ಏಪ್ರಿಲ್ ಎಂದರೆ ರಾಜ್ ಮಾಸ. ಇದು ಕನ್ನಡ ಸಿನಿಮಾ ಪ್ರಿಯರಿಗೆ ಗೊತ್ತಿರುವ ವಿಚಾರ. ಏಪ್ರಿಲ್ 24 ಡಾ.ರಾಜ್‌ಕುಮಾರ್ ಹುಟ್ಟಿದ ದಿನವಾದರೆ, ಏಪ್ರಿಲ್ 12 ಅವರ ಪುಣ್ಯಸ್ಮರಣೆಯ ದಿನ. ಆದರೆ, ಈ ಬಾರಿ ಏಪ್ರಿಲ್ ತಿಂಗಳು ಸಂಪೂರ್ಣವಾಗಿ ರಾಜ್ ತಿಂಗಳು ಎಂದರೆ ತಪ್ಪಲ್ಲ.
ಅದಕ್ಕೆ ಕಾರಣ ಡಾ.ರಾಜ್ ಪುತ್ರರ ಸಿನಿಮಾಗಳು ಏಪ್ರಿಲ್‌ನಲ್ಲಿ ತೆರೆಕಂಡಿರೋದು ಹಾಗೂ ತೆರೆಕಾಣುತ್ತಿರೋದು. ಈ ಮೂಲಕ ಏಪ್ರಿಲ್ ತಿಂಗಳು ಪರಿಪೂರ್ಣವಾಗಿ ರಾಜ್ ಮಾಸವಾಗಿದೆ. ಎಲ್ಲಾ ಓಕೆ, ಯಾವ್ಯಾವ ಸಿನಿಮಾಗಳು ಎಂದು ನೀವು ಲೆಕ್ಕಹಾಕಬಹುದು.
ಏಪ್ರಿಲ್ ತಿಂಗಳ ಆರಂಭದಲ್ಲಿ ಅಂದರೆ, ಏ.05 ರಂದು ಶಿವರಾಜಕುಮಾರ್ ಅಭಿನಯದ “ಕವಚ’ ಚಿತ್ರ ತೆರೆಕಂಡಿತು. ಇಂದು ಏ.14 ರಂದು ಶಿವರಾಜಕುಮಾರ್ ಮತ್ತೂಂದು ಆ್ಯಕ್ಷನ್ ಚಿತ್ರ “ರುಸ್ತುಂ’ ಟ್ರೇಲರ್ ಬಿಡುಗಡೆಯಾಗುತ್ತಿದೆ. ಇದರ ಜೊತೆಗೆ ಶಿವರಾಜಕುಮಾರ್ ಅವರ ಶ್ರೀಮುತ್ತು ಸಿನಿ ಸರ್ವಿಸ್‌ನಡಿ “ಹನಿಮೂನ್’ ಎಂಬ ಮತ್ತೂಂದು ವೆಬ್ ಸೀರೀಸ್‌ಗೂ ಚಾಲನೆ ನೀಡಲಾಗಿದೆ.
ಇನ್ನು ಏಪ್ರಿಲ್ 12 ಡಾ.ರಾಜ್‌ಕುಮಾರ್ ಅವರ ಪುಣ್ಯಸ್ಮರಣೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಅದರ ಜೊತೆಗೆ ಪುನೀತ್‌ರಾಜಕುಮಾರ್ ತಮ್ಮ ಪಿಆರ್‌ಕೆ ಬ್ಯಾನರ್‌ನಡಿ ನಿರ್ಮಿಸಿರುವ ಚೊಚ್ಚಲ ಚಿತ್ರ “ಕವಲುದಾರಿ’ ಏ.12 ಬಿಡುಗಡೆಯಾಗಿದೆ. ಇಷ್ಟಕ್ಕೆ ರಾಜ್ ಮಾಸದ ವಿಶೇಷತೆ ಮುಗಿಯುವುದಿಲ್ಲ.
ಪುನೀತ್‌ರಾಜಕುಮಾರ್ ಅವರು ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿರುವ “ಪಡ್ಡೆಹುಲಿ’ ಹಾಗೂ ರಾಘವೇಂದ್ರ ರಾಜಕುಮಾರ್ ಪ್ರಮುಖ ಪಾತ್ರದಲ್ಲಿ ನಟಿಸಿರುವ “ತ್ರಯಂಬಕಂ’ ಚಿತ್ರಗಳು ಏಪ್ರಿಲ್ 19 ರಂದು ತೆರೆಕಾಣುತ್ತಿವೆ. ಇನ್ನು, ಏಪ್ರಿಲ್ 24 ವರನಟ ಡಾ.ರಾಜ್ ಕುಮಾರ್ ಅವರ ಹುಟ್ಟುಹಬ್ಬ … ಈ ಏಪ್ರಿಲ್ ಅನ್ನು ರಾಜ್ ಮಾಸ ಎಂದರೆ ತಪ್ಪಲ್ಲ. ರಾಜ್ ಪುತ್ರರ ಸಿನಿಚಟುವಟಿಕೆಗಳು ಈ ತಿಂಗಳಲ್ಲಿ ಹೆಚ್ಚಾಗಿ ನಡೆದಿವೆ.