Advertisement

ಕಾಂಗ್ರೆಸ್‌ ವಿರುದ್ಧವೇ ಕೃಷ್ಣರ ಪಾಂಚಜನ್ಯ!

12:20 PM Feb 06, 2017 | Karthik A |

ಕಾಂಗ್ರೆಸ್‌ ಪಾಳಯ ತೊರೆದಿರುವ ಮಾಜಿ ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ ಬಿಜೆಪಿಗೆ ಬಂದಿದ್ದೇ ಆದರೆ, ರಾಜ್ಯದಲ್ಲಿ ಅವರ ಪಾತ್ರ ಏನು? ಎಷ್ಟು? ಎಂಬ ಪ್ರಶ್ನೆಯೂ ಇದೆ. ಕೃಷ್ಣ ಅವರು ಒಂದು ವೇಳೆ ಬಿಜೆಪಿಗೆ ಸೇರಿದ್ದೇ ಆದಲ್ಲಿ  ಈ ಹಿಂದೆ ತಾವು ಕಾಂಗ್ರೆಸ್‌ನಲ್ಲಿ ಅಧಿಕಾರಕ್ಕೆ ಬರಲು ಮೊಳಗಿಸಿದ ಪಾಂಚಜನ್ಯವನ್ನು ಈಗ ಅದೇ ಕಾಂಗ್ರೆಸ್‌ ವಿರುದ್ಧ ಮೊಳಗಿಸುವರೇ ಎಂಬ ಕುತೂಹಲವೂ ಇದೆ.  

Advertisement

ಮಾಜಿ ಮುಖ್ಯಮಂತ್ರಿ, ಕೇಂದ್ರದ ಮಾಜಿ ಸಚಿವ, ಮಾಜಿ ರಾಜ್ಯಪಾಲ, ಪ್ರಬುದ್ಧ, ಮೌಲ್ಯಾಧಾರಿತ, ಮುತ್ಸದ್ಧಿ ರಾಜಕಾರಣಿ. ಹೀಗೆಲ್ಲಾ ಉಪಮೆಗಳೊಂದಿಗೆ ಕಾಂಗ್ರೆಸ್‌ನಲ್ಲಿ 42 ವರ್ಷ ಅಧಿಕಾರ ಅನುಭವಿಸಿದ ಎಸ್‌.ಎಂ.ಕೃಷ್ಣ ಆ ಪಕ್ಷಕ್ಕೆ ಗುಡ್‌ಬೈ ಹೇಳಿದ್ದಾರೆ. ಅವರ ಚಿತ್ತ ಇದೀಗ ಬಿಜೆಪಿಯತ್ತ ನೆಟ್ಟಿದೆೆ. ಎಸ್‌.ಎಂ.ಕೃಷ್ಣ  ಕಾಂಗ್ರೆಸ್‌ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿರುವ ವಿಚಾರ ಕರ್ನಾಟಕಕ್ಕೆ ಸೀಮಿತವಾಗಿ ನೋಡಲು ಸಾಧ್ಯವಿಲ್ಲ. ಆದರೆ, ಇಲ್ಲಿರುವ ಹಾಗೂ ಈಗಿರುವ ಪ್ರಶ್ನೆ, ಕೃಷ್ಣಗೆ ಬಿಜೆಪಿ ಅನಿವಾರ್ಯವೇ? ಮತ್ತು ಬಿಜೆಪಿಗೆ ಕೃಷ್ಣ ಅನಿವಾರ್ಯವೇ? ಎಂಬುದು. ಏಕೆಂದರೆ ಎಸ್‌.ಎಂ.ಕೃಷ್ಣ ಬಿಜೆಪಿ ಸೇರಿದರೂ ರಾಜ್ಯದಲ್ಲಿ ಅವರು ನಾಯಕತ್ವ ವಹಿಸುವುದು ಅಸಾಧ್ಯದ ಮಾತು. ಇನ್ನು ಕೇಂದ್ರದಲ್ಲಿ ಅವರಿಗೆ ಯಾವ ಹುದ್ದೆ ಕೊಡುವುದು ಎಂಬ ಬಗ್ಗೆ ಖುದ್ದು ಬಿಜೆಪಿಯಲ್ಲೇ ಇನ್ನೂ ಸ್ಪಷ್ಟತೆ ಇದ್ದಂತಿಲ್ಲ.

ಇದರ ನಡುವೆಯೇ ರಾಜ್ಯದಲ್ಲಿ ಸಂಗೊಳ್ಳಿ ರಾಯಣ್ಣ ಬ್ರಿಗೇಡ್‌ ಹೆಸರಿನಲ್ಲಿ ಕಿತ್ತಾಡಿಕೊಂಡಿದ್ದ ಬಿ.ಎಸ್‌.ಯಡಿಯೂರಪ್ಪ ಮತ್ತು ಕೆ.ಎಸ್‌. ಈಶ್ವರಪ್ಪ ಇದೀಗ ತಾತ್ಕಾಲಿಕವಾಗಿಯಾದರೂ ವೈರತ್ವ ಮರೆತು ಒಂದಾಗಿದ್ದಾರೆ. ಜತೆಗೆ ಎಸ್‌.ಎಂ.ಕೃಷ್ಣ ಬಿಜೆಪಿಗೆ ಬಂದರೆ ಆನೆಬಲ ಬಂದಂತಾಗುತ್ತದೆ ಎಂದು ಮಾನಸಿಕವಾಗಿ ಕೃಷ್ಣ ಸ್ವಾಗತಿಸಲು ಸಜ್ಜಾಗಿದ್ದಾರೆ. ಆದರೆ, ಕೃಷ್ಣ ಬಿಜೆಪಿಗೆ ಬಂದಿದ್ದೇ ಆದರೆ, ರಾಜ್ಯದಲ್ಲಿ ಅವರ ಪಾತ್ರ ಏನು? ಎಷ್ಟು? ಎಂಬ ಪ್ರಶ್ನೆಯೂ ಇದೆ. ಕೃಷ್ಣ ಅವರು ಬಿಜೆಪಿಗೆ ಸೇರಿ ಈ ಹಿಂದೆ ತಾವು ಕಾಂಗ್ರೆಸ್‌ನಲ್ಲಿ ಅಧಿಕಾರಕ್ಕೆ ಬರಲು ಮೊಳಗಿಸಿದ ಪಾಂಚಜನ್ಯವನ್ನು ಈಗ ಅದೇ ಕಾಂಗ್ರೆಸ್‌ ವಿರುದ್ಧ ಮೊಳಗಿಸುವರೇ ಎಂಬ ಕುತೂಹಲವೂ ಇದೆ. 

ಮುಂದಿನ ವರ್ಷದ ಏಪ್ರಿಲ್‌ – ಮೇ ತಿಂಗಳಲ್ಲಿ ರಾಜ್ಯ ವಿಧಾನಸಭೆಗೆ ನಡೆಯಲಿರುವ ಚುನಾವಣೆಗೆ ರಾಜಕೀಯ ಪಕ್ಷಗಳು ಸಿದ್ಧತೆ ಆರಂಭಿಸುತ್ತಿರುವ ಸಂದರ್ಭ ಆಡಳಿತಾರೂಢ ಕಾಂಗ್ರೆಸ್‌ನಲ್ಲಿ ನಡೆಯುತ್ತಿರುವ ಈ ವಿದ್ಯಮಾನ ಪಕ್ಷದಲ್ಲಿ ತುಸು ಆತಂಕವನ್ನು ಸೃಷ್ಟಿಸಿದೆ. ಕಾಂಗ್ರೆಸ್‌ಗೆ ಪ್ರಸ್ತುತ ಎಸ್‌.ಎಂ.ಕೃಷ್ಣ ಅವರ ಬಗ್ಗೆ ಹೆಚ್ಚಿನ ಪ್ರೀತಿ ಇಲ್ಲದೇ ಇದ್ದರೂ ಅವರು ಪ್ರತಿನಿಧಿಸುವ ಒಕ್ಕಲಿಗ ಸಮುದಾಯ ಅತ್ಯಂತ ಪ್ರಮುಖವಾಗಿದೆ. ರಾಜ್ಯದಲ್ಲಿ ಮೂರನೇ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಒಕ್ಕಲಿಗ ಸಮುದಾಯದ ನಾಯಕರಲ್ಲಿ ಮಾಜಿ ಪ್ರಧಾನಿ ಜೆಡಿಎಸ್‌ನ ಎಚ್‌.ಡಿ.ದೇವೇಗೌಡರ ನಂತರದ ಸ್ಥಾನ ಎಸ್‌.ಎಂ.ಕೃಷ್ಣ ಅವರಿಗೆ ಇದೆ. ಈ ಕಾರಣಕ್ಕಾಗಿಯಾದರೂ ಅವರನ್ನು ಪಕ್ಷದಲ್ಲಿ ಉಳಿಸಿಕೊಳ್ಳಬೇಕು ಎಂಬುದು ಕಾಂಗ್ರೆಸ್‌ ನಾಯಕರ ಅಪೇಕ್ಷೆ. ಆದರೆ, ಕಾಂಗ್ರೆಸ್‌ನಲ್ಲಿ ಉಳಿಯಲು ಸಾಧ್ಯವಿಲ್ಲ ಎಂದು ಕೃಷ್ಣ ಖಡಾಖಂಡಿತವಾಗಿ ಹೇಳಿದ್ದರಿಂದ ಇದೀಗ, ‘ಎಲ್ಲಾ ಅಧಿಕಾರ ಅನುಭವಿಸಿದ ಬಳಿಕ ತಮ್ಮನ್ನು ನಿರ್ಲಕ್ಷಿಸಲಾಗುತ್ತಿದೆ ಎಂಬ ನೆಪವೊಡ್ಡಿ ಅವರು ಕಾಂಗ್ರೆಸ್‌ ತೊರೆಯುತ್ತಿದ್ದಾರೆ. ಅದರ ಹಿಂದೆ ಬೇರೆ ಉದ್ದೇಶವಿದೆ’ ಎಂದು ಬಿಂಬಿಸುವ ಪ್ರಯತ್ನವನ್ನು ಕಾಂಗ್ರೆಸ್‌ ನಾಯಕರು ಶುರುಹಚ್ಚಿಕೊಂಡಿದ್ದಾರೆ.

ಕಾಂಗ್ರೆಸ್‌ನಲ್ಲಿ 42 ವರ್ಷದ ಸುದೀರ್ಘ‌ ಅಧಿಕಾರ ಅನುಭವಿಸಿದ ಕೃಷ್ಣ ಅವರು 1962ರಲ್ಲಿ ರಾಜಕಾರಣಕ್ಕೆ ಕಾಲಿಟ್ಟಿದ್ದು ಪ್ರಜಾ ಸೋಷಿಯಲಿಸ್ಟ್‌ ಪಾರ್ಟಿ ಮೂಲಕ. ಮಂಡ್ಯ ಜಿಲ್ಲೆಯ ಮದ್ದೂರಿನಲ್ಲಿ ಆಗಿನ ಪ್ರಧಾನಿ ಜವಹಾರಲಾಲ್ ನೆಹರು ಅವರ ಪ್ರಚಾರದ ಹೊರತಾಗಿಯೂ ಕಾಂಗ್ರೆಸ್‌ ಅಭ್ಯರ್ಥಿಯನ್ನು ಸೋಲಿಸಿ ವಿಧಾನಸಭೆಗೆ ಆಯ್ಕೆಯಾದರು. ನಂತರ ಕಾಂಗ್ರೆಸ್‌ ಸೇರಿದ ಅವರು ಲೋಕಸಭೆ, ವಿಧಾನಸಭೆ, ವಿಧಾನ ಪರಿಷತ್ತಿಗೆ ಆಯ್ಕೆಯಾದರು. 1992ರಿಂದ 94ರವರೆಗೆ ರಾಜ್ಯದ ಉಪಮುಖ್ಯಮಂತ್ರಿಯಾಗಿ, 1999ರಿಂದ 2004ರವರೆಗೆ ಮುಖ್ಯಮಂತ್ರಿಯಾಗಿ ಅಧಿಕಾರ ಅನುಭವಿಸಿದ್ದರು. ಜತೆಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನವನ್ನೂ ಅಲಂಕರಿಸಿದ್ದರು. ಬಳಿಕ ರಾಷ್ಟ್ರ ರಾಜಕಾರಣಕ್ಕೆ ತೆರಳಿ 2004ರಿಂದ 2008ರವರೆಗೆ ಮಹಾರಾಷ್ಟ್ರ ರಾಜ್ಯಪಾಲರಾಗಿ, 2008ರಿಂದ 2012ರವರೆಗೆ ಪ್ರಧಾನಿ ಮನಮೋಹನ್‌ ಸಿಂಗ್‌ ಅವರ ಸಂಪುಟದಲ್ಲಿ ವಿದೇಶಾಂಗ ಸಚಿವರಾಗಿ ಕೆಲಸ ಮಾಡಿದರು. ಆದರೆ, ಆ ಅವಧಿಯಲ್ಲಿ ಆದ ಕೆಲವು ಯಡವಟ್ಟುಗಳು ಕೃಷ್ಣ ಅವರನ್ನು ಸಚಿವ ಸ್ಥಾನದಿಂದ ಕೆಳಗಿಳಿಯುವಂತೆ ಮಾಡಿತು. ಬಳಿಕ ಕಾಂಗ್ರೆಸ್‌ ಅವರನ್ನು ನಿರ್ಲಕ್ಷಿಸಲಾರಂಭಿಸಿತು. ರಾಜ್ಯಸಭೆಗೆ ಪ್ರವೇಶ ಬಯಸಿದ್ದರೂ ಅವಕಾಶ ನೀಡಲಿಲ್ಲ. ಕ್ರಮೇಣ ಅವರನ್ನು ಮೂಲೆಗುಂಪು ಮಾಡಲಾಯಿತು.

Advertisement

ಕಾಂಗ್ರೆಸ್‌ ತೊರೆದಿರುವ ಎಸ್‌.ಎಂ.ಕೃಷ್ಣ ಅವರ ಮುಂದಿನ ದಾರಿ ಏನು ಎಂಬ ಪ್ರಶ್ನೆ ತೀವ್ರವಾಗಿ ಕಾಡಲು ಈ ಅಂಶಗಳೇ ಪ್ರಮುಖ ಕಾರಣ. ನಾನು ರಾಜಕೀಯದಿಂದ ನಿವೃತ್ತಿಯಾಗುತ್ತಿಲ್ಲ, ರಾಜಕೀಯದಲ್ಲಿ ನಿವೃತ್ತಿ ಎಂಬುದೇ ಇಲ್ಲ ಎಂದು ಸ್ಪಷ್ಟವಾಗಿ ಹೇಳುವ ಮೂಲಕ ತಾವು ರಾಜಕೀಯ ಜೀವನದ ‘ಎರಡನೇ ಶಕೆ’ ಆರಂಭಿಸುವ ಮುನ್ಸೂಚನೆಯನ್ನು ಅವರು ನೀಡಿದ್ದಾರೆ. ಎಸ್‌.ಎಂ.ಕೃಷ್ಣ ಬಿಜೆಪಿಗೆ ಸೇರಿದರೂ ಅವರಿಗೆ ಸೂಕ್ತ ಸ್ಥಾನಮಾನ ಸಿಗುತ್ತದೆ ಎಂಬ ಖಾತರಿ ಇಲ್ಲ. ಏಕೆಂದರೆ, ಕೃಷ್ಣ ಅವರು ಒಕ್ಕಲಿಗ ಸಮುದಾಯದ ಪ್ರಭಾವಿ ನಾಯಕರಾಗಿದ್ದರೂ ವಯಸ್ಸಿನ ಕಾರಣದಿಂದ ತಮ್ಮ ಹಿಂದಿನ ಛಾರ್ಮ್ ಉಳಿಸಿಕೊಂಡಿಲ್ಲ. ಹೀಗಿರುವಾಗ ಎಸ್‌.ಎಂ.ಕೃಷ್ಣ ಅವರು ಒಕ್ಕಲಿಗ ಸಮುದಾಯದ ಪ್ರಬಲ ನಾಯಕರಾಗಿದ್ದರು, ಮುಖ್ಯಮಂತ್ರಿಯಾಗಿದ್ದಾಗ ಉತ್ತಮ ಸಾಧನೆ ಮೂಲಕ ವರ್ಚಸ್ವಿ ನಾಯಕರಾಗಿದ್ದರು ಎಂಬ ಅವರ ಕುರಿತಾದ ‘ಚರಿತ್ರೆ’ಯನ್ನು ಮುಂದಿಟ್ಟುಕೊಂಡು ರಾಜಕೀಯವಾಗಿ ಸ್ಥಾನಮಾನ ನೀಡುವ ಪರಿಸ್ಥಿತಿಯಲ್ಲಿ ಬಿಜೆಪಿ ಇಲ್ಲ. ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಬಿ.ಎಸ್‌.ಯಡಿಯೂರಪ್ಪ ಅವರೇ ಮುಖ್ಯಮಂತ್ರಿ ಎಂದು ಈಗಾಗಲೇ ಘೋಷಣೆಯಾಗಿದೆ. ಇನ್ನು ರಾಜ್ಯಾದ್ಯಂತ ಓಡಾಡಿ ಪಕ್ಷ ಸಂಘಟಿಸುವ ಕಸುವು ಅವರಲ್ಲಿ ಇಲ್ಲ. ಹೀಗಿರುವಾಗ ಕೃಷ್ಣ ಅವರಿಗೆ ಬಿಜೆಪಿಯಲ್ಲಿ ಯಾವ ಸ್ಥಾನಮಾನ ನೀಡುವುದು ಎಂಬ ಪ್ರಶ್ನೆ ಆ ಪಕ್ಷದ ನಾಯಕರಲ್ಲೇ ಇದೆ.

ಇನ್ನು ಕಳೆದ ವಿಧಾನಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೂ ಕೃಷ್ಣ ಅವರು ತಮ್ಮ ತವರು ಜಿಲ್ಲೆ ಮಂಡ್ಯ ಮತ್ತು ಪಕ್ಕದ ಮೈಸೂರು ಜಿಲ್ಲೆಗಳಲ್ಲಿ ಪ್ರಭಾವ ಬೀರಿ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಳ್ಳುವಲ್ಲಿ ವಿಫ‌ಲರಾಗಿದ್ದರು. ಅದರಲ್ಲೂ ಮಂಡ್ಯ ಜಿಲ್ಲೆಯ ಏಳು ಕ್ಷೇತ್ರಗಳಲ್ಲಿ ಎರಡು ಕಡೆ ಮಾತ್ರ ಕಾಂಗ್ರೆಸ್‌ ಗೆದ್ದಿತ್ತು. ಕೃಷ್ಣ ಅವರ ಸ್ವಕ್ಷೇತ್ರ ಮದ್ದೂರಿನಲ್ಲೂ ಪಕ್ಷದ ಅಭ್ಯರ್ಥಿ ಗೆಲ್ಲಿಸಿಕೊಳ್ಳಲು ಸಾಧ್ಯವಾಗಿಲ್ಲ. ಇದನ್ನೆಲ್ಲಾ ಗಮನಿಸಿದಾಗ ಎಸ್‌.ಎಂ.ಕೃಷ್ಣ ಅವರು ಪಕ್ಷಕ್ಕೆ ಬಂದರೂ ಆ ಭಾಗದಲ್ಲಿ ಗೆಲ್ಲಲು ಸಾಧ್ಯವಾಗುವುದಿಲ್ಲ. ಕಾಂಗ್ರೆಸ್‌ಗೆ ನಷ್ಟವಾಗಬಹುದಾದರೂ ಅದರ ಲಾಭ ಜೆಡಿಎಸ್‌ಗೆ ಹೋಗುತ್ತದೆ ಎಂಬುದು ಬಿಜೆಪಿಗೂ ಗೊತ್ತಿದೆ. ಆದರೂ ಅವರು ಬಿಜೆಪಿಗೆ ಬಂದರೆ ಒಕ್ಕಲಿಗರ ಮತಗಳ ಸಂಖ್ಯೆಯಲ್ಲಿ ಏರಿಕೆಯಾಗಬಹುದು ಎಂಬ ಒಂದೇ ಕಾರಣಕ್ಕೆ ಪಕ್ಷಕ್ಕೆ ಸೇರಿಸಿಕೊಳ್ಳಲು ಬಿಜೆಪಿ ಪ್ರಯತ್ನಿಸುತ್ತಿದೆ.

ಇನ್ನೊಂದೆಡೆ ರಾಷ್ಟ್ರ ಮಟ್ಟದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅಲೆಯಲ್ಲಿ ವಯಸ್ಸಿನ ಕಾರಣಕ್ಕೆ ಪ್ರಭಾವಿ ಮುಖಂಡರನ್ನೇ ಬಿಜೆಪಿ ‘ಸೈಡ್‌ಲೈನ್‌’ ಮಾಡಿದೆ. ಇದಕ್ಕೆ ಉದಾಹರಣೆಯಾಗಿ ಲಾಲ್‌ಕೃಷ್ಣ ಅಡ್ವಾಣಿ, ಮುರಳಿಮನೋಹರ್‌ ಜೋಷಿ ಮುಂತಾದ ರಾಷ್ಟ್ರೀಯ ನಾಯಕರೇ ಕಣ್ಣಮುಂದಿದ್ದು, ಜ್ಞಾನವೃದ್ಧರಾದರೂ ಅವರು ವಯೋವೃದ್ಧರಾಗಿದ್ದರೆ ಸೂಕ್ತ ಸ್ಥಾನಮಾನ ಸಿಗುವುದಿಲ್ಲ ಎಂಬುದು ಬಿಜೆಪಿಯಲ್ಲಿ ಸ್ಪಷ್ಟವಾಗಿದೆ. ಕೃಷ್ಣ ಅವರು 2012ರಲ್ಲಿ ವಿದೇಶಾಂಗ ಖಾತೆ ಸಚಿವ ಸ್ಥಾನವನ್ನು ಕಳೆದುಕೊಂಡಿದ್ದೂ ತಮ್ಮ ‘ವಯೋಸಹಜ ಯಡವಟ್ಟು’ಗಳಿಂದ ಎಂಬುದು ರಾಜಕೀಯ ವಲಯದಲ್ಲಿ ಗೊತ್ತಿರುವ ಸತ್ಯ. ಹೀಗಿರುವಾಗ ಎಸ್‌.ಎಂ.ಕೃಷ್ಣ ಅವರಿಗೆ ರಾಷ್ಟ್ರ ಮಟ್ಟದಲ್ಲಿ ಸ್ಥಾನಮಾನ ಸಿಗುವುದು ಕಷ್ಟಸಾಧ್ಯ ಮತ್ತು ಸ್ಥಾನಮಾನ ಸಿಗುತ್ತದೆ ಎಂಬ ವಿಶ್ವಾಸ ಸ್ವತಃ ಕೃಷ್ಣ ಅವರಿಗೂ ಇಲ್ಲ.

ಇದೆಲ್ಲದರ ನಡುವೆಯೂ ಪ್ರಸ್ತುತ ಪರಿಸ್ಥಿತಿಗಳನ್ನು ಗಮನಿಸಿದಾಗ ಕೃಷ್ಣ ಅವರು ಬಿಜೆಪಿಗೆ ಸೇರುವುದು ಖಚಿತ ಎನ್ನುವಂತಿದೆ. ಆ ಪಕ್ಷದ ರಾಜ್ಯಾಧ್ಯಕ್ಷ ಯಡಿಯೂರಪ್ಪ ಅವರೇ ಕೃಷ್ಣ ಬಿಜೆಪಿಗೆ ಬರುತ್ತಾರೆ ಎಂದು ಹೇಳಿದ್ದಾರೆ. ಆದರೆ, ಕೃಷ್ಣ ಅವರಿಂದ ಇನ್ನೂ ಬಿಜೆಪಿ ಸೇರ್ಪಡೆಗೆ ಗ್ರೀನ್‌ ಸಿಗ್ನಲ್‌ ಸಿಕ್ಕಿಲ್ಲ. ಬಿಜೆಪಿ ಸೇರುವ ವಿಚಾರದಲ್ಲಿ ರಾಷ್ಟ್ರೀಯ ನಾಯಕರನ್ನು ಶೀಘ್ರದಲ್ಲೇ ಭೇಟಿ ಮಾಡುವುದಾಗಿ ಹಬ್ಬಿರುವ ಸುದ್ದಿಗಳನ್ನೂ ಅವರು ಅಲ್ಲಗಳೆದಿದ್ದಾರೆ. ಇದೆಲ್ಲವನ್ನೂ ಗಮನಿಸಿದಾಗ ಕೃಷ್ಣ ಅವರ ಮುಂದಿನ ರಾಜಕೀಯ ನಡೆ ಏನು ಎಂಬ ಪ್ರಶ್ನೆ ಇನ್ನಷ್ಟು ಜಟಿಲವಾಗುತ್ತಿದೆ.

ಇದಕ್ಕೆ ಕಾರಣಗಳೂ ಇಲ್ಲದಿಲ್ಲ. ಕಾಂಗ್ರೆಸ್‌ನಲ್ಲಿ ಸುದೀರ್ಘ‌ ಅವಧಿಯಲ್ಲಿ ಎಲ್ಲಾ ಅಧಿಕಾರಗಳನ್ನೂ ಅನುಭವಿಸಿ ಇದೀಗ ಬಿಜೆಪಿ ಸೇರಿರುವುದರ ಹಿಂದೆ ಬೇರೆ ಉದ್ದೇಶವಿದೆ ಎಂಬ ಮಾತು ಕೇಳಿಬರುತ್ತಿದೆ. ತಮ್ಮ ಅಳಿಯ ಸಿದ್ಧಾರ್ಥ ಅವರನ್ನು ಅಕ್ರಮ ಆಸ್ತಿ ಆರೋಪದಿಂದ ಪಾರು ಮಾಡಲು ಬಿಜೆಪಿ ಸೇರುತ್ತಿದ್ದಾರೆ ಎಂಬ ಆರೋಪವನ್ನೂ ಮಾಡಲಾಗಿದೆ. ಇನ್ನು ಸಾಮಾಜಿಕ ತಾಲತಾಣಗಳಲ್ಲಿ ಕೃಷ್ಣ ಕಾಂಗ್ರೆಸ್‌ಗೆ ರಾಜೀನಾಮೆ ನೀಡಿದ ನಂತರ ಈ ವಯಸ್ಸಿನಲ್ಲಿಯೂ ಅಧಿಕಾರ ದಾಹ, ಪದವಿಯ ಮೋಹ, ರಾಜಕೀಯ ಹಪಾಹಪಿ ಬಗ್ಗೆ ಸಾಕಷ್ಟು ಟೀಕೆಗಳೂ ವ್ಯಕ್ತವಾಗಿರುವುದು ಕೃಷ್ಣ ಅವರು ಗಮನಿಸದಿರುವ ಸಂಗತಿಯೇನಲ್ಲ.

ಇಷ್ಟಾದರೂ ಸದ್ಯದ ಪರಿಸ್ಥಿತಿಯಲ್ಲಿ ರಾಜಕೀಯವಾಗಿ ಸಕ್ರಿಯರಾಗಿರಬೇಕು ಎಂದರೆ ಕೃಷ್ಣ ಅವರಿಗೆ ಉಳಿದಿರುವುದು ಬಿಜೆಪಿ ಮಾತ್ರ. ಯಾಕೆಂದರೆ, ಜೆಡಿಎಸ್‌ಗೆ ಹೋಗುವ ಸ್ಥಿತಿಯಲ್ಲಿ ಅವರಿಲ್ಲ. ಇನ್ನು ಹೊಸ ಪಕ್ಷ ಕಟ್ಟಿ ಬೆಳೆಸುವ ಸಾಮರ್ಥ್ಯ ಅವರಲ್ಲಿ ಉಳಿದಿಲ್ಲ. ಮೇಲಾಗಿ ದೇವರಾಜ ಅರಸು, ಎಸ್‌.ಬಂಗಾರಪ್ಪ ಅವರು ಕಾಂಗ್ರೆಸ್‌ನಿಂದ ಹೊರಬಂದು ಹೊಸ ಪಕ್ಷ ಕಟ್ಟಿದ ಬಳಿಕ ಏನು ಸಾಧನೆ ಮಾಡಿದರು ಎಂಬುದು ಅವರಿಗೆ ಗೊತ್ತಿಲ್ಲದ ವಿಚಾರವಲ್ಲ. ಹೀಗಾಗಿಯೇ ಇನ್ನಷ್ಟು ದಿನ ಕಾದು ನಂತರ ತೀರ್ಮಾನಕ್ಕೆ ಬರೋಣ ಎಂದು ಅವರು ನಿರ್ಧರಿಸಿದಂತಿದೆ. ಎಲ್ಲಕ್ಕೂ ಕಾಲವೇ ಉತ್ತರಿಸಲಿದೆ.

– ಪ್ರದೀಪ್‌ಕುಮಾರ್‌ ಎಂ.

Advertisement

Udayavani is now on Telegram. Click here to join our channel and stay updated with the latest news.

Next