ಹುಣಸೂರು: ಶಾಸಕ ಎಚ್.ಡಿ.ರೇವಣ್ಣನ ಕಡೆಯವರು ಅಪಹರಿಸಿದ್ದಾರೆ ಎನ್ನಲಾಗಿದ್ದ ಮಹಿಳೆಯನ್ನು ಎಸ್‌ಐಟಿ ತಂಡ ಪತ್ತೆ ಮಾಡಿದೆ.
ಪ್ರಕರಣದ ಬೆನ್ನತ್ತಿದ ಎಸ್‌ಐಟಿ ತಂಡ ಆಕೆಗೆ ಎಚ್.ಡಿ.ರೇವಣ್ಣನವರ ಬಳಿ ಈ ಹಿಂದೆ ಆಪ್ತ ಕಾರ್ಯದರ್ಶಿಯಾಗಿದ್ದ ಹುಣಸೂರು ತಾಲೂಕಿನ ಕಾಳೇನ ಹಳ್ಳಿಯ ರಾಜಗೋಪಾಲರ ತೋಟದ ಮನೆಯಲ್ಲಿ ಆಶ್ರಯ ಕಲ್ಪಿಸಲಾಗಿದೆ ಎಂಬ ಸುಳಿವಿನಂತೆ, ಶುಕ್ರವಾರ ಮಧ್ಯರಾತ್ರಿ 20 ಮಂದಿಯ ಪೊಲೀಸರ ತಂಡ ಭೇಟಿ ನೀಡಿ ಪರಿಶೀಲಿಸಿತು. ಆದರೆ ಆಕೆಯ ಸುಳಿವು ಸಿಕ್ಕಿರಲಿಲ್ಲ.
ಶನಿವಾರವೂ ತೋಟದಲ್ಲಿ ಬೆಳ್ಳಂ ಬೆಳಗ್ಗೆ ತೀವ್ರ ಶೋಧಿಸಿದರೂ ಮಹಿಳೆ ಸುಳಿವು ಸಿಕ್ಕಿರಲಿಲ್ಲ. ಕೊನೆಗೆ ಕಾರ್ಮಿಕರನ್ನು ವಿಚಾರಿಸಿದಾಗ, ಈಕೆಯನ್ನು ಪಕ್ಕದ ಕಾಫಿ ತೋಟದ ಮನೆಯಲ್ಲಿ ಬಚ್ಚಿಡಲಾಗಿದೆ ಎಂಬ ಮಾಹಿತಿ ಸಿಕ್ಕಿತು. ಆದರೆ ತೋಟವನ್ನೆಲ್ಲ ತಡಕಾಡಿದರೂ ಪ್ರಯೋಜನವಾಗಲಿಲ್ಲ.
ಎಸ್‌ಐಟಿ ಪೊಲೀಸರು ಬರುವ ಸುಳಿವರಿತು, ತೋಟದಿಂದ ಪಕ್ಕದ ಹೊಸ ವಾರಂಚಿ ಕಡೆಯಿಂದ ಖಾಸಗಿ ವಾಹನದಲ್ಲಿ ಹುಣಸೂರಿಗೆ ಬಂದು ಲಾಲ್‌ಬಂದ್ ಬೀದಿಯ ಮನೆಯೊಂದರಲ್ಲಿ ಆಶ್ರಯ ಪಡೆದಿದ್ದರು. ಈ ಬಗ್ಗೆ ಖಚಿತ ಮಾಹಿತಿ ಪಡೆದು ಮನೆ ಮೇಲೆ ದಾಳಿ ನಡೆಸಿ ಪೊಲೀಸರು ಆಕೆಯನ್ನು ವಶಕ್ಕೆ ಪಡೆದು ವಿಚಾರಣೆಗಾಗಿ ಕರೆದೊಯ್ದಿದ್ದಾರೆ.
ಮಹಿಳೆ ಅಲ್ಲಿಂದ ತಪ್ಪಿಸಿಕೊಂಡು ಬಂದರೋ ಅಥವಾ ರೇವಣ್ಣ ಕಡೆಯವರೇ ಸ್ಥಳಾಂತರ ಮಾಡಿದರೋ ಎಂಬುದು ತಿಳಿದುಬಂದಿಲ್ಲ. ಈ ನಡುವೆ ತೋಟದ ಮಾಲಕ ರಾಜಗೋಪಾಲ್ ಹಾಗೂ ಕೆಲವರನ್ನು ವಿಚಾರಣೆಗಾಗಿ ಕರೆದೊಯ್ದಿದ್ದಾರೆ ಎಂದು ತಿಳಿದುಬಂದಿದೆ.