Advertisement

ನಮನ: ಹಾಡುಗಳೊಂದಿಗೆ ನಮ್ಮ ಜತೆಗಿರುತ್ತಾರೆ ರಾಜನ್‌

12:34 AM Oct 13, 2020 | mahesh |

ಸಾರ್‌, ಸ್ವಲ್ಪವೂ ಟೆನ್ಷನ್‌ ಇಲ್ಲದೇ ತಮಾಷೆಯ ಮೂಡ್‌ನ‌ಲ್ಲಿ ಇದ್ದುಕೊಂಡು ರಾಗ ಸಂಯೋಜನೆ ಮಾಡಿದ ಹಾಡು ಯಾವುದಾದ್ರೂ ಇದೆಯಾ?- ಹೀಗೊಂದು ಪ್ರಶ್ನೆ ಯನ್ನೂ ರಾಜನ್‌ ಅವರಿಗೆ ಒಮ್ಮೆ ಕೇಳಿದ್ದುಂಟು. ಅವರು ಹೇಳಿದ್ದರು. “”ನಮ್ಮದು ಮೈಸೂರು. ಅಂಥಾ ಮೈಸೂರಿನ ಬಗ್ಗೆ ಒಂದು ಹಾಡಿಗೆ ಸಂಗೀತ ಸಂಯೋಜಿಸಬೇಕಾಗಿ ಬಂತು. ಅದು, ದ್ವಾರಕೀಶ್‌ ನಿರ್ಮಾಣದ – “ಪ್ರೀತಿ ಮಾಡು ತಮಾಷೆ ನೋಡು’ ಚಿತ್ರದಲ್ಲಿ…

Advertisement

ಎತ್ತರದ ಆಳ್ತನ, ತೀಕ್ಷ್ಣ ನೋಟ, ಸ್ವಲ್ಪ ಬಿಗಿದುಕೊಂಡಂತೆ ಕಾಣುತ್ತಿದ್ದ ಮುಖ, ಅಗತ್ಯ ಇದ್ದರಷ್ಟೇ ಮಾತು. ಅದೂ ಹೇಗೆ; ಪ್ರತಿಯೊಂದು ಶಬ್ದವನ್ನೂ ಅಳೆದು ತೂಗಿ ಆಡಿದ ಹಾಗೆ- ರವಿವಾರ ರಾತ್ರಿ ನಮ್ಮನ್ನು ಅಗಲಿದ ಹಿರಿಯ ಸಂಗೀತ ನಿರ್ದೇಶಕ ರಾಜನ್‌ ಅವರು ಇದ್ದುದು ಹೀಗೆ. ನೋಡಿದ ತತ್‌ಕ್ಷಣ ಶಿಸ್ತಿನ ಮನುಷ್ಯ ಎಂಬಂತೆ ಕಾಣುತ್ತಿ ದ್ದರಲ್ಲ; ಅದೇ ಕಾರಣಕ್ಕೆ ರಾಜನ್‌ ಅವರ ಜತೆ ಸಲುಗೆಯಿಂದ ಮಾತಾಡಲು ಹಲವರು ಹಿಂಜರಿಯುತ್ತಿದ್ದುದುಂಟು.

ನಗುವುದನ್ನೇ ಮರೆತಂತಿದ್ದ ಈ ಮನುಷ್ಯ, ರಾಗ ಸಂಯೋ ಜಿಸಿದ ಗೀತೆಗಳು ಮಾತ್ರ ಮುಪ್ಪಾನು ಮುದುಕ ರ‌ನ್ನೂ ಕುಣಿಯುವಂತೆ ಮಾಡುವಷ್ಟು ಇಂಪಾಗಿದ್ದವು. ಆ ಹಾಡುಗಳಾದರೂ ಯಾವುವು ಅಂತೀರಿ? “”ಆಕಾಶ ದೀಪವು ನೀನು ನಿನ್ನ ಕಂಡಾಗ ಸಂತೋಷ ವೇನು…’, “”ಆಕಾಶದಿಂದ ಧರೆಗಿಳಿದ ರಂಭೆ…’, “”ಮಾಮರವೆಲ್ಲೋ ಕೋಗಿಲೆ ಯೆಲ್ಲೋ’, “”ಆಸೆಯ ಭಾವ ಒಲವಿನ ಜೀವ…’, “”ಎಲ್ಲೆಲ್ಲಿ ನೋಡಲೀ”, “”ಎಲ್ಲೂ ಹೋಗಲ್ಲ ಮಾಮ ಎಲ್ಲೂ ಹೋಗಲ್ಲ”, “”ಹೇಳಿದ್ದು ಸುಳ್ಳಾಗಬಹುದು…” , “”ಅಲ್ಲಿ ಇಲ್ಲಿ ನೋಡುವೆ ಏಕೆ…”, “”ನೀರ ಬಿಟ್ಟು ನೆಲದ ಮೇಲೆ…”, “”ನಾವಾಡುವ ನುಡಿಯೇ ಕನ್ನಡನುಡಿ…” ಮತ್ತು ಇವೆಲ್ಲಕ್ಕೂ ಕಳಶವಿಟ್ಟಂತೆ- “”ಆಕಾಶವೆ ಬೀಳಲಿ ಮೇಲೆ…” ಹೀಗೆ, ಜನಪ್ರಿಯ ಗೀತೆಗಳ ಗೊಂಚಲನ್ನೇ ಕನ್ನಡಿಗರಿಗೆ ಉಡುಗೊರೆಯಾಗಿ ಕೊಟ್ಟವರು ರಾಜನ್‌-ನಾಗೇಂದ್ರ. ಎಲ್ಲ ಅರ್ಥದಲ್ಲೂ ಅವರು ಸಂಗೀತ ಸಾರ್ವಭೌಮರು, ಮಾಧುರ್ಯದ ಮಹಾನುಭಾವರು.

1960ರಿಂದ 1980ರವರೆಗೆ ಚಿತ್ರಗೀತೆಗಳನ್ನು ಕೇಳಲೆಂದು ರೇಡಿಯೋ ಹಾಕಿದರೆ ಸಾಕು; ದಿನಕ್ಕೆ ಎರಡು ಬಾರಿಯಾದರೂ- “”ಸಂಗೀತ ನಿರ್ದೇಶನ: ರಾಜನ್‌-ನಾಗೇಂದ್ರ” ಎಂಬ ಮಾತುಗಳನ್ನು ಕೇಳಲೇಬೇಕಾಗಿತ್ತು. ಅಷ್ಟರಮಟ್ಟಿಗೆ, ಚಿತ್ರಗೀತೆಗಳನ್ನು ಈ ಜೋಡಿ ಆವರಿಸಿ ಕೊಂಡಿತ್ತು. ರವಿವಾರ ರಾಜನ್‌ ನಿಧನರಾದಾಗ- “”ಕನ್ನಡ ಚಿತ್ರಗೀತೆಗಳ ಸುವರ್ಣ ಯುಗದ ಕೊನೆಯ ಕೊಂಡಿ ಕಳಚಿತು”- ಎಂಬುದೇ ಹೆಚ್ಚಿನವರ ಉದ್ಗಾರವಾಗಿತ್ತು. ಆ ಮಾತುಗಳನ್ನು ಕೇಳುತ್ತಿದ್ದಂತೆಯೇ, ರಾಜನ್‌-ನಾಗೇಂದ್ರ ರಾಗ ಸಂಯೋಜನೆಯ ಹಾಡುಗಳು ಮತ್ತು ಅವು ಪಡೆದಿದ್ದ ಜನಪ್ರಿಯತೆ ಕಣ್ಮುಂದೆ ಬಂದು ಹೋಯಿತು.

ಅವರಿಬ್ರೂ ಫ್ರೆಂಡ್ಸ್ ಅಂತೆ… ಅವಳಿ- ಜವಳಿ ಅಂತೆ… ಹತ್ತಿರದ ಬಂಧುಗಳಂತೆ…ರಾಜನ್‌-ನಾಗೇಂದ್ರ ಅವರನ್ನು ಕುರಿತು ಜನ, ತಮ್ಮ ತಮ್ಮಲ್ಲಿಯೇ ಹೀಗೆ ಮಾತಾಡುತ್ತಾ, ತಮಗೆ ಒಪ್ಪಿಗೆ ಆದದ್ದನ್ನೇ ಸತ್ಯ ಎಂದು ನಂಬಿದ್ದ ದಿನಗಳಿದ್ದವು. ಅವರು ಗೆಳೆಯರಲ್ಲ, ಅವಳಿಗಳಲ್ಲ, ಸ್ವಂತ ಅಣ್ಣ- ತಮ್ಮ! ರಾಜನ್‌ ದೊಡ್ಡವರು, ನಾಗೇಂದ್ರ ಚಿಕ್ಕವರು. ರಾಗ ಸಂಯೋಜನೆಯಲ್ಲಿ ರಾಜನ್‌ ಪಳಗಿದ್ದಾರೆ. ಆರ್ಕೆಸ್ಟ್ರಾ ಮತ್ತು ರೆಕಾರ್ಡಿಂಗ್‌ ವಿಷಯವಾಗಿ ನಾಗೇಂದ್ರ ಹೆಚ್ಚಿನ ತಿಳಿವಳಿಕೆಯಿದೆ ಎಂಬ ಸಂಗತಿಗಳು ಅರ್ಥವಾಗುವ ಹೊತ್ತಿಗೆ, ಈ ಸೋದರರು ರಾಗ ಸಂಯೋಜಿಸಿದ್ದ ಹಾಡುಗಳು ಎಲ್ಲರಿಗೂ ಬಾಯಿ ಪಾಠ ಆಗಿಹೋಗಿದ್ದವು.

Advertisement

ಇಂಪಾದ ಸಂಗೀತದ ಮೂಲಕ ಪೂರ್ತಿ 45 ವರ್ಷಗಳ ಕಾಲ ಕನ್ನಡ ಚಿತ್ರಗೀತೆಗಳ ಸೊಗಸು ಹೆಚ್ಚಿಸಿದ ರಾಜನ್‌- ನಾಗೇಂದ್ರ ಅವರು ಮೈಸೂರಿನವರು. ಇವರ ತಂದೆಯ ಹೆಸರು ರಾಜಪ್ಪ. ಅವರೂ ಸಂಗೀತಗಾರರು. ಅವರಿಗೆ ಹಾರ್ಮೋನಿಯಂ ಮತ್ತು ಕೊಳಲು ವಾದನದಲ್ಲಿ ಒಳ್ಳೆಯ ಹೆಸರಿತ್ತು.

ಮನೆಯಲ್ಲಿ ಸಂಗೀತದ ವಾತಾವರಣವಿದ್ದುದರಿಂದ, ರಾಜನ್‌- ನಾಗೇಂದ್ರ ಬಾಲ್ಯದಿಂದಲೇ ಸಂಗೀತ ಕಲಿಕೆ ಯೆಡೆಗೆ ಆಕರ್ಷಿತರಾದರು. ರಾಜನ್‌ಗೆ ವಯಲಿನ್‌ – ನಾಗೇಂದ್ರ ಅವರಿಗೆ ಜಲತರಂಗ್‌ ಜತೆಯಾಯಿತು. ಬಾಲ್ಯದಲ್ಲಿ ಪಿಟೀಲು ಚೌಡಯ್ಯ ಅವರಂಥ ಘನ ವಿದ್ವಾಂಸರಿಂದ ಪಾಠ ಹೇಳಿಸಿಕೊಂಡ ಈ ಜೋಡಿ, ಅನಂತರ ವಿದ್ಯಾಭ್ಯಾಸದ ಕಾರಣಕ್ಕೆ ಬೆಂಗಳೂರಿಗೆ ಬಂತು. ಆ ನಂತರದಲ್ಲಿ ಕೆಲ ಕಾಲ ಜೈ ಮಾರುತಿ ಆರ್ಕೆಸ್ಟ್ರಾ ತಂಡದಲ್ಲಿ ಕೆಲಸ ಮಾಡಿದ ರಾಜನ್‌ – ನಾಗೇಂದ್ರ, ಕೆಲಕಾಲ ಪಿ.ಕಾಳಿಂಗರಾವ್‌ ಅವರ ತಂಡದಲ್ಲೂ ಕೆಲಸ ಮಾಡಿದರು. ಮುಂದೆ 1952ರಲ್ಲಿ, ಬಿ. ವಿಠಲಾಚಾರ್ಯ ನಿರ್ದೇಶನದ “ಸೌಭಾಗ್ಯ ಲಕ್ಷ್ಮೀ’ ಚಿತ್ರಕ್ಕೆ ಸಂಗೀತ ನೀಡುವ ಅವಕಾಶ ದೊರೆಯಿತು. ಆ ನಂತರದಲ್ಲಿ ರಾಜನ್‌- ನಾಗೇಂದ್ರ ಹಿಂದಿರುಗಿ ನೋಡಲಿಲ್ಲ.

ಹೂವಿನ ಹಾಸಿಗೆ ಆಗಿರಲಿಲ್ಲ…
ಹಾಗಂತ, ಈ ಸೋದರರು ನಡೆದುಬಂದ ಹಾದಿ ಹೂವಿನ ಹಾಸಿಗೆ ಆಗಿರಲಿಲ್ಲ. ಆ ದಿನಗಳಲ್ಲಿ ವರ್ಷಕ್ಕೆ 10-20 ಚಿತ್ರಗಳಷ್ಟೇ ತಯಾರಾಗುತ್ತಿದ್ದವು. ಸಂಗೀತ ಕ್ಷೇತ್ರದ ದಿಗ್ಗಜರಾಗಿದ್ದ ಜಿ.ಕೆ. ವೆಂಕಟೇಶ್‌, ಟಿ.ಜಿ. ಲಿಂಗಪ್ಪ, ಉಪೇಂದ್ರ ಕುಮಾರ್‌, ಎಂ. ರಂಗರಾವ್‌, ವಿಜಯ ಭಾಸ್ಕರ್‌… ಮುಂತಾದ ಘಟಾನುಘಟಿಗಳಿದ್ದರು. ಆಗ ತಮ್ಮ ಸಾಮರ್ಥ್ಯವನ್ನು ಪಣಕ್ಕಿಟ್ಟ ರಾಜನ್‌-ನಾಗೇಂದ್ರ, ನಿರೀಕ್ಷೆ ಮೀರಿ ಯಶಸ್ಸು ಸಾಧಿಸಿದರು.

ಕಡಿಮೆ ವಾದ್ಯಗಳನ್ನು ಬಳಸಿ ಸುಮಧುರ ಗೀತೆಗಳನ್ನು ಸೃಷ್ಟಿಸಿದ್ದು ರಾಜನ್‌- ನಾಗೇಂದ್ರ ಅವರ ಹೆಗ್ಗಳಿಕೆ. ಮಾಮರವೆಲ್ಲೋ ಕೋಗಿಲೆಯೆಲ್ಲೋ, ಆಸೆಯ ಭಾವ ಒಲವಿನ ಜೀವ.., ಆಕಾಶ ದೀಪವು ನೀನು…, ಒಮ್ಮೆ ನಿನ್ನನ್ನೂ ಕಣ್ತುಂಬಾ…ಗೀತೆಗಳನ್ನು ಈ ಮಾತಿಗೆ ಉದಾಹರಣೆಯಾಗಿ ನೀಡಬಹುದು. ಅಂತೆಯೇ, ಹೆಚ್ಚು ವಾದ್ಯಗಳನ್ನು ಬಳಸಿದಾಗ ಕೂಡ ಹಾಡಿನ ಇಂಪು ಹೆಚ್ಚುವಂತೆ ಮಾಡಿದ್ದು ಈ ಸೋದರರ ಹೆಚ್ಚುಗಾರಿಕೆ. ಈ ಮಾತಿಗೆ – ತಂನಂ ತಂನಂ ನನ್ನೀ ಮನಸು…, ನಾವಾಡುವ ನುಡಿಯೇ ಕನ್ನಡ ನುಡಿ…, ಎಲ್ಲೆಲ್ಲಿ ನೋಡಲಿ…ಗೀತೆಗಳು ಸಾಕ್ಷಿಯಾಗಬಲ್ಲವು. “”ಇಂದು ಎನಗೆ ಗೋವಿಂದ.’ ಗೀತೆಯನ್ನು ಎರಡು ಕನಸು, ಶ್ರೀನಿವಾಸ ಕಲ್ಯಾಣ ಚಿತ್ರಗಳಲ್ಲಿ ಬಳಸಿ, ಎರಡೂ ಕಡೆ ಅದು ಹಿಟ್‌ ಆಗುವಂತೆ ನೋಡಿಕೊಂಡದ್ದು ಈ ಸೋದರರ ಪ್ರಚಂಡ ಆತ್ಮವಿಶ್ವಾಸಕ್ಕೆ ಸಾಕ್ಷಿ. ಇದಲ್ಲದೆ, ಮತ್ತೂಂದು ವಿನೂತನ ಪ್ರಯೋಗವನ್ನೂ ರಾಜನ್‌-ನಾಗೇಂದ್ರ ಮಾಡಿದರು. ಅದನ್ನು ತಿಳಿಯಬೇಕೆಂದರೆ, ಗಂಧದ ಗುಡಿ ಚಿತ್ರದ- “”ಎಲ್ಲೂ ಹೋಗಲ್ಲ, ಮಾಮ…” ಗೀತೆಯನ್ನು ಆಲಿಸ ಬೇಕು. ಅದರಲ್ಲಿ ಹಾಡು ಅರ್ಧ ಮುಗಿದಿ ¨ªಾಗ, ಒಂದು ಕ್ಷಣ ಎಲ್ಲ ವಾದ್ಯ ಗಳ ಸದ್ದೂ ನಿಂತುಹೋಗುತ್ತದೆ. ಆಗಲೇ – “”ಅಪ್ಪ ಇಲ್ಲ ಅಮ್ಮ ಇಲ್ಲ ನೀನೇ ನನಗೆಲ್ಲ…” ಎಂಬ ಸಾಲು ಕೇಳುತ್ತದೆ. ಆಗ ಹೊರಡುವುದು ಶೋಕದ ಸ್ವರ. ಅದನ್ನು ಹೊರಡಿಸು ವವರು ಸಂಗೀತ ನಿರ್ದೇಶಕರಲ್ಲ, ಹಾಡು ಕೇಳುವ ಪ್ರೇಕ್ಷಕರು! ವಾದ್ಯದ ಸದ್ದೇ ನಿಲ್ಲಿಸಿ, ಆ ಜಾಗದಲ್ಲಿ ಕೇಳುಗರ ಗದ್ಗದ ದನಿಯೇ ಜಾಗ ಪಡೆಯುವಂತೆ ಮಾಡಿದರಲ್ಲ- ಅದು ಅವರ ಸ್ವರ ಸಂಯೋಜನೆಗಿದ್ದ ತಾಕತ್ತು.

ನಮ್ಮೂರು ಮೈಸೂರು…
“”ಸಾರ್‌, ಸ್ವಲ್ಪವೂ ಟೆನ್ಷನ್‌ ಇಲ್ಲದೇ ತಮಾಷೆಯ ಮೂಡ್‌ನ‌ಲ್ಲಿ ಇದ್ದುಕೊಂಡು ರಾಗ ಸಂಯೋಜನೆ ಮಾಡಿದ ಹಾಡು ಯಾವುದಾದ್ರೂ ಇದೆಯಾ?- ಹೀಗೊಂದು ಪ್ರಶ್ನೆಯನ್ನೂ ರಾಜನ್‌ ಅವರಿಗೆ ಒಮ್ಮೆ ಕೇಳಿದ್ದುಂಟು. ಅವರು ಹೇಳಿದ್ದರು. “”ನಮ್ಮದು ಮೈಸೂರು. ಅಂಥಾ ಮೈಸೂರಿನ ಬಗ್ಗೆ ಒಂದು ಹಾಡಿಗೆ ಸಂಗೀತ ಸಂಯೋಜಿಸಬೇಕಾಗಿ ಬಂತು. ಅದು, ದ್ವಾರಕೀಶ್‌ ನಿರ್ಮಾಣದ – “ಪ್ರೀತಿ ಮಾಡು ತಮಾಷೆ ನೋಡು’ ಚಿತ್ರದಲ್ಲಿ- “”ನಮ್ಮೂರು ಮೈಸೂರು, ನಿಮ್ಮೂರು ಯಾವೂರು…?”- ಗೀತೆಯಿದೆ. ಸ್ವಾರಸ್ಯವೆಂದರೆ, “”ದ್ವಾರಕೀಶ್‌ ಕೂಡ ಮೈಸೂರಿನವನೇ. ಆ ಹಾಡಿಗೆ ರಾಗ ಸಂಯೋಜಿಸುವಾಗ, ಚಿಕ್ಕಂದಿನಲ್ಲಿ ಓಡಾಡಿದ್ದ ಜಾಗಗಳೆಲ್ಲಾ ಕಣ್ಮುಂದೆ ಬಂದಂತೆ ಆಗಿ ಖುಷಿ ಆಗಿಬಿಡು¤. ಯಾವುದೇ ಟೆನ್ಷನ್‌ ಇಲ್ಲದೇ ಕಂಪೋಸ್‌ ಮಾಡಿದ ಹಾಡು ಅದು… ”

ಸಲ್ಲಬೇಕಿದ್ದ ಗೌರವ ಸಂದಿತಾ?
ರಾಜನ್‌- ನಾಗೇಂದ್ರ ಅವರು ಪೂರ್ತಿ 45 ವರ್ಷಗಳ ಕಾಲ ಕನ್ನಡಿಗರಿಗೆ ಸುಮಧುರ ಗೀತೆಗಳನ್ನು ಕೇಳಿಸಿದರು. ಆ ಮೂಲಕ ಚಿತ್ರರಂಗಕ್ಕೆ ಅಸಾಧಾರಣ ಕೊಡುಗೆ ನೀಡಿದರು. ಚಿತ್ರಗಳ ಯಶಸ್ಸಿಗೆ, ನಾಯಕ- ಗಾಯಕರು ಖ್ಯಾತಿ ಪಡೆಯಲು ಕಾರಣರಾದರು. ಅದಕ್ಕೆ ಪ್ರತಿಯಾಗಿ ಅವರಿಗೆ ಸಲ್ಲಬೇಕಿದ್ದ ಗೌರವ ಸಂದಿತಾ? ಇಲ್ಲ ಎಂದೇ ಹೇಳಬೇಕಾಗುತ್ತದೆ. ಸ್ವಾಭಿಮಾನಿಯಾಗಿದ್ದ ರಾಜನ್‌ ಈ ಬಗ್ಗೆ ಎಲ್ಲೂ ಏನನ್ನೂ ಹೇಳಿಕೊಳ್ಳಲಿಲ್ಲ. ನಮ್ಮ ಕೆಲಸವನ್ನು ನಾವು ನಿರ್ವಂಚನೆಯಿಂದ ಮಾಡಿದ್ದೇವೆ. ದಕ್ಕದೇ ಹೋಗಿದ್ದರ ಬಗ್ಗೆ ಹೇಳಿ ಪ್ರಯೋಜನವೇನು ಎಂಬರ್ಥದ ಮಾತಾಡಿದ್ದರು. ರಾಗಗಳ ಜತೆಗೇ ಬದುಕಿದ, ಮಾಧುರ್ಯ ಎಂಬ ಮಾತಿಗೊಂದು ಹೊಸ ಅರ್ಥ ನೀಡಿದ, ಆ ಮೂಲಕ ಚಿತ್ರರಂಗವನ್ನು ಶ್ರೀಮಂತ ಗೊಳಿಸಿದ ರಾಜನ್‌ ಅವರು ನಮ್ಮನ್ನು ಅಗಲಿದ್ದಾರೆ ಎನ್ನಲು ಮನಸ್ಸು ಒಪ್ಪು ವುದಿಲ್ಲ. ಅವರ ಸಂಯೋಜನೆಯ ನೂರಾರು ಹಾಡುಗಳ ಮೂಲಕ ಅವರು ಸದಾ ನಮ್ಮ ಜತೆಗೇ ಇರುತ್ತಾರೆ.

ಎ.ಆರ್‌.ಮಣಿಕಾಂತ್‌

Advertisement

Udayavani is now on Telegram. Click here to join our channel and stay updated with the latest news.

Next