ವಿಜಯ್ ರಾಘವೇಂದ್ರ ಅಭಿನಯದ “ರಾಜ ಲವ್ಸ್ ರಾಧೆ’ ಚಿತ್ರ ಎಲ್ಲವೂ ಅಂದುಕೊಂಡಂತೆ ಆಗಿದ್ದರೆ, ಮೇ.18 ರಂದು (ನಾಳೆ) ತೆರೆಗೆ ಬರಬೇಕಿತ್ತು. ಆದರೆ, ಕಾರಣಾಂತರದಿಂದ ಚಿತ್ರ ಮುಂದಕ್ಕೆ ಹೋಗಿದೆ. ಈ ವಾರ ಚಿತ್ರ ತೆರೆಗೆ ಬರಲಿದೆ ಎಂದು ಇತ್ತೀಚೆಗಷ್ಟೇ ಚಿತ್ರತಂಡ ಪತ್ರಿಕಾಗೋಷ್ಠಿ ನಡೆಸಿ ವಿಷಯ ತಿಳಿಸಿತ್ತು. ಅಲ್ಲದೆ, ಪ್ರಚಾರ ಕಾರ್ಯವನ್ನೂ ಶುರುವಿಟ್ಟುಕೊಂಡಿತ್ತು. ಆದರೆ, ಮೇ.18 ರಂದು ತೆರೆಗೆ ಬರದಿರಲು ಬಲವಾದ ಕಾರಣ, ಚಿತ್ರಮಂದಿರಗಳು.
ಈ ಕುರಿತು ಮಾತನಾಡುವ ನಿರ್ಮಾಪಕ ಎಚ್.ಎಲ್.ಎನ್.ರಾಜ್, “ಕಳೆದ ಐದಾರು ತಿಂಗಳಿನಿಂದಲೂ ಚಿತ್ರ ಬಿಡುಗಡೆಗೆ ಸಜ್ಜಾಗಿದ್ದೆವು. ಒಳ್ಳೆಯ ಚಿತ್ರಮಂದಿರಗಳನ್ನು ಆಯ್ಕೆ ಮಾಡಬೇಕೆಂಬ ಕಾರಣಕ್ಕೆ, ಚಿತ್ರ ತಡವಾಗುತ್ತ ಬಂತು. ಕೊನೆಗೆ ಚುನಾವಣೆ ಅನೌನ್ಸ್ ಆಗಿದ್ದರಿಂದ ಚಿತ್ರವನ್ನು ಚುನಾವಣೆ ಬಳಿಕ ಬಿಡುಗಡೆ ಮಾಡುವ ನಿರ್ಧಾರ ಮಾಡಿ, ಮೇ.18 ರಂದೇ ಚಿತ್ರವನ್ನು ಬಿಡುಗಡೆ ಮಾಡುವುದಾಗಿ ಘೋಷಿಸಿದ್ದೆ.
ಆದರೆ, ಅಂದು ಬೇರೆ ಚಿತ್ರಗಳೂ ತೆರೆ ಕಾಣುತ್ತಿವೆ. ನಾವು ಸೆಟ್ ಮಾಡಿದ ಕೆಲ ಚಿತ್ರಮಂದಿರಗಳು ಕೈ ತಪ್ಪಿದವು. “ರಾಜ ಲವ್ಸ್ ರಾಧೆ’ ಚಿತ್ರವನ್ನು ಸುಮಾರು 120 ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಲು ಎಲ್ಲಾ ತಯಾರಿ ಮಾಡಿಕೊಳ್ಳಲಾಗಿತ್ತು. ಆದರೆ, ಬೇರೆ ಚಿತ್ರ ಬಿಡುಗಡೆಯ ದಿನಾಂಕ ಘೋಷಿಸಿ ಬಂದಿದ್ದರಿಂದ ಕೆಲ ಚಿತ್ರಮಂದಿರಗಳ ಸಂಖ್ಯೆ ಕುಂಠಿತವಾಯ್ತು. ಕೊನೆಗೆ, ಒದ್ದಾಡಿಕೊಂಡು ಬರುವುದು ಬೇಡ.
ಆ ಬಳಿಕ ನಾವು ಇನ್ನಷ್ಟು ಚಿತ್ರಮಂದಿರಗಳ ಆಯ್ಕೆ ಮಾಡಿಕೊಂಡು ಆ ನಂತರ ರಾಜ್ಯಾದ್ಯಂತ ಬಿಡುಗಡೆ ಮಾಡಲು ನಿರ್ಧರಿಸಿದ್ದೇನೆ. ಚಿತ್ರದ ಬಿಡುಗಡೆಯನ್ನು ಒಂದು ವಾರಕ್ಕೆ ಮುಂದಕ್ಕೆ ಹಾಕಿದ್ದು, ಇನ್ನಷ್ಟು ಪ್ರಚಾರಕ್ಕೆ ಅವಕಾಶವೂ ಸಿಕ್ಕಂತಾಗಿದೆ. ಎಲ್ಲೆಡೆ ಪ್ರಚಾರ ಮಾಡಿದ ಬಳಿಕ ನಾವು ಅಂದುಕೊಂಡಷ್ಟೇ ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡುವುದಾಗಿ’ ಹೇಳುತ್ತಾರೆ ನಿರ್ಮಾಪಕ ಎಚ್.ಎಲ್.ಎನ್.ರಾಜ್.
“ರಾಜ ಲವ್ಸ್ ರಾಧೆ’ ಚಿತ್ರವನ್ನು ರಾಜಶೇಖರ್ ನಿರ್ದೇಶಿಸಿದ್ದು, ಚಿತ್ರಕ್ಕೆ ಅವರೇ ಕಥೆ ಹಾಗೂ ಚಿತ್ರಕಥೆಯನ್ನು ರಚಿಸಿದ್ದಾರೆ. ಈ ಚಿತ್ರದಲ್ಲಿ ವಿಜಯ್ ರಾಘವೇಂದ್ರ, ರಾಧಿಕಾ ಪ್ರೀತಿ, ರವಿಶಂಕರ್, ಕುರಿ ಪ್ರತಾಪ್, ಡ್ಯಾನಿ ಕುಟ್ಟಪ್ಪ ಮುಂತಾದವರು ನಟಿಸಿದ್ದು, ವೀರ್ ಸಮರ್ಥ್ ಅವರ ಸಂಗೀತ, ಚಿದಾನಂದ್ ಅವರ ಛಾಯಾಗ್ರಹಣ ಇದೆ.