ರಾಮನಗರ: ದೇಶಕ್ಕೆ ಅನ್ನ ನೀಡುವ ಒಕ್ಕಲಿಗರ ಬಗ್ಗೆ ಲಘುವಾಗಿ ಮಾತನಾಡಿದರೆ ನಿಮ್ಮ ಹಲ್ಲುಗಳು ಸಡಿಲಗೊಳ್ಳುತ್ತವೆ ಎಂದು ವಿಚಾರವಾದಿ ಭಗವಾನ್ ಗೆ ರೈತ ಪರ ಹಾಗೂ ಕನ್ನಡಪರ ಸಂಘಟನೆಗಳು ಎಚ್ಚರಿಕೆ ನೀಡಿವೆ.
ಒಕ್ಕಲಿಗ ಸಮುದಾಯದ ಬಗ್ಗೆ ಅವಹೇಳನ ಕಾರಿಯಾಗಿ ಮಾತನಾಡಿರುವ ವಿಚಾರವಾದಿ ಭಗವಾನ್ ವಿರುದ್ದ ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಮತ್ತು ರಾಜ್ಯ ರೈತಸಂಘದ ಕಾರ್ಯಕರ್ತರು ಚನ್ನಪಟ್ಟಣದಲ್ಲಿ ಪ್ರತಿಭಟನೆ ನಡೆಸಿ ಭಗವಾನ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಲಾಯಿತು.
ಚನ್ನಪಟ್ಟಣ ಅಂಚೇಕಚೇರಿ ರಸ್ತೆಯಲ್ಲಿ ಪ್ರತಿಭಟನೆ ನಡೆಸಿದ ಕಾರ್ಯಕರ್ತರು, ಭೂಮಿ ಉತ್ತು ಅನ್ನ ಬೆಳೆಯುವವರು, ನಾಡಿನ ಸಂಸ್ಕೃತಿಯನ್ನು ಉಳಿಸಿ ಬೆಳೆಸುತ್ತಿರುವವರು, ವಿಧಾನಸೌಧ ಕಟ್ಟಿದವರು ಒಕ್ಕಲಿಗರು. ಇಂತಹ ಒಕ್ಕಲಿಗ ಸಮುದಾಯದ ಬಗ್ಗೆ ಬಾಯಿಗೆ ಬಂದಂತೆ ಮಾತನಾಡುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಜಾತಿ ಜನಾಂಗದ ಮಧ್ಯೆ ವೈಷಮ್ಯ ಮೂಡಿಸುತ್ತಿರುವ ಇಂತಹ ಕಿಡಿಗೇಡಿ ವಿರುದ್ಧ ಪ್ರಕರಣ ದಾಖಲಿಸಿ ಜೈಲಿಗೆ ಹಾಕುವುದನ್ನು ಬಿಟ್ಟು ಸರ್ಕಾರ ರಕ್ಷಣೆ ನೀಡುತ್ತಿರುವುದು ಸರಿಯಲ್ಲ. ಕೂಡಲೇ ಸರ್ಕಾರ ಇವರನ್ನು ಬಂಧಿಸಿ ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಭಗವಾನ್ ವಿರುದ್ಧ ಘೋಷಣೆ ಕೂಗಿ ಆಕ್ರೋಶ ಹೊರ ಹಾಕಿದ ಪ್ರತಿಭಟನಾ ಕಾರರು ಕೂಡಲೇ ಬಹಿರಂಗವಾಗಿ ನಾಡಿನ ಒಕ್ಕಲಿಗ ಸಮುದಾಯದ ಕ್ಷಮೆಕೋರಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ರೈತ ಸಂಘದ ವಿಭಾಗೀಯ ಉಪಾಧ್ಯಕ್ಷ ಕೆ.ಮಲ್ಲಯ್ಯ, ಕಸ್ತೂರಿ ಕರ್ನಾಟಕ ಜನಪರ ವೇದಿಕೆ ರಾಜ್ಯಾಧ್ಯಕ್ಷ ರಮೇಶ್ ಗೌಡ, ಮುಖಂಡರಾದ ರೈತ ಕನ್ನಸಂದ್ರ ರಾಜು, ತಿಮ್ಮೇಗೌಡ, ರಾಮೇಗೌಡ, ಬೇವೂರು ಯೋಗೀಶ್ ಗೌಡ ಮುಂತಾದವರು ಉಪಸ್ಥಿತರಿದ್ದರು.