ಬೆಂಗಳೂರು: ಪರಭಾಷಾ ಚಿತ್ರಗಳ ನೀತಿ ವಿರೋಧಿಸಿ ನ.29ರಂದು ನಗರದಲ್ಲಿ ಪ್ರತಿಭಟನೆ ನಡೆಸಲು ಕನ್ನಡ ಒಕ್ಕೂಟ ತೀರ್ಮಾನಿಸಿದೆ ಎಂದು ಒಕ್ಕೂಟದ ಅಧ್ಯಕ್ಷ ವಾಟಾಳ್ ನಾಗರಾಜ್ ಹೇಳಿದ್ದಾರೆ.
ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಟ ರಜನಿಕಾಂತ್ ಅವರ 2.0 ಸಿನಿಮಾ ಊರ್ವಶಿ ಚಿತ್ರಮಂದಿರದಲ್ಲಿ ಬಿಡುಗಡೆಯಾಗಲಿದ್ದು, ಇದನ್ನು ವಿರೋಧಿಸಿ ಚಿತ್ರಮಂದಿರಕ್ಕೆ ಮುತ್ತಿಗೆ ಹಾಕಲಾಗುವುದು. ಯಾವುದೇ ಕಾರಣಕ್ಕೂ ಪರಭಾಷಾ ಸಿನಿಮಾ ಬಿಡುಗಡೆಗೆ ಅವಕಾಶ ನೀಡುವುದಿಲ್ಲ ಎಂದರು.
ಪರಭಾಷಾ ಚಿತ್ರಗಳ ಹಾವಳಿಯಿಂದ ಕನ್ನಡ ಚಿತ್ರಗಳಿಗೆ, ಚಿತ್ರಮಂದಿರಗಳ ಕೊರತೆಯುಂಟಾಗಿದೆ. ಆಂಧ್ರಪ್ರದೇಶ – ತೆಲಂಗಾಣ ಹಾಗೂ ತಮಿಳುನಾಡು ಸೇರಿದಂತೆ ಬೇರೆ ರಾಜ್ಯಗಳಲ್ಲಿ ಕನ್ನಡ ಚಲನಚಿತ್ರಗಳು ಪ್ರದರ್ಶನವಾಗುತ್ತಿಲ್ಲ. ಆದರೆ, ರಾಜ್ಯದ 150ರಿಂದ 200 ಚಿತ್ರಮಂದಿರಗಳಲ್ಲಿ 2.0 ತಮಿಳುಚಿತ್ರ ಬಿಡುಗಡೆಯಾಗುತ್ತಿರುವುದು ದುರಂತ ಎಂದು ಬೇಸರ ವ್ಯಕ್ತಪಡಿಸಿದರು.
ರಾಜಧಾನಿ ಬೆಂಗಳೂರಿನಲ್ಲೇ ಪರಭಾಷಾ ಹಾವಳಿ ಹೆಚ್ಚಾಗಿದ್ದು, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಸದಸ್ಯರುಗಳೇ ಪರಭಾಷಾ ಚಿತ್ರಗಳ ಹಂಚಿಕೆದಾರರು ಹಾಗೂ ಪ್ರದರ್ಶಕರಾಗಿದ್ದಾರೆ. ಹೀಗಾಗಿ, ವಾಣಿಜ್ಯ ಮಂಡಳಿ ಮೊದಲು ಕನ್ನಡ ಪ್ರೇಮವನ್ನು ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಬೇರೆ ರಾಜ್ಯಗಳಲ್ಲೂ ಕನ್ನಡ ಚಿತ್ರಗಳನ್ನು ಕಡ್ಡಾಯವಾಗಿ ಪ್ರದರ್ಶಿಸುವಂತಾಗಬೇಕು.ಹಾಗೆಯೇ ಹೊಸದಾಗಿ ತಯಾರಾದ ಯಾವ ಪರಭಾಷಾ ಚಿತ್ರಗಳು ಒಂದು ತಿಂಗಳು ಕರ್ನಾಟಕದಲ್ಲಿ ಪ್ರದರ್ಶನವಾಗಬಾರದು.ಈ ಸಂಬಂಧ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಸೂಕ್ತವಾದ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.