ಕಾರವಾರ: ದೇಶದ ಸ್ವಾಭಿಮಾನ ರಕ್ಷಿಸುವಲ್ಲಿ ರಕ್ಷಣಾ ಪಡೆಗಳ ಪಾತ್ರ ದೊಡ್ಡದು ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ ಸಿಂಗ್ ಹೇಳಿದರು. ಕಾರವಾರದ ಸೀಬರ್ಡ್ ನೌಕಾನೆಲೆ ಭೇಟಿಗೆ ಆಗಮಿಸಿರುವ ಅವರು ನೌಕಾನೆಲೆ ಸಿಬ್ಬಂದಿ ಹಾಗೂ ಕುಟುಂಬದವರ ಜತೆ ಮಾತನಾಡಿ, ದೇಶದ ರಕ್ಷಣೆಯಲ್ಲಿ ಸೈನಿಕರ ಪಾತ್ರ ದೊಡ್ಡದಾಗಿದೆ. ದೇಶಕ್ಕಾಗಿ ತ್ಯಾಗ ಮಾಡುವ ಅವರನ್ನು ಸದಾ ಗೌರವಿಸಬೇಕು ಎಂದರು.
ಸೈನಿಕರಲ್ಲಿ ಕರ್ತವ್ಯಪ್ರಜ್ಞೆ ಹೆಚ್ಚಾಗಿರುತ್ತದೆ. ಭಾರತ ಪ್ರಬಲ ರಾಷ್ಟ್ರವಾಗಿ ಹೊರಹೊಮ್ಮಲು ನಮ್ಮ ಸೈನ್ಯದ ಕೊಡುಗೆ ಅಪಾರ. ಸೈನಿಕರು ತಮ್ಮ ಕುಟುಂಬವನ್ನು ಮರೆತು ಸದಾ ದೇಶಸೇವೆಯಲ್ಲಿ ತೊಡಗಿರುತ್ತಾರೆ. ಹಿಂದೊಮ್ಮೆ ನನಗೆ ಜಲಾಂತರ್ಗಾಮಿಯಲ್ಲಿ ಹೋಗುವ ಅವಕಾಶ ಒದಗಿ ಬಂದಿತ್ತು. ಅಲ್ಲಿ ಜೀವನ ಅತ್ಯಂತ ಕಠಿಣವಾಗಿದ್ದು, ನೀರನ್ನು ಮಿತವಾಗಿ ಅಳೆದು ಬಳಸಬೇಕು. ಇಂತಹ ಸ್ಥಿತಿಯಲ್ಲಿ ಸೈನಿಕರು ತಿಂಗಳುಗಟ್ಟಲೇ ಕುಟುಂಬದಿಂದ ದೂರವಿರುತ್ತಾರೆ. ಎಲ್ಲಿ ನೋಡಿದರಲ್ಲಿ ನೀರು. ಮಾತನಾಡಲು ಬೇರೇನೂ ಇಲ್ಲದೆ ಸಮುದ್ರದ ಅಲೆಯ ಶಬ್ದವನ್ನೇ ಕೇಳುತ್ತಿರುತ್ತಾರೆ. ಇದು ಕಷ್ಟಸಾಧ್ಯ ಎಂದು ಹೇಳಿದರು.
ನರೇಂದ್ರ ಮೋದಿ ಅವರು ಪ್ರಧಾನಿಯಾದ ನಂತರ ಭಾರತವನ್ನು ಇತರೆ ದೇಶಗಳು ನೋಡುವ ರೀತಿಯೇ ಬದಲಾಗಿದೆ. ಭಾರತ ಇಂದು ಜಗತ್ತಿನ ಪ್ರಭಾವಶಾಲಿ ರಾಷ್ಟ್ರಗಳಲ್ಲಿ ಒಂದಾಗಿದೆ. ಭಾರತಕ್ಕೆ ಜಗತ್ತಿನಲ್ಲಿ ಎಲ್ಲರಿಗಿಂತಲೂ ಹೆಚ್ಚು ಗೌರವ ಸಿಗುತ್ತಿದೆ ಎಂದೂ ಹೇಳಿದರು.
ಸೀಬರ್ಡ್ ನೌಕಾನೆಲೆಗೆ ಕದಂಬ ರಾಜಮನೆತನದ ಹೆಸರನ್ನಿಡಲಾಗಿದೆ. ಭಾರತದ ಇತಿಹಾಸದಲ್ಲಿ ಕದಂಬರದ್ದು ಅತ್ಯಂತ ಸುವರ್ಣಾಕ್ಷರಗಳಿಂದ ಬರೆದಿಡುವ ಕಾಲ. ಕದಂಬ ನೌಕಾನೆಲೆ ಕದಂಬರ ನಾಡಿನಲ್ಲಿ ಅಸ್ತಿತ್ವಕ್ಕೆ ಬಂದಿದ್ದು ಅತ್ಯಂತ ಸಂತಸದ ವಿಷಯ ಎಂದರು.
ರಾಜನಾಥ್ ಸಿಂಗ್ ಅವರನ್ನು ನೌಕಾಪಡೆ ಮುಖ್ಯಸ್ಥ ಅಡ್ಮಿರಲ್ ಆರ್ ಹರಿಕುಮಾರ್ ಮತ್ತು ವೈಸ್ ಅಡ್ಮಿರಲ್ ಅಜೇಂದ್ರ ಬಹದ್ದೂರ್ ಸಿಂಗ್, ಕಮಾಂಡಿಂಗ್ ಇನ್ ಚೀಫ್ ಅವರು ಸ್ವಾಗತಿಸಿದರು. ವೆಸ್ಟರ್ನ್ ನೇವಲ್ ಕಮಾಂಡ್ ಜತೆಗೆ ರಿಯರ್ ಅಡ್ಮಿರಲ್ ಅತುಲ್ ಆನಂದ್, ಫ್ಲಾಗ್ ಆಫೀಸರ್ ಕಮಾಂಡಿಂಗ್ ಕರ್ನಾಟಕ ನೇವಲ್ ಏರಿಯಾ (ಎಫ್‌ಒಕೆ) ಉಪಸ್ಥಿತರಿದ್ದರು. ಸಿಂಗ್ ಅವರು ಶುಕ್ರವಾರ ಭಾರತೀಯ ನೌಕಾ ಜಲಾಂತರ್ಗಾಮಿ ನೌಕೆಯಲ್ಲಿ ಪಯಣಿಸಲಿದ್ದಾರೆ.