ಸಿರುಗುಪ್ಪ: ತಾಲೂಕಿನ ತುಂಗಭದ್ರಾ ನದಿ ವ್ಯಾಪ್ತಿಯಲ್ಲಿನ ವಿವಿಧ ಗ್ರಾಮಗಳಲ್ಲಿ ಅಪರೂಪದ ಅತಿಥಿಗಳಾದ ರಾಜಹಂಸ ಪಕ್ಷಿಗಳು ಆಗಮಿಸಿದ್ದು, ಜಿಲ್ಲೆಯಾದ್ಯಂತ ಈ ಅತಿಥಿಗಳನ್ನು ನೋಡಲು ಪಕ್ಷಿ ಪ್ರಿಯರು ಬರುತ್ತಿದ್ದಾರೆ.
ಗಡಿ ಭಾಗದ ಬಾಗೇವಾಡಿ, ದೇಶನೂರು, ನಿಟ್ಟೂರು ಗ್ರಾಮಗಳ ಹತ್ತಿರ ತುಂಗಭದ್ರಾ ನದಿ ಬತ್ತಿ ಹೋಗಿದ್ದರೂ ಅಲ್ಲಲ್ಲಿ ನದಿಯ ಮಡುವಿನಲ್ಲಿ ಉಳಿದುಕೊಂಡಿರುವ ನೀರಿನಲ್ಲಿ ವಲಸೆ ಬಂದಿರುವ 500ಕ್ಕೂ ಹೆಚ್ಚು ಅಪರೂಪದ ರಾಜಹಂಸ ಪಕ್ಷಿಗಳು ಸಾಮೂಹಿಕವಾಗಿ ನದಿ ನೀರಿನಲ್ಲಿ ನಿಂತುಕೊಂಡಿರುವುದು ನೋಡುವುದೇ ಕಣ್ಣಿಗೆ ಹಬ್ಬವಾಗಿದೆ. ಎತ್ತರವಾದ ನಿಲುವು, ಉದ್ದನೆಯ ಕೊಕ್ಕೆ, ನೀಳವಾದ ಕಾಲುಗಳಿಂದ ನಡೆದಾಡುವುದನ್ನು ನೋಡುವುದೇ ಸೊಬಗಾಗಿದ್ದು, ಇವುಗಳು ಸಾಮೂಹಿಕವಾಗಿ ಒಂದಕ್ಕೊಂದು ಗುಂಪಿನಲ್ಲಿ ಹಿಂಡು ಹಿಂಡಾಗಿ ಒಂದು ಕಡೆ ನೀರಿನಲ್ಲಿ ನಿಲ್ಲುವ ಇವುಗಳು ಏನಾದರೂ ಶಬ್ದವಾದರೆ ಒಮ್ಮೆಲೆ ಆಕಾಶಕ್ಕೆ ರೆಕ್ಕೆ ಬಿಚ್ಚಿ ಹಾರುತ್ತವೆ. ಆಗ ಈ ಪಕ್ಷಿಗಳ ಗುಲಾಬಿ ಬಣ್ಣದ ದೇಹದಲ್ಲಿ ರೆಕ್ಕೆಯ ಕೆಳ ಭಾಗದಲ್ಲಿ ಕೆಂಪು ಬಣ್ಣವಿದ್ದು, ಆಕಾಶದಲ್ಲಿ ಗುಲಾಬಿ ಕೆಂಪು ಬಣ್ಣದ ಓಕುಳಿ ಎರಚಿದಂತೆ ಕಾಣುತ್ತದೆ.
ತಾಲೂಕಿನ ನಿಟ್ಟೂರು, ಬಾಗೇವಾಡಿ, ದೇಶನೂರು ಗ್ರಾಮಗಳ ಹತ್ತಿರ ಹರಿಯುವ ತುಂಗಭದ್ರಾ ನದಿಯಲ್ಲಿ ರಾಜಹಂಸ ಪಕ್ಷಿಗಳು ಕಂಡು ಬಂದಿರುವುದು ಪಕ್ಷಿ ಪ್ರಿಯರಲ್ಲಿ ಸಂತಸ ತಂದಿದೆ. ಈ ಪಕ್ಷಿಗಳು ಮಾರ್ಚ್‌ನ ನಂತರ ತಮ್ಮ ಮೂಲ ಸ್ಥಳಗಳಿಗೆ ಸಂತಾನೋತ್ಪತ್ತಿಗಾಗಿ ತೆರಳುತ್ತವೆ. ಜಿಲ್ಲೆಯ ವಿವಿಧ ಭಾಗಗಳ ಪಕ್ಷಿ ತಜ್ಞರು ಇಲ್ಲಿಇ ಭೇಟಿ ನೀಡಿ ರಾಜಹಂಸ ಪಕ್ಷಿಗಳ ವಿವಿಧ ಭಂಗಿಯ ಸುಂದರ ಛಾಯಾಚಿತ್ರಗಳನ್ನು ಕ್ಲಿಕ್ಕಿಸಿಕೊಂಡು ತೆರಳುತ್ತಿರುವುದು ಸಾಮಾನ್ಯವಾಗಿದೆ.
ಹವ್ಯಾಸಿ ಪಕ್ಷಿ ತಜ್ಞ ಅಂದಾನಗೌಡ ದಾನಪ್ಪಗೌಡ್ರ ಮಾತನಾಡಿ, ತಾಲೂಕಿನಲ್ಲಿ ಹರಿಯುವ ತುಂಗಭದ್ರಾ ನದಿ ಪಾತ್ರದ ಮಡುವುಗಳಲ್ಲಿ ನಿಂತಿರುವ ನೀರನ್ನು ಈ ಪಕ್ಷಿಗಳು ತಮ್ಮ ಆವಾಸ ಸ್ಥಾನವನ್ನಾಗಿ ಮಾಡಿಕೊಂಡಿವೆ ಎಂದರು.
ಪಕ್ಷಿ ಪ್ರಿಯ ವಿಜಯ್ ಇಟಗಿಯ ಪರಿಶ್ರಮದಿಂದಾಗಿ ಹಗರಿಬೊಮ್ಮನಹಳ್ಳಿಯ ಅಂಕಸಮುದ್ರ ಹಿನ್ನೀರು ಪ್ರದೇಶವು ರಾಜಹಂಸ ಪಕ್ಷಿಗಳ ಪಕ್ಷಿಧಾಮವಾಗಿ ಸರ್ಕಾರ ಘೋಷಣೆ ಮಾಡಿದೆ. ಅದೇ ರೀತಿ ಇಲ್ಲಿ ಕೂಡ ರಾಜಹಂಸ ಹಕ್ಕಿಗಳ ಪಕ್ಷಿಧಾಮವಾಗಬೇಕು ಎಂದು ಒತ್ತಾಯಿಸಿದ್ದಾರೆ. ಇಲ್ಲಿನ ನದಿ ಪ್ರದೇಶದ ಹಿನ್ನೀರಿನಲ್ಲಿ ನೂರಾರು ಪಕ್ಷಿಗಳು ಶಾಂತರೀತಿಯಿಂದ ಯಾವುದೇ ಆತಂಕವಿಲ್ಲದ ಪ್ರಶಾಂತ ವಾತಾವರಣವಿದ್ದು, ನೆಮ್ಮದಿಯಿಂದ ಒಂದೇ ಕಡೆ ನಿಂತಿರುವುದನ್ನು ಕಾಣಬಹುದಾಗಿದೆ ಎಂದು ಅಂತಾರಾಷ್ಟ್ರೀಯ ಪಕ್ಷಿ ಛಾಯಾಗ್ರಾಹಕ ಬಳ್ಳಾರಿ ಡಾ.ನಾಗರಾಜ ತಿಳಿಸಿದ್ದಾರೆ.