ಬಹುಶಃ ಟೋಬಿ(Toby) ಗೆದ್ದಿದ್ದರೆ ನಾನು ಇಷ್ಟೊಂದು ಎನರ್ಜಿಯಲ್ಲಿ ಇರುತ್ತಿರಲಿಲ್ಲ. ಆದರೆ ಆ ಸಿನಿಮಾದ ಸೋಲು ನನ್ನಲ್ಲಿ ಒಂದು ಹೊಸ ಎನರ್ಜಿ ತುಂಬಿದೆ. ಆ ವಿಷಯದಲ್ಲಿ ನನಗೆ ಖುಷಿ ಇದೆ..
– ರಾಜ್ ಬಿ ಶೆಟ್ಟಿ (Raj B Shetty) ನೇರಾನೇರ ಹೀಗೆ ಹೇಳಿದರು. ಸಾಮಾನ್ಯವಾಗಿ ಸಿನಿಮಾದ ಸೋಲನ್ನು ಅರಗಿಸಿಕೊಳ್ಳುವುದು ಕಷ್ಟ. ಅದರಲ್ಲೂ ನಿರೀಕ್ಷಿತ ಸಿನಿಮಾ ಸೋತಾಗ ಆ ಕುರಿತು ಮಾತನಾಡಲು ಅನೇಕರು ಹಿಂದೇಟು ಹಾಕುತ್ತಾರೆ. ಆದರೆ, ರಾಜ್ ಬಿ ಶೆಟ್ಟಿ “ಟೋಬಿ’ಯ ಸೋಲನ್ನು ಒಂದು ಒಳ್ಳೆಯ ಅನುಭವವಾಗಿ, ಕೋರ್ಸ್ ಕರೆಕ್ಷನ್ ಪ್ರಕ್ರಿಯೆ ಎಂಬಂತೆ ತೆಗೆದುಕೊಂಡಿದ್ದಾರೆ. ಈ ಕುರಿತು ಮಾತನಾಡುವ ಅವರು, “ಬಹುಶಃ ಟೋಬಿ ದೊಡ್ಡ ಹಿಟ್ ಆಗುತ್ತಿದ್ದರೆ ನಾನು ಎರಡು ವರ್ಷಕ್ಕೊಂದು ಸಿನಿಮಾ ಮಾಡಿಕೊಂಡು ಇರುತ್ತಿದ್ದೆನೋ ಏನೋ.. ನನ್ನ ಪ್ರಕಾರ ಸೋಲು ತುಂಬಾ ಬ್ಯೂಟಿಫುಲ್ ಅನುಭವ ಕೊಡುತ್ತೆ. ಆ ವಿಷಯದಲ್ಲಿ ನಾನು ಲಕ್ಕಿ. ಸ್ವಲ್ಪ ಸಮಯ ನನಗೂ ಕಷ್ಟವಾಯಿತು. ಇವತ್ತಿನ ನನ್ನ ಈ ಎನರ್ಜಿಗೆ ಟೋಬಿಯ ಸೋಲು ಕಾರಣ. ಆ ಸೋಲು ನನಗೆ ಹೊಸ ಪಾಠ ಕಲಿಸಿದೆ, ಎಲ್ಲಿ ತಪ್ಪಾಗಿದೆ, ಯಾವ ರೀತಿ ತಿದ್ದಿ ಮುಂದೆ ಹೋಗಬೇಕು, ನಮ್ಮ ಯೋಚನಾ ಲಹರಿ ಹೇಗೆ ಬದಲಾಗಬೇಕು ಎಂಬುದನ್ನು ತಿಳಿಸಿದೆ. ಸೋಲು ಇಷ್ಟೊಂದು ಸ್ವತಂತ್ರ್ಯ ಕೊಡುತ್ತೆ ಎಂದು ನಾನು ಯಾವತ್ತೂ ಅಂದುಕೊಂಡಿರಲಿಲ್ಲ’ ಎನ್ನುವುದು ರಾಜ್ ಮಾತು.
ಸೋಲು ಒಂದು ಬ್ಯೂಟಿಫುಲ್ ಅನುಭವ ಆಗಿದ್ದು ಹೇಗೆ ಎಂಬುದನ್ನೂ ರಾಜ್ ವಿವರಿಸುತ್ತಾರೆ. “ಗೆಲುವು ನಿಮಗೆ ಕಾನ್ಫಿಡೆನ್ಸ್ ಮಾತ್ರ ಕಲಿಸುತ್ತೆ. ನೀನು ಮಾಡಿರೋದು ಸರಿ ಎಂಬ ಭಾವ ತರುತ್ತದೆ. ಆದರೆ, ಸೋಲು ಹತ್ತಾರು ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ. ಯಾಕೆ ಹೀಗಾಯ್ತ, ನಾನೇನು ಮಾತನಾಡಿದೆ, ಹೊಸದೇನು ಮಾಡಬೇಕಿತ್ತು,. ಹೀಗೆ ಎಲ್ಲಾ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ. ಆಗ ನಮಗೆ ನಮ್ಮ ಮೂಲದಿಂದ ನಾವೆಲ್ಲಿ ಬದಲಾಗಿದ್ದೇವೆ ಅಂತಹ ಗೊತ್ತಾಗುತ್ತೆ. ಕೋರ್ಸ್ ಕರೆಕ್ಷನ್ ಆದಂತೆ… ನಾವು ಏನೂ ಅಲ್ಲದ ಸಾಮಾನ್ಯರಾಗಿ ಸಿನಿಮಾಕ್ಕೆ ಬಂದಿರುತ್ತೇವೆ.
ಆ ನಂತರ ಒಂದು ಸಕ್ಸಸ್ ಸಿಕ್ಕಾಗ ಸಣ್ಣ ಬದಲಾವಣೆ ಆಗಿರುತ್ತೆ, ಅದು ನಮಗೆ ಕಾಣಿಸಿರಲ್ಲ. ಸೋಲು ಆ ಬದಲಾವಣೆಯನ್ನು ಸರಿಯಾಗಿ ನೋಡಿದರೆ ಕಾಣುವಂತೆ ಮಾಡುತ್ತದೆ. ಸಿನಿಮಾದ ಸೋಲಿನ ವಿಚಾರದಲ್ಲಿ ಯಾವತ್ತಿಗೂ ಜನರನ್ನು ನಾನು ದೂಷಿಸಲ್ಲ. ಸಿನಿಮಾ ನೋಡೋದು ಬಿಡೋದು ಅದು ಅವರ ಸ್ವತಂತ್ರ್ಯ. “ನಿನ್ನ ಪ್ರಯತ್ನದಲ್ಲಿ ನೀನು ಎಡವಿದ್ದೆಲ್ಲಿ ಅದನ್ನು ತಿಳಿದುಕೋ ಎಂಬುದನ್ನು ಸೋಲು ಕಲಿಸುತ್ತೆ’ ಎನ್ನುವ ಮೂಲಕ “ಟೋಬಿ’ ಸೋಲನ್ನು ಹೊಸ ಸಿನಿಮಾ “ಸ್ಫೂರ್ತಿ’ಯಾಗಿ ತೆಗೆದುಕೊಂಡಿದ್ದಾರೆ ರಾಜ್ ಬಿ ಶೆಟ್ಟಿ. ಸದ್ಯ ರಾಜ್ ಬಿ ಶೆಟ್ಟಿ ನಟನೆಯ “ರೂಪಾಂತರ’ ಚಿತ್ರ ತೆರೆಗೆ ಬರಲು ಸಿದ್ಧವಾಗಿದ್ದು, ಜು.26ಕ್ಕೆ ಬಿಡುಗಡೆಯಾಗುತ್ತಿದೆ.