Advertisement

Muda Case; ಸಿಎಂ ಸಿದ್ದರಾಮಯ್ಯ ತೇಜೋವಧೆ ಖಂಡಿಸಿ 27 ರಂದು ರಾಜಭವನ ಚಲೋ

05:00 PM Aug 24, 2024 | Team Udayavani |

ಕಲಬುರಗಿ: ಸಿಎಂ ಸಿದ್ಧರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡುವಾಗ ಸಂವಿಧಾನದ ಮೂಲ ಆಶಯಗಳನ್ನು ಗಾಳಿಗೆ ತೂರಿದ್ದಾರೆ. ಅಲ್ಲದೆ ರಾಜ್ಯಭವನವನ್ನು ರಾಜಕೀಯ ಕೇಂದ್ರವಾಗಿಸಿದ ಹಿನ್ನೆಲೆಯಲ್ಲಿ ಆ.27 ರಂದು ರಾಜಭವನ‌ ಮುತ್ತಿಗೆ ಹಾಕಲು ರಾಜಭವನ ಚಲೋ ಹಮ್ಮಿಕೊಳ್ಳಲಾಗಿದೆ ಎಂದು

Advertisement

ಕರ್ನಾಟಕ ರಾಜ್ಯ ಶೋಷಿತ ಸಮುದಾಯಗಳ ಮಹಾ ಒಕ್ಕೂಟ ಹಾಗೂ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಒಕ್ಕೂಟದ ರಾಜ್ಯ ಸಂಚಾಲಕ ಅನಂತ ನಾಯಕ್ ಹೇಳಿದರು.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯಪಾಲರಾದ ಥಾವರ್ ಚಂದ ಗೆಹ್ಲೋಟ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮೇಲೆ ಪ್ರಾಸಿಕ್ಯೂಶನ್‌ ಗೆ ಅನುಮತಿ ಕೊಡುವಾಗ ಸಂವಿಧಾನದ ಮೂಲ ತತ್ವಗಳನ್ನು ಹಾಗೂ ಪ್ರಜಾಪ್ರಭುತ್ವದ ಆಶಯಗಳನ್ನು ಸಂಪೂರ್ಣವಾಗಿ ಗಾಳಿಗೆ ತೂರಿದ್ದಾರೆ. ರಾಜಭವನವನ್ನು ಕೋಮುವಾದಿ ರಾಜಕಾರಣ ಮಾಡುತ್ತಿರುವ ಬಿಜೆಪಿ ಮತ್ತು ಫ್ಯೂಡಲ್‌ವಾದಿ ರಾಜಕಾರಣ ಮಾಡುತ್ತಿರುವ ಜೆಡಿಎಸ್ ಪಕ್ಷಗಳ ಕಚೇರಿಯನ್ನಾಗಿ ಪರಿವರ್ತಿಕೊಂಡಿದ್ದಾರೆ ಎಂದರು.

ರಾಜ್ಯಪಾಲರು ಬಿಜೆಪಿ-ಜೆಡಿಎಸ್ ಪಕ್ಷಗಳ ತಾಳಕ್ಕೆ ಕುಣಿಯುತ್ತಿರುವುದಷ್ಟೇ ಅಲ್ಲ ಪಕ್ಷಪಾತಿ ಧೋರಣೆಯನ್ನು ತಾಳಿದ್ದಾರೆ. ಜನರಿಂದ ಆಯ್ಕೆಯಾದ ಸರ್ಕಾರದ ಮುಖ್ಯಸ್ಥರಾಗಿರುವ ಮುಖ್ಯಮಂತ್ರಿಗಳ ವಿರುದ್ಧ ನಡೆಯುತ್ತಿರುವ ಪಿತೂರಿ- ಷಡ್ಯಂತ್ರಗಳ ಭಾಗವಾಗಿದ್ದಾರೆ. ಆ ಮೂಲಕ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ರಚಿಸಿರುವ ಸಂವಿಧಾನವನ್ನು ದುಷ್ಟರು, ಭ್ರಷ್ಟರೂ ಆದ ಬಿಜೆಪಿ-ಜೆಡಿಎಸ್ ಪಕ್ಷಗಳ ಹಿತಾಸಕ್ತಿಗೆ ಅಡ ಇಟ್ಟಿದ್ದಾರೆ ಎಂದು ಆರೋಪಿಸಿದರು.

ಕರ್ನಾಟಕ ಲೋಕಾಯುಕ್ತ, ಎಸ್‌ಐಟಿ ಮುಂತಾದ ತನಿಖಾ ಸಂಸ್ಥೆಗಳೂ ಪ್ರಾಥಮಿಕ ತನಿಖೆಯಲ್ಲಿ ತಪ್ಪಿತಸ್ಥರು ಎಂದು ಸಾಬೀತಾದ ಪ್ರಮುಖ ಕುಮಾರಸ್ವಾಮಿಯವರ ಗಣಿ ಹಗರಣ, ಶಶಿಕಲಾ ಜೊಲ್ಲೆಯವರ ಮೊಟ್ಟೆ ಹಗರಣ, ಜನಾರ್ಧನ ರೆಡ್ಡಿಯವರ ಭೀಕರ ಆಸ್ತಿ ಗಳಿಕೆ, ನಿರಾಣಿಯವರ ಭ್ರಷ್ಟಾಚಾರಗಳ ಕುರಿತು ಪ್ರಾಸಿಕ್ಯೂಷನ್ನಿಗೆ ಅನುಮತಿ ಕೊಡಿ ಎಂದು ರಾಜಭವನಕ್ಕೆ ಕೋರಿಕೆ ಸಲ್ಲಿಸಿ ವರ್ಷಗಳಾದರೂ ಈ ರಾಜ್ಯಪಾಲರು ಈ ಕೋರಿಕೆಗಳನ್ನು ಕಸದ ಬುಟ್ಟಿಗೆ ಎಸೆದು ಪಕ್ಷಪಾತ ಮಾಡಿದ್ದಾರೆ. ಇದುವರೆಗೆ ಒಬ್ಬರ ಮೇಲೂ ವಿಚಾರಣೆಗೆ ಅನುಮತಿ ನೀಡಿಲ್ಲ. ಆದರೆ ಬ್ಲಾಕ್‌ ಮೇಲರ್ ಗಳು, ಕ್ರಿಮಿನಲ್ ಕೇಸುಗಳು ಬಾಕಿ ಇರುವ ಆರೋಪಿಗಳು ಕೊಟ್ಟ ದೂರು-ಅರ್ಜಿಗಳನ್ನು ಸರಿಯಾಗಿ ಪರಿಶೀಲನೆ ಕೂಡ ಮಾಡದೆ ದೂರರ್ಜಿ ಸ್ವೀಕರಿಸಿದ ದಿನವೇ ಕೆಲವೇ ಗಂಟೆಗಳಲ್ಲಿ ಮುಖ್ಯಮಂತ್ರಿಗಳಿಗೆ ಕಾರಣ ಕೇಳುವ ನೋಟೀಸು ನೀಡಿರುತ್ತಾರೆ. ದೂರದಾರರ ಅರ್ಜಿ ಬರೀ ಸುಳ್ಳುಗಳಿಂದ ಕೂಡಿದೆ. ರಾಜ್ಯಪಾಲರು ನೀಡಿರುವ ನೋಟಿಸ್ ದೋಷಪೂರಿತ ಎಂದು ಇಡೀ ಸಚಿವ ಸಂಪುಟ ಚರ್ಚೆ ಮಾಡಿ ನೋಟೀಸನ್ನು ಕೂಡಲೆ ವಿತ್‌ ಡ್ರಾ ಮಾಡುವಂತೆ ನಿರ್ಣಯ ಮಾಡಿ ರಾಜಭವನಕ್ಕೆ ಕಳುಹಿಸಿ ಕೊಟ್ಟಿದ್ದಾರೆ. ಮುಖ್ಯಮಂತ್ರಿಗಳು ಸಹ ದೀರ್ಘವಾದ ಪ್ರತಿಕ್ರಿಯೆಯನ್ನು ಕಳುಹಿಸಿ ಕೊಟ್ಟಿದ್ದಾರೆ. ಇದ್ಯಾವುದನ್ನೂ ಪರಿಗಣಿಸದ ಈ ರಾಜ್ಯಪಾಲರು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಕಿರುಕುಳ ನೀಡಬೇಕೆಂದು ತೀರ್ಮಾನಿಸಿದ್ದಾರೆ ಎಂದರು.

Advertisement

ಸಿಎಂ ಸಿದ್ದರಾಮಯ್ಯನವರು ಮುಡಾ ವಿಚಾರದಲ್ಲಿ ಒಂದು ಸೂಜಿಮೊನೆಯಷ್ಟೂ ತಪ್ಪು ಮಾಡಿಲ್ಲವೆಂದು ಇಡೀ ರಾಜ್ಯದ ಜನ ಹೇಳುತ್ತಿದ್ದಾರೆ ಹಾಗು ಸರ್ಕಾರಿ ದಾಖಲೆಗಳೂ ಹೇಳುತ್ತಿವೆ. ಆದರೆ ರಾಜಕೀಯ ದುರುದ್ದೇಶದಿಂದ ಬಿಜೆಪಿ-ಜೆಡಿಎಸ್‌ಗಳು ಸಿದ್ದರಾಮಯ್ಯನವರನ್ನು ತೇಜೋವಧೆ ಮಾಡುತ್ತಲೇ ಹೊರಟಿದ್ದಾರೆ. ಇತ್ತೀಚೆಗೆ ಪ್ರಕರಣದ ವಿಚಾರಣೆಯಾಗಿ ಹೈಕೋರ್ಟಿನ ನ್ಯಾಯಾಧೀಶರು, ಮುಖ್ಯಮಂತ್ರಿಗಳು ತಪ್ಪು ಮಾಡಿದ್ದಾರಾ? ಯಾವುದಾದರೂ ದಾಖಲೆಗಳು ಇವೆಯಾ? ಎಂದು ಕೇಳಿದಾಗ ವಿರೋಧಿಗಳ ಬಳಿ ಉತ್ತರವೇ ಇರಲಿಲ್ಲ ಎಂದರು.

ಉಚ್ಚ ನ್ಯಾಯಾಲಯವು ನೀಡಿರುವ ಮಧ್ಯಂತರ ತೀರ್ಪಿನಲ್ಲಿ ರಾಜ್ಯಪಾಲರು ನೀಡಿರುವ ಪ್ರಾಸಿಕ್ಯೂಷನ್‌ಗೆ ಅನುಮತಿಯು “Impugned sanction” ಎಂದು ನಮೂದಿಸಲಾಗಿದೆ. ಅಷ್ಟರ ಮಟ್ಟಿಗೆ ರಾಜ್ಯಪಾಲರಿಗೆ ಮುಖಭಂಗವಾಗಿದೆ ಅಲ್ಲವೇ? ಬಿಜೆಪಿ-ಜೆಡಿಎಸ್ ಮತ್ತು ಕೋಮುವಾದಿ, ಜಾತಿವಾದಿ ದುರುಳರೆಲ್ಲಾ ಸೇರಿಕೊಂಡು ಶೋಷಿತ ಸಮುದಾಯಗಳ ಚೈತನ್ಯವನ್ನು ತುಳಿದು ಹಾಕಬೇಕೆಂದು ನಿರ್ಧಾರ ಮಾಡಿವೆ. ಇವರು ಬಡವರ ಪರ ಗ್ಯಾರಂಟಿ ಯೋಜನೆಗಳ ವಿರುದ್ಧ ಇದ್ದಾರೆ. ಆಪರೇಷನ್ ಕಮಲ ಮಾಡಲು ಪ್ರಯತ್ನಿಸಿ ಸೋತು ಹಿಂಬಾಗಿಲ ಮೂಲಕ ಸರ್ಕಾರವನ್ನು ಉರುಳಿಸಲು ಪ್ರಯತ್ನಿಸುತ್ತಿದ್ದಾರೆ. ಅದರ ಭಾಗವಾಗಿಯೆ ನಮ್ಮ ಮುಖ್ಯಮಂತ್ರಿಗಳ ಮೇಲೆ ದಾಳಿ ಪ್ರಾರಂಭಿಸಿದ್ದಾರೆ.

ಕೇಂದ್ರ ಸರ್ಕಾರ ರಾಜಭವನವನ್ನು ದುರ್ಬಳಕೆ ಮಾಡಿ ರಾಜ್ಯ ಸರ್ಕಾರವನ್ನು ಅಸ್ಥಿರಗೊಳಿಸುವ ಕೆಲಸವನ್ನು ಈ ತಕ್ಷಣವೇ ನಿಲ್ಲಿಸಬೇಕು. ಸಂವಿಧಾನ ಮತ್ತು ಒಕ್ಕೂಟ ತತ್ವದ ವಿರೋಧಿಯಾದ ರಾಜ್ಯಪಾಲರನ್ನು ಮೋದಿ ಸರ್ಕಾರ ಕೂಡಲೆ ವಾಪಸ್ಸು ಕರೆಸಿಕೊಳ್ಳಬೇಕು. ಸಿದ್ದರಾಮಯ್ಯರವರ ಪ್ರಾಸಿಕ್ಯೂಷನ್ ಅನುಮತಿ ಹಿಂಪಡೆಯಬೇಕು, ಪ್ರಜಾಪ್ರಭುತ್ವ ಒಕ್ಕೂಟದ ವ್ಯವಸ್ಥೆ ಮತ್ತು ರಾಜ್ಯ ಸರ್ಕಾರದ ಸಾರ್ವಭೌಮತೆಯನ್ನು ಸಂರಕ್ಷಿಸಬೇಕು. ಕನ್ನಡ ನಾಡಿನ ಘನತೆಯನ್ನು ಕಾಪಾಡಬೇಕೆಂದು ಆಗ್ರಹಿಸಿಸಲಾಗುವುದು ಎಂದರು.

ಪತ್ರಿಕಾ ಗೋಷ್ಠಿಯಲ್ಲಿ ಮಹಾಂತೇಶ ಕೌಲಗಿ, ಸುನೀಲ ಮಾರುತಿ ಮಾನಪಡೆ, ಆದರ್ಶ ಯಲ್ಲಪ್ಪ, ನಾಗೇಂದ್ರ ಜವಳಿ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next