ಮುಂಬೈ: ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 164 ಕ್ಷೇತ್ರಗಳಲ್ಲಿ, ಶಿವಸೇನಾ 124 ಕ್ಷೇತ್ರಗಳಲ್ಲಿ ಸ್ಪರ್ಧಿಸಿತ್ತು. ಕಾಂಗ್ರೆಸ್, ಎನ್ ಸಿಪಿ ಮೈತ್ರಿಕೂಟ 288 ಕ್ಷೇತ್ರಗಳಲ್ಲಿ ಸ್ಪರ್ಧೆಗಿಳಿದಿತ್ತು. ಅಲ್ಲದೇ ರಾಜ್ ಠಾಕ್ರೆ ನೇತೃತ್ವದ ಮಹಾರಾಷ್ಟ್ರ ನವನಿರ್ಮಾಣ್ ಸೇನಾ(ಎಂಎನ್ ಎಸ್) 110 ಸ್ಥಾನಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿತ್ತು.
ಮಹಾರಾಷ್ಟ್ರ ನವ ನಿರ್ಮಾಣ್ ಸೇನಾದ ಮುಖ್ಯಸ್ಥ ರಾಜ್ ಠಾಕ್ರೆ ಪ್ರಭಾವಿ ಮಾತುಗಾರ ಹಾಗೂ ಅಪಾರ ಜನಸ್ತೋಮ ಸೆಳೆಯಬಲ್ಲ ನಾಯಕ. ಆದರೆ ಇಷ್ಟೊಂದು ಜನಪ್ರಿಯತೆ ಹೊಂದಿದ ರಾಜ್ ಠಾಕ್ರೆಗೆ ಅದು ಮತದಾರರನ್ನು ಸೆಳೆಯುವಲ್ಲಿ ವಿಫಲವಾಗಿದೆ ಎಂಬುದು ಈ ಬಾರಿಯ ಚುನಾವಣೆಯಲ್ಲೂ ಸಾಬೀತಾಗಿದೆ.
288 ಸದಸ್ಯ ಬಲದ ವಿಧಾನಸಭೆಯ ಚುನಾವಣೆಯಲ್ಲಿ ರಾಜ್ ಠಾಕ್ರೆಯ ಎಂಎನ್ ಎಸ್ ನಿಂದ 110 ಅಭ್ಯರ್ಥಿಗಳ ಕಣಕ್ಕಿಳಿದಿದ್ದರು ಕೂಡಾ ಒಬ್ಬ ಅಭ್ಯರ್ಥಿ ಮಾತ್ರ ಮುನ್ನಡೆ ಸಾಧಿಸಿರುವುದಾಗಿ ವರದಿ ತಿಳಿಸಿದೆ.
2009ರ ವಿಧಾನಸಭಾ ಚುನಾವಣೆಯಲ್ಲಿ ಎಂಎನ್ ಎಸ್ 13 ಸ್ಥಾನಗಳಲ್ಲಿ ಜಯ ಸಾಧಿಸಿತ್ತು. 2014ರಲ್ಲಿ ಕೇವಲ ಒಂದೇ ಸ್ಥಾನದಲ್ಲಿ ಪಕ್ಷ ಗೆಲುವು ಪಡೆದಿತ್ತು. 2006ರಲ್ಲಿ ರಾಜ್ ಠಾಕ್ರೆ ಶಿವಸೇನಾದಿಂದ ಹೊರಬಂದು ಎಂಎನ್ ಎಸ್ ಸ್ಥಾಪಿಸಿದ್ದರು.
ಶಿವಸೇನಾದ ಆದಿತ್ಯ ಠಾಕ್ರೆಗೆ ಭರ್ಜರಿ ಗೆಲುವು:
ಶಿವಸೇನಾದ ಯುವ ಮುಖಂಡ, ಯುವ ಸೇನಾದ ಮುಖ್ಯಸ್ಥ ಆದಿತ್ಯ ಠಾಕ್ರೆ ಮುಂಬೈಯ ವರ್ಲಿ ವಿಧಾನಸಭಾ ಕ್ಷೇತ್ರದಲ್ಲಿ ಎನ್ ಸಿಪಿಯ ಸುರೇಶ್ ಮಾನೆ ವಿರುದ್ಧ ಭರ್ಜರಿ ಜಯ ಗಳಿಸಿದ್ದಾರೆ. ಇದರೊಂದಿಗೆ ಠಾಕ್ರೆ ಕುಟುಂಬದ ಮೊದಲ ವ್ಯಕ್ತಿ ಚುನಾವಣೆಗೆ ಸ್ಪರ್ಧಿಸಿ ಗೆಲುವು ಸಾಧಿಸಿದ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.