕ್ಲಾಸ್ ಪಾಸು. ಮಗ ಐದನೇ ಕ್ಲಾಸ್‌ಗೆ ಹೋದ ಎಂಬ ಅಭಿಮಾನ ಅವರಿಗೆ. ಉಪ್ಪರಿಗೇನಹಳ್ಳಿಗೆ ಹೋಗಲು ಯಾವುದೇ ಬಸ್ ಇರಲಿಲ್ಲ. ಪ್ರತಿದಿನ ನಡೆದೇ ಹೋಗುತ್ತಿದ್ದೆವು. ಹೇಳ್ಳೋರು, ಕೇಳ್ಳೋರು ಯಾರೂ ಇಲ್ಲದ ಕಾರಣ, ದಾರಿಯುದ್ದಕ್ಕೂ ನಮ್ಮ ಆಟಗಳಿಗೆ ಕೊನೆ ಇರಲಿಲ್ಲ. ದಾರಿಯಲ್ಲಿದ್ದ ಹೊಲ- ಗದ್ದೆಗೆ ನುಗ್ಗಿ, ದಿನವೂ ಜೋಳದ ತೆನೆ, ಸಜ್ಜೆಯ ತೆನೆ, ಹೀಗೆ… ಒಂದೊಂದು ದಿನ ಒಂದು ತರಹದ ಬೆಳೆ ಕಿತ್ತು, ತಿಂದು, ಆನಂದ ಪಡುತ್ತಿದ್ದೆವು. ಜೊತೆಗೆ, ನಮ್ಮನ್ನು ಯಾರೂ ನೋಡಿಲ್ಲ ಎಂದು ಜಂಭ ಕೊಚ್ಚಿಕೊಳ್ಳುತ್ತಿದ್ದೆವು.
ಇದೊಂಥರ ಆತಿಯಾದ ಆತ್ಮವಿಶ್ವಾಸಕ್ಕೆ ತಿರುಗಿ, ಒಂದಷ್ಟು ಸಜ್ಜೆಯನ್ನು ಬ್ಯಾಗಿಗೂ ಇಳಿಸಿಕೊಂಡು ಬಿಡುತ್ತಿದ್ದೆವು. ಹೀಗಿರುವಾಗ ಒಂದು ದಿನ, ಹೊಲದ ಮಾಲೀಕ ಅಣ್ಣಪ್ಪ, ನಾವು ಶಾಲೆಗೆ ಹೋಗುವ ಮೊದಲೇ ಮುಖ್ಯಶಿಕ್ಷಕರ ಮುಂದೆ ಹಾಜರಾಗಿದ್ದರು. ನಾವು, ಅವರಿದ್ದರೆ ನಮಗೇನು ಅನ್ನೋ ರೀತಿ ಹೋದೆವು. ಆದರೆ, ಆ ಹೊತ್ತಿಗೆ, ನಮ್ಮ ಹುಡುಗಾಟಿಕೆ, ಚೇಷ್ಟೆ, ಕುಚೇಷ್ಟೆಗಳ ಜೊತೆಗೆ, ಸಜ್ಜೆ- ಜೋಳದ ತೆನೆಯನ್ನು ಬ್ಯಾಗಿಗೆ ಇಳಿಸಿಕೊಂಡ ಘಟನೆಯನ್ನು, ಮಾಸ್ತರರ ಕಿವಿಗೆ ಹಾಕಿದ್ದರು ಅಣ್ಣಪ್ಪ. ಈ ದೂರು ಕೇಳಿ ಸಿಟ್ಟಾಗಿದ್ದ ನಮ್ಮರಾಜಪ್ಪ ಮಾಸ್ತರರು, ನಮ್ಮ ಕೈಚೀಲ ತಪಾಸಣೆ ಮಾಡಿಸಿದರು.
ಪ್ರತಿ ಬ್ಯಾಗ್‌ನಲ್ಲಿ ಎರಡು- ಮೂರು ಸಜ್ಜೆ ತೆನೆಗಳು ಸಿಕ್ಕವು. “ನೋಡಿ ಸ್ವಾಮಿ, ನಿಮ್ಮ ಹುಡುಗರು ನನ್ನ ಹೊಲ ಹಾಳು ಮಾಡವ್ರೆ. ಇದನ್ನೇ ಏನು ನೀವು ಇಸ್ಕೂಲ್ನಾಗೆ ಹೇಳ್ಕೊಡೋದು?’ ಎಂದು ಅಣ್ಣಪ್ಪ ಅಬ್ಬರಿಸಿದರು. ಅದನ್ನು ಕೇಳಿದ ರಾಜಪ್ಪ ಮಾಸ್ತರು, ಹಸಿ ಹುಣಸೇ ಬರಲಿನಿಂದ ನಮಗೆ ಚೆನ್ನಾಗಿ ಬಾರಿಸಿ- “ರೈತನು ಕಷ್ಟಪಟ್ಟು ಬೆಳೆದ ಬೆಳೆಯನ್ನ ಹಾಳು ಮಾಡಿದರೆ, ಇದೇ ಥರಾ ಕಜ್ಜಾಯ ಸಿಗುತ್ತೆ’ ಎಂದರು. ಅಂದಿನಿಂದ, ಸಜ್ಜೆ ಹೊಲ ಮತ್ತು ಹುಣಸೇ ಬರಲು ನೋಡಿದಾಕ್ಷಣ, ರಾಜಪ್ಪ ಮಾಸ್ತರ್ ಏಟು ನೆನಪಾಗಿ, ಮೈ ಸವರಿಕೊಳ್ಳುವಂತಾಗುತ್ತದೆ.
* ಸಿ.ಜಿ. ವೆಂಕಟೇಶ್ವರ